ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣ್ಣಗಾದ ಉಪ ಚುನಾವಣೆ ಕಾವು

ಬಸವಕಲ್ಯಾಣ, ಹುಲಸೂರ ತಾಲ್ಲೂಕುಗಳ 35 ಗ್ರಾಮ ಪಂಚಾಯಿತಿಗಳಲ್ಲಿ ಚಟುವಟಿಕೆ ಬಿರುಸು
Last Updated 5 ಡಿಸೆಂಬರ್ 2020, 3:01 IST
ಅಕ್ಷರ ಗಾತ್ರ

ಬಸವಕಲ್ಯಾಣ: ಹುಲಸೂರ ಮತ್ತು ಬಸವಕಲ್ಯಾಣ ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಚಟುವಟಿಕೆ ಬಿರುಸುಗೊಂಡಿದ್ದು, ಇದರಿಂದಾಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾವು ತಣ್ಣಗಾಗಿದೆ.

ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ತೆರವಾದ ಈ ಸ್ಥಾನಕ್ಕಾಗಿ ಶೀಘ್ರದಲ್ಲಿ ಚುನಾವಣೆ ಘೋಷಣೆ ಆಗಬಹುದು ಎಂದೇ ನಂಬಲಾಗಿತ್ತು. ಈ ಕಾರಣ ವಿವಿಧ ಪಕ್ಷಗಳ ನಾಯಕರು ಇಲ್ಲಿಗೆ ಬಂದು ವಾತಾವರಣವನ್ನು ಬಿಸಿಯಾಗಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಸೋಮಣ್ಣ, ಪ್ರಭು ಚವಾಣ್, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಲ್ಲಿಗೆ ಬಂದಿದ್ದರಿಂದ ಸ್ಪರ್ಧಾ ಆಕಾಂಕ್ಷಿಗಳು ಅವರೆದುರು ಶಕ್ತಿ ಪ್ರದರ್ಶನ ನಡೆಸಿದ್ದರು.

ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳ ಸಂದರ್ಶನ ಕೂಡ ನಡೆಸಲಾಯಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ನಿಲ್ಲಿಸುವುದಿಲ್ಲ ಎಂದು ಹೇಳಿದ್ದರಿಂದ ವಿಚಲಿತಗೊಂಡಿದ್ದ ಪಕ್ಷದ ಪದಾಧಿಕಾರಿಗಳು ಬೆಂಗಳೂರಿಗೆ ದೌಡಾಯಿಸಿ ಅಭ್ಯರ್ಥಿ ನಿಲ್ಲಿಸುವುದಕ್ಕಾಗಿ ಅವರ ಮನವೊಲಿಸಿದ್ದರು. ಅಷ್ಟರಲ್ಲೇ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆಗಿದ್ದರಿಂದ ಇವರೆಲ್ಲರ ಚಟುವಟಿಕೆಗಳು ಕೆಲಕಾಲ ಸ್ಥಗಿತಗೊಂಡಿವೆ.

ಹೊಸ ಸಂಕಟ: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆಗಿದ್ದರಿಂದ ಎಲ್ಲ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಿಗೆ ಬೇರೊಂದು ಸಂಕಟ ಎದುರಾಗಿದ್ದು, ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರ ಪರವಾಗಿ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವರಿಗೆ ಚುನಾವಣಾ ಖರ್ಚು ಕೂಡ ಪೊರೈಸಬೇಕಾಗುತ್ತದೆ. ಇಲ್ಲದಿದ್ದರೆ ಉಪ ಚುನಾವಣೆಯಲ್ಲಿ ಇಂಥವರು ‘ನಮಗೇನು ಮಾಡಿದ್ದೀರಿ’ ಎಂದು ಪ್ರಶ್ನಿಸಿ ತೊಂದರೆ ಕೊಡುವ ಸಾಧ್ಯತೆಯಿದೆ ಎಂಬುದು ಕೆಲ ಮುಖಂಡರ ಅನಿಸಿಕೆಯಾಗಿದೆ.

ಮೂರು ಕಡೆ ಮತದಾನವಿಲ್ಲ: ಹುಲಸೂರ ತಾಲ್ಲೂಕಿನಲ್ಲಿ ಒಟ್ಟು 7 ಗ್ರಾಮ ಪಂಚಾಯಿತಿಗಳು ಬರುತ್ತವೆ. ಆದರೆ, ಅವಧಿ ಪೂರ್ಣಗೊಳ್ಳದ ಕಾರಣ ಹುಲಸೂರ, ಗೋರಟಾ(ಬಿ) ಮತ್ತು ತೊಗಲೂರ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯುತ್ತಿಲ್ಲ. ಬಸವಕಲ್ಯಾಣ ತಾಲ್ಲೂಕಿನ 31 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ಈ ಎರಡೂ ತಾಲ್ಲೂಕುಗಳಲ್ಲಿ ಮೊದಲ ಹಂತದಲ್ಲೇ ಚುನಾವಣೆ ನಡೆಯಲಿದೆ. ಡಿಸೆಂಬರ್ 7 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. 11 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಡಿಸೆಂಬರ್ 12 ರಂದು ನಾಮಪತ್ರಗಳ ಪರಿಶೀಲನೆ ನಡೆಯುವುದು. 14 ರವರೆಗೆ ನಾಮಪತ್ರ ವಾಪಸ್ ಪಡೆಯಬಹುದಾಗಿದೆ. 22 ರಂದು ಮತದಾನ ನಡೆಯುವುದು.

ಸ್ಥಾನಗಳು: ಎರಡೂ ತಾಲ್ಲೂಕುಗಳ ಒಟ್ಟು 655 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಗ್ರಾಮ ಪಂಚಾಯಿತಿ ಕೇಂದ್ರ ಹಾಗೂ ಅಲ್ಲಿ ಚುನಾವಣೆ ನಡೆಯಲಿರುವ ಸ್ಥಾನಗಳು ಹೀಗಿವೆ. ಧನ್ನೂರ- 13, ಬೆಟಬಾಲ್ಕುಂದಾ-18, ಕಿಟ್ಟಾ-15, ನಾರಾಯಣಪುರ-26, ಸಸ್ತಾಪುರ-21, ಮೋರಖಂಡಿ-19, ರಾಜೇಶ್ವರ-34, ತಡೋಳಾ–16,ಇಸ್ಲಾಂಪುರ-15, ಯರಬಾಗ–15, ನಿರ್ಗುಡಿ-16, ಯರಂಡಿ-21, ಖೇರ್ಡಾ(ಬಿ)-20, ರಾಜೋಳಾ-14, ಮಂಠಾಳ-30, ಸಸ್ತಾಪುರ-18, ಆಲಗೂಡ-15, ಗುಂಡೂರ್-16, ಘೋಟಾಳಾ-22, ಚಂಡಕಾಪುರ-20, ಮುಡಬಿ-26, ಏಕಲೂರ-14, ಹಾರೂಡ-25, ಕಲಖೋರಾ-14, ಕೊಹಿನೂರ-20, ಬಟಗೇರಾ-18, ಲಾಡವಂತಿ-13, ಉಜಳಂಬ-23, ಭೋಸಗಾ-19, ಚಿಕ್ಕನಾಗಾಂವ-14, ಹಣಮಂತವಾಡಿ-08, ಗಡಿಗೌಡಗಾಂವ-14, ಮುಚಳಂಬ-22, ಮಿರಖಲ್-21, ಬೇಲೂರ-20 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT