ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಯುವಕರ ಭವಿಷ್ಯಕ್ಕೆ ಅಡಿಪಾಯ ಹಾಕಲಿ

ಆಡಳಿತ ಪಕ್ಷಕ್ಕೆ ಮತ ಹಾಕದವರು ದೇಶ ವಿರೋಧಿಗಳಲ್ಲ
Last Updated 4 ಜನವರಿ 2020, 15:48 IST
ಅಕ್ಷರ ಗಾತ್ರ

ಬೀದರ್‌: ‘ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಸಿಎಎ, ಎನ್‌ಆರ್‌ಸಿಗಳಿಗೆ ನೋಂದಣಿ ಮಾಡಿಕೊಳ್ಳುವ ಬದಲು ನಿರುದ್ಯೋಗಿಗಳ ಹೆಸರು ನೋಂದಣಿ ಮಾಡಿಕೊಂಡರೆ ದೇಶದ ಯುವಕರ ಭವಿಷ್ಯಕ್ಕೆ ಅಡಿಪಾಯ ಹಾಕಿದಂತೆ ಆಗಲಿದೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್‌ ರಾಜ್ಯ ಸಲಹಾ ಸಮಿತಿ ಸದಸ್ಯ ಮಹಮ್ಮದ್‌ ಆಸೀಫುದ್ದಿನ್ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಸ್ನೇಹಕೂಟದಲ್ಲಿ ಮಾತನಾಡಿದ ಅವರು, ‘ಆಡಳಿತ ಪಕ್ಷವು ವಿರೋಧ ಪಕ್ಷಗಳಿಗೆ ಪ್ರಚೋದನೆಯ ಹಣೆಪಟ್ಟಿ ಕಟ್ಟಿ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವುದು ಅಲ್ಪಸಂಖ್ಯಾತರಲ್ಲಿ ಆತಂಕ ಸೃಷ್ಟಿಸಿದೆ’ ಎಂದರು.

‘ಹಲವು ಧರ್ಮ, ಜಾತಿ, ವರ್ಗ ಹಾಗೂ ಸಮುದಾಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಭಾರತ ವಿಶ್ವಕ್ಕೆ ಕಿರೀಟ ಪ್ರಾಯವಾಗಿದೆ. ನಂತರದ ಸ್ಥಾನದಲ್ಲಿ ಅಮೆರಿಕ ಇದೆ. ಆದರೆ ಕೇಂದ್ರ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದನ್ನು ಮರೆ ಮಾಚಲು ಅಗತ್ಯವಿಲ್ಲದ ವಿಷಯಗಳನ್ನು ಹರಿಯಬಿಟ್ಟಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಕಡಿಮೆ ಮಾಡಲು ಹೊರಟಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರದ ನಿರ್ಧಾರದಿಂದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಬರುತ್ತಿದೆ. ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದರೆ ದೇಶದ್ರೋಹಿಯ ಪಟ್ಟ ಕಟ್ಟಲಾಗುತ್ತಿದೆ. ಮುಸ್ಲಿಮರು ಒಂದೇ ಪಕ್ಷದಲ್ಲಿ ಇಲ್ಲ. ಸರ್ಕಾರದ ವಿರುದ್ಧ ಒಂದೇ ಪಕ್ಷ ಪ್ರತಿಭಟನೆ ನಡೆಸುತ್ತಿಲ್ಲ. ದೇಶದಾದ್ಯಂತ ಅನೇಕ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ’ ಎಂದು ತಿಳಿಸಿದರು.

‘ಎಲ್ಲರಿಗೂ ನಾಗರಿಕತ್ವ ಕೊಡಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ತಮ್ಮ ಪಕ್ಷಕ್ಕೆ ಮತಗಳನ್ನು ಕೊಡುತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಸರಿಯಲ್ಲ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ತಡೆಹಿಡಿಯಲಾಗಿದೆ’ ಎಂದು ಆರೋಪಿಸಿದರು.

‘ಜನಾಭಿಪ್ರಾಯ ಸಂಗ್ರಹಿಸಿದ ನಂತರವೇ ದೇಶದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ಒಂದು ಕಾಯ್ದೆ ರಚನೆಯಲ್ಲಿ ಸಂಸದರ ಪಾತ್ರವಷ್ಟೇ ಇರುವುದಿಲ್ಲ. ದೇಶದ ನಾಗರಿಕರಿಗೂ ಜವಾಬ್ದಾರಿ ಇದೆ. ಕೇಂದ್ರ ಸರ್ಕಾರ ಜನಾಭಿಪ್ರಾಯ ಪಡೆಯದೇ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಅನುಷ್ಠಾನಗೊಳಿಸಲು ಹೊರಟಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ನಿರುದ್ಯೋಗಿಗಳ ಸಂಖ್ಯೆ ಮಿತಿ ಮೀರಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೇ ವಿನಃ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು’ ಎಂದು ಮನವಿ ಮಾಡಿದರು.

ಜಮಾಅತೆ ಇಸ್ಲಾಮಿ ಹಿಂದ್‌ ಬೀದರ್‌ ಘಟಕದ ಅಧ್ಯಕ್ಷ ಮಹಮ್ಮದ್‌ ನಿಜಾಮುದ್ದಿನ್, ‘ನಮ್ಮ ಸಂಘಟನೆ ರಾಷ್ಟ್ರಭಕ್ತ ಸಂಘಟನೆಯಾಗಿದೆ. ಸಮಾಜದ ಪ್ರಮುಖರು ದಾನರೂಪದಲ್ಲಿ ನೀಡಿದ ನೆರವನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದ ಸಾಕ್ಷರತೆಗಾಗಿ ಬಳಸುತ್ತಿದೆ’ ಎಂದು ತಿಳಿಸಿದರು.

‘ಜಮಾಅತೆ ಇಸ್ಲಾಮಿ ಹಿಂದ್‌ ಜಿಲ್ಲೆಯ 103 ವಿಧವೆಯರಿಗೆ ಮಾಸಿಕ ₹ 500 ಕೊಟ್ಟು ನೆರವಾಗುತ್ತಿದೆ. ಶೈಕ್ಷಣಿಕ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT