ವ್ಯಾಪಾರಿಗಳಿಂದ ಅಂಗಡಿ ಬಂದ್

7
ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್‌ನಿಂದ ಸಿಎಂಗೆ ಮನವಿ

ವ್ಯಾಪಾರಿಗಳಿಂದ ಅಂಗಡಿ ಬಂದ್

Published:
Updated:
Prajavani

ಬೀದರ್: ರಾಜ್ಯದಲ್ಲಿ ಕೇಂದ್ರದ ಬೆಲೆ ವ್ಯತ್ಯಾಸ ಪಾವತಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆ ವ್ಯಾಪಾರಿಗಳು ಸೋಮವಾರ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಗಾಂಧಿಗಂಜ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಅವರಿಗೆ ಸಲ್ಲಿಸಿದರು.

ಸರ್ಕಾರವು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿರುವ ಕಾರಣ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿದಿದೆ. ವ್ಯಾಪಾರಿಗಳು, ಮುನೀಮರು ಹಾಗೂ ಹಮಾಲರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ಕನಿಷ್ಠ ಬೆಂಬಲ ಬೆಲೆ ಖರೀದಿ ಯೋಜನೆಯು ಅನೇಕ ನ್ಯೂನ್ಯತೆಗಳಿಂದ ಕೂಡಿದೆ. ಯೋಜನೆ ಅನುಷ್ಠಾನಕ್ಕೆ
ಸರ್ಕಾರ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ವ್ಯಯಿಸಬೇಕಿದೆ. ಖರೀದಿಸಿದ ಕೃಷಿ ಉತ್ಪನ್ನಗಳನ್ನು ತುಂಬಲು ಗೋಣಿ ಚೀಲ, ಸಾಗಣೆಗೂ ವೆಚ್ಚ ಮಾಡಬೇಕಿದೆ. ಉತ್ಪನ್ನಗಳನ್ನು ಸಂಗ್ರಹಿಸಿ ಇಡಲು ಉಗ್ರಾಣಗಳಿಗೆ ಬಾಡಿಗೆ ತೇರಬೇಕಿದೆ. ರೈತರಿಗೆ ತಕ್ಷಣ ಹಣವೂ ಪಾವತಿಯಾಗುತ್ತಿಲ್ಲ. ಕಳೆದ ವರ್ಷ ಖರೀದಿಸಿದ ಉತ್ಪನ್ನಗಳ ಹಣ ಇನ್ನೂ ಅನೇಕ ರೈತರ ಖಾತೆಗೆ ಜಮಾ ಮಾಡಿಲ್ಲ ಎಂದು ಆಪಾದಿಸಿದರು.

‘ಕನಿಷ್ಠ ಬೆಂಬಲ ಬೆಲೆ’ ಹಾಗೂ ‘ಮಾರುಕಟ್ಟೆ ಚಾಲ್ತಿ ದರ’ದ ವ್ಯತ್ಯಾಸದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವ ಕೇಂದ್ರ ಸರ್ಕಾರದ ಬೆಲೆ ವ್ಯತ್ಯಾಸ ಪಾವತಿ ಯೋಜನೆ ಇಲ್ಲವೇ ಭಾವಾಂತರ ಯೋಜನೆ ವೈಜ್ಞಾನಿಕವಾಗಿದೆ. ರೈತರು ಹಾಗೂ ವ್ಯಾಪಾರಿಗಳಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಈ ಯೋಜನೆ ಜಾರಿಗೊಳಿಸುವುದರಿಂದ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು ಕೃಷಿ ಉತ್ಪನ್ನ ಖರೀದಿಸಿ ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡುವುದು ತಪ್ಪಲಿದೆ. ಗೋಣಿ ಚೀಲ, ಸಾಗಣೆ ವೆಚ್ಚ, ಉಗ್ರಾಣಗಳ ಬಾಡಿಗೆ ಹಣ ಉಳಿತಾಯ ಆಗಲಿದೆ. ಖರೀದಿ ದಿನದಂದೇ ರೈತನ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ವ್ಯಾಪಾರ ನಡೆಯುವುದರಿಂದ ವ್ಯಾಪಾರಿಗಳು, ಹಮಾಲರು, ಮುನೀಮರು ಹಾಗೂ ಸಾರಿಗೆ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅಳವಡಿಸಿರುವ ಎಲ್ಲ ಕೃಷಿ ಉತ್ಪನ್ನಗಳನ್ನು ಬೆಲೆ ವ್ಯತ್ಯಾಸ ಪಾವತಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಗಾಂಧಿಗಂಜ್‌ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ, ಉಪಾಧ್ಯಕ್ಷ ಅಣ್ಣಾರಾವ್ ಮೊಗಶೆಟ್ಟಿ, ಕಾರ್ಯದರ್ಶಿ ಭಗವಂತ ಔದತ್‌ಪುರ, ಬೀದರ್ ದಾಲ್‌ಮಿಲ್‌ ಅಸೋಸಿಯೇಶನ್ ಅಧ್ಯಕ್ಷ ಅಶೋಕ ರೇಜಂತಲ್, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ, ಉದ್ಯಮಿ ಕಾಶಪ್ಪ ಧನ್ನೂರ, ರಾಜಕುಮಾರ ಗುನ್ನಳ್ಳಿ, ಚಂದ್ರಪ್ಪ ಹಳ್ಳಿ, ಪ್ರಭುಶೆಟ್ಟಿ ಮುದ್ದಣ್ಣ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !