ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಹಲವು ಸಮಸ್ಯೆಗಳ ನಡುವೆ ರಾಜೇಶ್ವರ

ಪೊಲೀಸ್ ಠಾಣೆ ಸ್ಥಾಪನೆಗೆ ಒತ್ತಾಯ: ರಸ್ತೆ ಪಕ್ಕದಲ್ಲಿಲ್ಲ ಚರಂಡಿ ವ್ಯವಸ್ಥೆ
Last Updated 11 ಏಪ್ರಿಲ್ 2022, 20:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೋಷಿಸಬೇಕು ಎಂಬ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ. ಪೊಲೀಸ್ ಠಾಣೆ ಸ್ಥಾಪನೆ ಕುರಿತು ಗಮನಹರಿಸುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್‌ಗಳು ನಿಲ್ಲುತ್ತಿರುವ ಕಾರಣ ಅಪಘಾತಗಳು ಆಗುತ್ತಿವೆ. ಆದ್ದರಿಂದ ಇಲ್ಲಿ ಬಸ್ ನಿಲ್ದಾಣ ಕಟ್ಟಬೇಕು ಎಂಬ ಬೇಡಿಕೆ ಇತ್ತು. ಶಾಸಕ ರಾಜಶೇಖರ ಪಾಟೀಲ ಅವರು ಅನುದಾನ ಒದಗಿಸಿ ಸುಂದರ ಬಸ್ ನಿಲ್ದಾಣ ನಿರ್ಮಿಸುತ್ತಿದ್ದಾರೆ. ಆದರೆ, ಕಾಮಗಾರಿ ಕುಂಟುತ್ತ ಸಾಗಿದೆ. ಇಲ್ಲಿ ಶೌಚಾಲಯ, ಆವರಣಗೋಡೆ ಹಾಗೂ ಇತರೆ ವ್ಯವಸ್ಥೆ ಕೈಗೊಳ್ಳಬೇಕಾಗಿದೆ.

ಇಲ್ಲಿನ ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲಿಯೇ ದೊಡ್ಡ ಪಂಚಾಯಿತಿ ಆಗಿದ್ದು, 34 ಸದಸ್ಯರಿದ್ದಾರೆ. ಆದ್ದರಿಂದ ಸರ್ಕಾರದ ಅನುದಾನ ಯಾವುದಕ್ಕೂ ಸಾಕಾಗುತ್ತಿಲ್ಲ. ಇದನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೋಷಿಸಿ ಹೆಚ್ಚಿನ ಅನುದಾನ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಪಂಚಾಯಿತಿಯಿಂದ ಸರ್ಕಾರಕ್ಕೆ ಅನೇಕ ಸಲ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಈ ಕೆಲಸ ಆಗಿಲ್ಲ. ಇನ್ನು ಮುಂದಾದರೂ ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರಾದ ಮಹ್ಮದ್ ಸಾಬ್ ಕೇಳಿಕೊಂಡಿದ್ದಾರೆ.

ಊರು ದೊಡ್ಡದಿರುವ ಕಾರಣ ಇಲ್ಲಿ ಪೊಲೀಸ್ ಠಾಣೆ ಅಗತ್ಯವಿದೆ. ಆದರೆ ಬರೀ ಔಟ್ ಪೋಸ್ಟ್ ನೀಡಲಾಗಿದೆ. ಹೀಗಾಗಿ ದೂರದ ಬಸವಕಲ್ಯಾಣ ಠಾಣೆಗೆ ಹೋಗಬೇಕಾಗುತ್ತಿದೆ. ಇದಲ್ಲದೆ, ರಾಷ್ಟ್ರೀಯ ಹೆದ್ದಾರಿಯನ್ನು ಅಗಲಗೊಳಿಸಲಾಗಿದೆ. ಉದ್ದನೆಯ ಮೇಲ್ಸೇತುವೆ ನಿರ್ಮಿಸಲಾಗಿದೆ. ಆದರೆ, ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಲಾಗಿಲ್ಲ. ಈ ಕಾರಣ ಅಂಗಡಿಗಳ, ಮನೆ ಬಳಕೆಯ ಹಾಗೂ ಮಳೆ ನೀರು ಮುಂದಕ್ಕೆ ಹೋಗದೆ ಅಲ್ಲಲ್ಲಿ ಸಂಗ್ರಹಗೊಳ್ಳುತ್ತಿದೆ. ರಸ್ತೆ ನಿರ್ಮಿಸಿದ ಗುತ್ತಿಗೆದಾರರೇ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮವಿದ್ದು, ಅವರು ಈ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ ಮೂಲಗೆ ಒತ್ತಾಯಿಸಿದ್ದಾರೆ.

ಮುಖ್ಯವೆಂದರೆ, ಇಲ್ಲಿ ಎರಡು ಪ್ರೌಢಶಾಲೆಗಳು ಹಾಗೂ ಪ್ರಾಥಮಿಕ ಶಾಲೆ ಇದ್ದು, ಈ ಶಿಕ್ಷಣ ಕೇಂದ್ರಗಳ ಕಟ್ಟಡಗಳು ಹಳೆಯದ್ದಾಗಿವೆ. ಗೋಡೆಗಳು ಶಿಥಿಲಗೊಂಡಿವೆ. ಹೊಸ ಕಟ್ಟಡ ಕಟ್ಟಬೇಕಾದ ಅಗತ್ಯವಿದೆ ಎಂದು ಸಹ ಅವರು ಅಭಿಪ್ರಾಯಪಟ್ಟಿದ್ದಾರೆ.

ಪರಿಶಿಷ್ಟ ಪಂಗಡದ ಸಮುದಾಯ ಭವನದ ಕೆಲಸ 15 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಚೆಗೆ ಶಾಸಕರು ಈ ಕೆಲಸ ನಿರ್ವಹಿಸಲು ಸಂಬಂಧಿತರಿಗೆ ಸೂಚಿಸಿದ್ದರೂ ಪ್ರಯೋಜನ ಆಗಿಲ್ಲ. ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಿಸುವ ಅಗತ್ಯವೂ ಇದೆ. ವಾರದ ಸಂತೆ ಇಲ್ಲಿನ ಕಿರಿದಾದ ರಸ್ತೆಯಲ್ಲಿ ನಡೆಯುತ್ತದೆ. ಆದ್ದರಿಂದ ಇಸ್ಲಾಪುರ ಹಾಗೂ ಇತರೆ ಗ್ರಾಮಗಳಿಗೆ ಹೋಗುವವರಿಗೆ ತೊಂದರೆ ಆಗುತ್ತಿದೆ. ಸಂತೆಗೆ ಬೇರೆಡೆ ಸ್ಥಳಾವಕಾಶ ಮಾಡಿಕೊಡಬೇಕು ಇಲ್ಲವೆ, ರಸ್ತೆಯನ್ನು ಅಗಲಗೊಳಿಸಬೇಕು ಎಂದು ಶರಣಬಸಪ್ಪ ಹೇಳಿದ್ದಾರೆ. ಊರಲ್ಲಿ ಅಲ್ಲಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಗೌರಮ್ಮ ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT