ಬೀದರ್: ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ ಕಾಲೇಜುಗಳ ಪದವಿ ಪರೀಕ್ಷೆ ಅಂಕಪಟ್ಟಿಗಳು ಕೈಸೇರದ ಕಾರಣ ನೂರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲೇ ಪದವಿ ಪರೀಕ್ಷೆಗಳ ಫಲಿತಾಂಶ ಘೋಷಿಸಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಇದುವರೆಗೆ ಅಂಕಪಟ್ಟಿ ಕೈಸೇರಿಲ್ಲ. ಇಷ್ಟೇ ಅಲ್ಲ, ಅವರು ಯಾವ ವಿಷಯದಲ್ಲಿ ಎಷ್ಟು ಅಂಕ ಗಳಿಸಿದ್ದಾರೆ, ಒಟ್ಟು ಅಂಕಗಳು ಬಂದದ್ದೆಷ್ಟು ಎಂಬ ಮಾಹಿತಿಯೇ ಲಭ್ಯವಾಗಿಲ್ಲ. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರಲ್ಲೂ ಅವರ ಫಲಿತಾಂಶ ತಿಳಿಯುತ್ತಿಲ್ಲ. ಈ ಸಂಬಂಧ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಷ್ಟರಲ್ಲೇ ಬರಬಹುದು’ ಎಂದು ಪ್ರತಿಸಲ ಸಿದ್ಧ ಉತ್ತರ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪದವಿ ಆರನೇ ಸೆಮಿಸ್ಟರ್ ಪರೀಕ್ಷೆ ಬರೆದವರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬೇಕು. ಆದರೆ, ಅಂಕಪಟ್ಟಿಯೇ ಬರದ ಕಾರಣ ಪ್ರವೇಶ ಪಡೆಯಲಾಗುತ್ತಿಲ್ಲ. ಕೆಲ ವಿದ್ಯಾರ್ಥಿಗಳು ನಾಲ್ಕನೇ, ಐದನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದಾರೆ. ಆದರೆ,ಇದುವರೆಗೆ ಯಾವ ಸೆಮಿಸ್ಟರ್‌ನ ಅಂಕಪಟ್ಟಿಯೂ ಅವರಿಗೆ ಸಿಕ್ಕಿಲ್ಲ. ಮೂರು ವರ್ಷದ ಪದವಿಯಲ್ಲಿ ಒಟ್ಟು ಆರು ಸೆಮಿಸ್ಟರ್‌ಗಳಿದ್ದು, ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಹಿಂದಿನ ಸೆಮಿಸ್ಟರ್‌ಗಳ ಅಂಕಪಟ್ಟಿ ಬರದಿದ್ದರೂ ನಂತರದ ಸೆಮಿಸ್ಟರ್‌ನಲ್ಲಿ ಮುಂದುವರೆಸಲಾಗುತ್ತಿದೆ. ಆದರೆ, ಆರನೇ ಸೆಮಿಸ್ಟರ್ ಪರೀಕ್ಷೆ ಬರೆದವರು ಪಿಜಿ ಪ್ರವೇಶಕ್ಕೆ ಪರದಾಡುವಂತಾಗಿದೆ.
‘ಅಂಕಪಟ್ಟಿ ಸಂಬಂಧ ನಾನು ಓದುತ್ತಿರುವ ಕಾಲೇಜು ಹಾಗೂ ವಿಶ್ವವಿದ್ಯಾಲಯ ಎರಡಕ್ಕೂ ಅಲೆದಾಡಿ ಅಲೆದಾಡಿ ಸಾಕಾಗಿದೆ. ಪ್ರತಿ ಸಲ ಹೋಗಿ ವಿಚಾರಿಸಿದಾಗ, ‘ಇಷ್ಟರಲ್ಲೇ ಬರುತ್ತೆ’ ಎಂದು ಸಮಾಧಾನದ ಉತ್ತರ ಹೇಳುತ್ತಾರೆ. ಆದರೆ, ನಿರ್ದಿಷ್ಟವಾಗಿ ಏನನ್ನೂ ಹೇಳುವುದಿಲ್ಲ. ನಾನು ಪಿ.ಜಿಗೆ ಪ್ರವೇಶ ಪಡೆಯಬೇಕು. ಆದರೆ, ನನಗೆ ಎಷ್ಟು ಅಂಕ ಬಂದಿವೆ ಎನ್ನುವುದು ತಿಂಗಳಾದರೂ ಗೊತ್ತಾಗಿಲ್ಲ. ಅಂಕಗಳು ಗೊತ್ತಿರದಿದ್ದರೆ ಯಾರು ತಾನೇ ಪ್ರವೇಶ ಕೊಡುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಪದವಿ ಆರನೇ ಸೆಮಿಸ್ಟರ್ ವಿದ್ಯಾರ್ಥಿನಿಯೊಬ್ಬರು ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡಿದ್ದಾರೆ.
