ಭಾನುವಾರ, ಡಿಸೆಂಬರ್ 15, 2019
17 °C
ಹಾಳು ಕೊಂಪೆಯಾದ ಸರ್ಕಾರಿ ಕಟ್ಟಡಗಳು: ರಸ್ತೆ ಪಕ್ಕದಲ್ಲಿ ಕಸದ ದರ್ಶನ

ಔರಾದ್ ತಾಲ್ಲೂಕಿನ ಸಂತಪುರ: ಸಮಸ್ಯೆಗಳ ಆಗರ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಹಿಂದೆ ತಾಲ್ಲೂಕು ಕೇಂದ್ರದ ಖ್ಯಾತಿ ಪಡೆದ ಸಂತಪುರ ಪಟ್ಟಣ ಈಗ ನೈರ್ಮಲ್ಯ ಸೇರಿದಂತೆ ವಿವಿಧ ಸಮಸ್ಯೆಗಳಲ್ಲಿ ಸಿಲುಕಿದೆ.

ಬೀದರ್-ನಾಂದೇಡ ಹೆದ್ದಾರಿಗೆ ಹೊಂದಿಕೊಂಡಿರುವ ಸಂತಪುರ ಪಟ್ಟಣದಲ್ಲಿ ನೈರ್ಮಲ್ಯ ಸಮಸ್ಯೆ ವ್ಯಾಪಕವಾಗಿ ಕಾಡುತ್ತಿದೆ. ಊರು ಪ್ರವೇಶಿಸುತ್ತಿದ್ದಂತೆ ರಸ್ತೆ ಎರಡೂ ಬದಿ ಕಸದ ರಾಶಿಯ ದರ್ಶನವಾಗುತ್ತದೆ. ಅದು ದುರ್ವಾಸನೆ ಬೀರುತ್ತದೆ. ಎರಡು ವರ್ಷದ ಹಿಂದೆ ಅತಿಕ್ರಮಣ ತೆರವು ಆದರೂ ಇಂದಿಗೂ ಅಲ್ಲಿನ ಕಲ್ಲು ಮಣ್ಣು ತೆರವು ಮಾಡಿಲ್ಲ. ಹಳೆ ವಿದ್ಯುತ್ ಕಂಬ ಮತ್ತು ತಂತಿ ನೇತಾಡುತ್ತಿದೆ. ಆದರೆ ಸಂಬಂಧಿತರು ಆ ಕಡೆ ಗಮನ ಹರಿಸುತ್ತಿಲ್ಲ.

ಹಿಂದೆ ತಾಲ್ಲೂಕು ಕೇಂದ್ರ ಆಗಿದ್ದಾಗ ತಾಲ್ಲೂಕು ಪಂಚಾಯಿತಿ ಕಚೇರಿಗಾಗಿ ಬಳಸುತ್ತಿದ್ದ ಕಟ್ಟಡ ಈಗ ಹಾಳು ಕೊಂಪೆಯಾಗಿದೆ. ಅದೂ ಈಗ ಮೂತ್ರಾಲಯವಾಗಿ ಬಳಕೆಯಾಗುತ್ತಿದೆ. ಅದರ ಪಕ್ಕದಲ್ಲೇ ಪ್ರವಾಸಿ ಮಂದಿರದ ಕಟ್ಟಡವಿದೆ. ಅದೂ ರಾತ್ರಿ ಹೊತ್ತು ಕುಡುಕರ ಮತ್ತು ಅನೈತಿಕ ಚಟವಟಿಕೆ ತಾಣವಾಗಿ ಮಾರ್ಪಟ್ಟಿದೆ.

ಸಂತಪುರನಲ್ಲಿ ತಾಲ್ಲೂಕು ಪಂಚಾಯಿತಿ. ಲೋಕೋಪಯೋಗಿ, ಮೀನುಗಾರಿಕೆ, ಕೈಗಾರಿಕೆ, ಶಿಶು ಅಭಿವೃದ್ಧಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆ ಕಚೇರಿ ಕಟ್ಟಡಗಳು ಮತ್ತು ಈ ಇಲಾಖೆ ಸಿಬ್ಬಂದಿ ವಾಸಿಸುವ ವಸತಿಗೃಹಗಳಿವೆ. ಆದರೆ ಈ ಎಲ್ಲ ಕಚೇರಿ, ಕಟ್ಟಡಗಳು ಪಾಳು ಬಿದ್ದಿವೆ. ಸುಮಾರು 10 ಎಕರೆಗೂ ಹೆಚ್ಚು ಸರ್ಕಾರಿ ಆಸ್ತಿ ಇದ್ದು, ಕೆಲವಡೆ ಅತಿಕ್ರಮಣ ಆದರೂ ಸಂಬಂಧಿತರು ಮೌನ ವಹಿಸಿದ್ದಾರೆ’ ಎಂದು ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ದೂರಿದ್ದಾರೆ.

‘ನಮ್ಮ ಊರು ಮೊದಲಿನಿಂದಲೂ ಕಡೆಗಣಿಸಲ್ಪಟ್ಟಿದೆ. ಸುಮಾರು 15 ಸಾವಿರ ಜನಸಂಖ್ಯೆ ಇರುವ ಈ ಊರಲ್ಲಿ ಒಂದು ಸಾರ್ವಜನಿಕ ಮೂತ್ರಾಲಯ ಇಲ್ಲ. ಈ ಕಾರಣ ಊರಲ್ಲಿ ನೈರ್ಮಲ್ಯ ಸಮಸ್ಯೆ ಎದುರಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭುಶೆಟ್ಟಿ ಸೈನಿಕಾರ್ ಅಸಮಾಧಾನ ಹೊರ ಹಾಕಿದ್ದಾರೆ.

‘ಇಲ್ಲಿ ಸಾಕಷ್ಟು ಸರ್ಕಾರಿ ಜಮೀನು ಮತ್ತು ಕಟ್ಟಡಗಳಿವೆ. ಅದನ್ನು ಬಳಸಿಕೊಳ್ಳಲು ಸರ್ಕಾರ ಗಮನ ಹರಿಸುತ್ತಿಲ್ಲ. ವಿದ್ಯಾರ್ಥಿನಿಯರ ವಸತಿ ನಿಲಯ, ಸರ್ಕಾರಿ ಪಿಯು ಕಾಲೇಜು, ಅಗ್ನಿಶಾಮಕ ಠಾಣೆ ಅವಶ್ಯಕತೆ ಇದೆ. ಆದರೆ ಈ ಬಗ್ಗೆ ಸಂಬಂಧಿತರಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ಸಂತಪುರನ ಹಿರಿಯ ನಾಗರಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಊರಲ್ಲಿ ಸರಿಯಾದ ಚರಂಡಿ ಇಲ್ಲ. ಶುದ್ಧ ನೀರಿನ ಘಟಕ ಇದ್ದರೂ ಅವು ಕೆಲಸ ಮಾಡುತ್ತಿಲ್ಲ. ಕೆಲ ಬಡಾವಣೆಗಳಿಗೆ ನೀರಿನ ಸೌಲಭ್ಯವಿಲ್ಲ ಎಂದು ಜನ ಗ್ರಾಮ ಪಂಚಾಯಿತಿ ಕಾರ್ಯವೈಖರಿ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)