ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-25ನೇ ಸಾಲಿನ ಚುನಾವಣೆ ಶೀಘ್ರದಲ್ಲಿಯೇ ನಡೆಯಲಿದೆ. ಆದರೆ, ಇದುವರೆಗೆ ಜಿಲ್ಲಾ ಘಟಕದ ಮತದಾರರ ಪಟ್ಟಿ ಪ್ರಕಟಿಸದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮತ್ತು ಕಾರ್ಯದರ್ಶಿ ರಾಜಶೇಖರ ಮಂಗಲಗಿ ಅವರ ಕ್ರಮ ಖಂಡನಾರ್ಹ’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಮಾಳಗೆ ತಿಳಿಸಿದ್ದಾರೆ.
ಸಂಘದ ಬೈಲಾ ಪ್ರಕಾರ ಮತದಾರರ ಕರಡು ಪಟ್ಟಿ ಸಿದ್ಧಪಡಿಸಿ ಜುಲೈ 1ರಂದು ಪ್ರಕಟಿಸಬೇಕಿತ್ತು. ಆಕ್ಷೇಪಣೆ ಸಲ್ಲಿಸಲು ಜು.2ರಿಂದ 10ರವರೆಗೆ ಕಾಲಾವಕಾಶ ನೀಡಬೇಕಾಗಿತ್ತು. ಈ ಸಂಬಂಧ ಕೇಂದ್ರ ಸಂಘದಿಂದ ಎಲ್ಲ ಜಿಲ್ಲಾ ಶಾಖೆಗಳಿಗೆ ಸೂಚನೆ ಕೊಡಲಾಗಿದೆ. ಹೀಗಿದ್ದರೂ ಅದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಶುಕ್ರವಾರ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬಗೆದ ಅಪಚಾರ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಮನ ಬಂದಂತೆ ಸಂಘ ನಡೆಸುತ್ತಿದ್ದಾರೆ. ಸರ್ವಾಧಿಕಾರಿ ಮನೋಭಾವ ತೋರುತ್ತಿದ್ದಾರೆ. ಹಿಂಬಾಗಿಲಿನಿಂದ 2024-25ನೇ ಚುನಾವಣೆಯಲ್ಲಿ ಅಧಿಕಾರ ಗಿಟ್ಟಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಕರಡು ಮತದಾರರ ಪಟ್ಟಿ ನೀಡುವಂತೆ ಜು.18ರಂದು ಕರೆ ಮಾಡಿ ಕೋರಲಾಗಿತ್ತು. ಜು.27ರಂದು ಲಿಖಿತ ರೂಪದಲ್ಲಿ ಮನವಿ ಮಾಡಿಕೊಂಡರೂ ಉಡಾಫೆಯಿಂದ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು/ಅಧಿಕಾರಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಬೇಕು. ಮತದಾನದ ಹಕ್ಕಿನಿಂದ ಯಾವ ನೌಕರರು ವಂಚಿತರಾಗಬಾರದು. ಈ ಹಿಂದೆ ಮಾಡಿದಂತೆ ತನಗೆ ಬೇಡವಾದ ನೌಕರರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ನೌಕರರು ಇದರ ಬಗ್ಗೆ ಜಾಗೃತರಾಗಬೇಕು. ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮತ್ತು ಕಾರ್ಯದರ್ಶಿ ರಾಜಶೇಖರ ಮಂಗಲಗಿಯವರು ಕೂಡಲೇ ಮತದಾರರ ಕರಡು ಪಟ್ಟಿ ಪ್ರಕಟಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.