ಬುಧವಾರ, ಸೆಪ್ಟೆಂಬರ್ 22, 2021
21 °C
ಕಲಬುರ್ಗಿ ವಿಭಾಗದಲ್ಲಿ ಮೊದಲ ಪ್ರಾಯೋಗಿಕ ಯೋಜನೆಗೆ ಚಾಲನೆ

ಮರಕಲ್: ‘ಗ್ರಾಮ ಒನ್’ ಕೇಂದ್ರ ಶುರು

ನಾಗೇಶ ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಕಲಬುರ್ಗಿ ವಿಭಾಗದಲ್ಲೇ ಮೊದಲ ಬಾರಿಗೆ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ‘ಗ್ರಾಮ ಒನ್’ ನಾಗರಿಕ ಸೇವಾ ಕೇಂದ್ರ ಶುರುವಾಗಿದೆ.

ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ರಾಜ್ಯದ ನಾಲ್ಕೂ ವಿಭಾಗಗಳಲ್ಲಿ ತಲಾ ಒಂದು ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಮರಕಲ್, ಕಲಬುರ್ಗಿ ವಿಭಾಗದಲ್ಲಿ ಆಯ್ಕೆಯಾದ ಏಕೈಕ ಗ್ರಾಮ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಮನೆ ಬಾಗಿಲಿಗೆ ಸೇವೆ: ಗ್ರಾಮದಲ್ಲಿ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಕೃಷಿ, ಪಶು ಸಂಗೋಪನೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳು ದೊರಕಲಿವೆ ಎಂದರು.

ಯೋಜನೆ ಪ್ರಾಯೋಗಿಕ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಇ-ಸ್ಟ್ಯಾಂಪಿಂಗ್, ಮೈಕ್ರೊ ಬ್ಯಾಂಕಿಂಗ್, ಇನ್ಶುರೆನ್ಸ್ ಸೇರಿದಂತೆ 500 ಸೇವೆಗಳು ಲಭಿಸಲಿವೆ ಎಂದು ಸೇವಾ ಕೇಂದ್ರದ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮಾತನಾಡಿದರು. ಶಾಸಕ ರಹೀಂಖಾನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಕೀರ್ತನಾ, ತಹಶೀಲ್ದಾರ್ ಶಕೀಲ್, ಗ್ರಾಮ ಒನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ವೀರೇಶ ಸ್ವಾಮಿ, ಸಂಯೋಜಕ ಸುಮೀತ್ ಧನ್ನೂರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಬುಯ್ಯಾ, ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಡೋಣೆ, ಗ್ರಾಮ ಲೆಕ್ಕಿಗ ಪ್ರದೀಪಕುಮಾರ, ಮುಖಂಡರಾದ ಕಾಮಶೆಟ್ಟಿ ಬುಯ್ಯಾ, ನಾಗನಾಥ ಜೀರ್ಗೆ, ವೆಂಕಟರಾವ್ ಚಿದ್ರೆ, ವಿಜಯಕುಮಾರ ಬಿರಾದಾರ, ವೀರಶೆಟ್ಟಿ ಬಿರಾದಾರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.