‘ನಾನು ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಪರೀಕ್ಷೆ ಬರೆದಿದ್ದೇನೆ. ಈಗ ಮೂರನೇ ಸೆಮಿಸ್ಟರ್. ಆದರೆ, ಮೊದಲ ಎರಡೂ ಸೆಮಿಸ್ಟರ್‌ಗಳ ಫಲಿತಾಂಶ ಇದುವರೆಗೆ ಗೊತ್ತಾಗಿಲ್ಲ. ಫಲಿತಾಂಶ ಗೊತ್ತಾದರೆ ಮುಂದಿನ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಂಕಪಟ್ಟಿ ಕೈಸೇರಿದರೆ ನಾವು ಬರೆದ ಪರೀಕ್ಷೆಯ ಯಾವ ವಿಷಯಗಳಲ್ಲಿ ಉತ್ತಮ ಅಂಕಗಳು ಬಂದಿವೆ, ಯಾವುದರಲ್ಲಿ ಕಡಿಮೆ ಬಂದಿವೆ ಎನ್ನುವುದು ಗೊತ್ತಾಗುತ್ತದೆ. ಅದರಿಂದ ನಮ್ಮಿಂದ ತಪ್ಪಾದ ಕಡೆ ಸುಧಾರಿಸಿಕೊಳ್ಳಬಹುದು. ಆದರೆ, ಇದಕ್ಕೆ ಆಸ್ಪದ ಇಲ್ಲದಂತಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ’ ಎನ್ನುವುದು ಇನ್ನೊಬ್ಬ ವಿದ್ಯಾರ್ಥಿಯ ಅಳಲು.
‘ಇನ್ನೊಂದು ತಿಂಗಳಾಗಬಹುದು’ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳು ಬರುವುದು ವಿಳಂಬವಾಗಿದೆ. ಇದು ನಮ್ಮ ವಿಶ್ವವಿದ್ಯಾಲಯದ ಸಮಸ್ಯೆ ಮಾತ್ರ ಅಲ್ಲ. ವಿದ್ಯಾರ್ಥಿಗಳು ಆರನೇ ಸೆಮಿಸ್ಟರ್ ಬಂದಾಗ ಯುಎಸ್‌ಎಂಎಸ್‌ನವರು ಅಂಕಪಟ್ಟಿ ಫಾರ್ಮೆಟ್ ಅಂತಿಮಗೊಳಿಸಿದ್ದಾರೆ. ನಮ್ಮ ಕಡೆಯಿಂದ ಈಗಾಗಲೇ ವಿವರ ಕಳಿಸಲಾಗುತ್ತಿದ್ದು ಇನ್ನೊಂದು ತಿಂಗಳಲ್ಲಿ ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿ ಸಿದ್ಧವಾಗಬಹುದು.–ಪ್ರೊ. ಮೇಧಾವಿನಿ ಎಸ್. ಕಟ್ಟಿ ಕುಲಸಚಿವರು ಮೌಲ್ಯಮಾಪನ ಗುಲ್ಬರ್ಗಾ ವಿಶ್ವವಿದ್ಯಾಲಯ
‘ಕುಲಪತಿಗೆ ಪತ್ರ ಬರೆಯುವೆ’ ಅಂಕಪಟ್ಟಿ ಸಮಸ್ಯೆ ಕುರಿತು ಅನೇಕ ವಿದ್ಯಾರ್ಥಿಗಳು ಕರೆ ಮಾಡಿ ಗೋಳು ತೋಡಿಕೊಂಡಿದ್ದಾರೆ. ಈಗಾಗಲೇ ಈ ಕುರಿತು ಸೆಪ್ಟೆಂಬರ್ 6ರಂದು ನಡೆದ ಸಿಂಡಿಕೇಟ್ ಸಭೆಯಲ್ಲೂ ಚರ್ಚೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗೆಹರಿಸಲು ತಿಳಿಸಲಾಗಿದೆ. ಈ ಸಂಬಂಧ ಇನ್ನೊಂದು ಸಲ ವಿಶ್ವವಿದ್ಯಾಲಯದ ಕುಲಪತಿ ಕುಲಸಚಿವರಿಗೆ ಪತ್ರ ಬರೆಯುವೆ. ಮುಂದಿನ ಸಭೆಯಲ್ಲೂ ಈ ಕುರಿತು ಪ್ರಸ್ತಾಪಿಸುವೆ.–ಸಿದ್ದಪ್ಪ ಮೂಲಗೆ ಸಿಂಡಿಕೇಟ್ ಸದಸ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.