ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ: ಡಾ. ಕಲ್ಪನಾ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಸಭೆ
Last Updated 19 ಜನವರಿ 2019, 13:09 IST
ಅಕ್ಷರ ಗಾತ್ರ

ಬೀದರ್: ‘ಕ್ರೀಡಾಂಗಣಗಳ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಿದರೆ ಅಗತ್ಯ ಅನುದಾನ ಒದಗಿಸಲಾಗುವುದು’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ. ಡಿ. ಕಲ್ಪನಾ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಸಭೆಯಲ್ಲಿ ಅವರು ಮಾತನಾಡಿದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ನಗರೋತ್ಥಾನ ಯೋಜನೆ ಸೇರಿದಂತೆ ವಿವಿಧೆಡೆ ಪ್ರಸ್ತಾವ ಸಲ್ಲಿಸಿ ಅನುದಾನ ಪಡೆದು ಕ್ರೀಡಾಂಗಣಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದು ತಿಳಿಸಿದರು.
‘ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇರುವ ಕ್ರೀಡಾಂಗಣಗಳನ್ನು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ಇಡಬೇಕು’ ಎಂದು ಸೂಚನೆ ನೀಡಿದರು.

‘ಇಲಾಖೆಯಲ್ಲಿ ಕಾಯಂ ನೌಕರರ ಸಂಖ್ಯೆ ಬಹಳ ಕಡಿಮೆ ಇದೆ. ಹೊರಗುತ್ತಿಗೆ ನೌಕರರನ್ನೇ ಅವಲಂಬಿಸುವಂತಾಗಿದೆ. ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸೇವಕ ಇಲ್ಲದೆ ಒಬ್ಬರೇ ಕೆಲಸ ನಿರ್ವಹಿಸುತ್ತಿದ್ದೇವೆ. ಕ್ರೀಡಾಂಗಣಗಳಿಗೆ ಭದ್ರತೆ ಒದಗಿಸಲು ಕಾವಲುಗಾರರೂ ಇಲ್ಲದಂತಾಗಿದೆ. ಕೆಲಕಡೆ ಕಾಯಂ ತರಬೇತುದಾರರಿಲ್ಲ’ ಎಂದು ಸಹಾಯಕ ನಿರ್ದೇಶಕರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ‘ತರಬೇತಿದಾರರನ್ನು ಪಡೆದುಕೊಳ್ಳಲು ಇಲಾಖೆಯಿಂದ ಅನುಕೂಲ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

‘ಅಫ್ಜಲಪುರ ಬಿಟ್ಟರೆ ಬೇರೆ ಯಾವ ತಾಲ್ಲೂಕಿನಲ್ಲಿಯೂ ಕ್ರೀಡಾಂಗಣಗಳಿಗೆ ಸುತ್ತುಗೋಡೆ ಇಲ್ಲ. ತುಂಬಾ ಅಚ್ಚುಕಟ್ಟಾಗಿ ನಿರ್ಮಿಸಿದ್ದರಿಂದ ಈಜುಕೊಳಕ್ಕೆ ಬಹಳಷ್ಟು ಜನ ಬರುತ್ತಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ದುರಸ್ತಿಯಾಗಬೇಕಿದೆ’ ಎಂದು ಕಲಬುರ್ಗಿಯ ಸಹಾಯಕ ನಿರ್ದೇಶಕ ಹೇಳಿದರು.

‘ಕಲಬುರ್ಗಿ ಜಿಲ್ಲೆಗೆ ಅಗತ್ಯವಿರುವ ₹ 50 ಕೋಟಿ ಪ್ರಸ್ತಾವನೆ ಕೂಡಲೇ ಸಲ್ಲಿಸಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ ಸೂಚನೆ ನೀಡಿದರು.

‘ಈಗಾಗಲೇ ₹ 3 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಈಜುಕೊಳದಲ್ಲಿ ನೀರಿಲ್ಲದಂತಹ ಸ್ಥಿತಿಯಿದೆ. ನೂತನ ತಾಲ್ಲೂಕು ಮಾನ್ವಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಿವೇಶನದ ಅಗತ್ಯವಿದೆ. ₹ 5 ಕೋಟಿ ಅನುದಾನ ಬೇಕಿದೆ’ ಎಂದು ರಾಯಚೂರಿನ ಸಹಾಯಕ ನಿರ್ದೇಶಕ ತಿಳಿಸಿದರು.

‘ನಮ್ಮಲ್ಲಿ ತರಬೇತುದಾರರಿಲ್ಲ. ಇಲಾಖೆಯಿಂದ ನಡೆಯುತ್ತಿರುವ ವಸತಿ ನಿಲಯಕ್ಕೆ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ₹ 8 ಕೋಟಿ ಅನುದಾನ ಅಗತ್ಯವಿದೆ’ ಎಂದು ಬಳ್ಳಾರಿಯ ಸಹಾಯಕ ನಿರ್ದೇಶಕ ಹೇಳಿದರು.

ಇದಕ್ಕೆ ಆಯುಕ್ತರು, ವಸತಿ ನಿಲಯವನ್ನು ನವೀಕರಣಗೊಳಿಸುವ ಸಂಬಂಧ ಪರಿಷ್ಕೃತ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು.
‘42 ಎಕರೆ ಪ್ರದೇಶದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗಿದೆ. ಈಜುಕೊಳ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಜಿಮ್ ಇದೆ. ತರಬೇತುದಾರರಿಲ್ಲ’ ಎಂದು ಯಾದಗಿರಿಯ ಸಹಾಯಕ ನಿರ್ದೇಶಕ ತಿಳಿಸಿದರು.

‘18 ಎಕರೆ ವಿಸ್ತೀರ್ಣದಲ್ಲಿರುವ ಜಿಲ್ಲಾ ಕ್ರೀಡಾಂಗಣಕ್ಕೆ ಸುತ್ತುಗೋಡೆ ಇಲ್ಲ. ಕುಷ್ಟಗಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ ₹ 2 ಕೋಟಿ ಎಚ್‌ಕೆಆರ್‌ಡಿಬಿಗೆ ಸಲ್ಲಿಸಲಾಗಿದೆ’ ಎಂದು ಕೊಪ್ಪಳದ ಸಹಾಯಕ ನಿರ್ದೇಶಕ ಆರ್.ಸಿ.ನಾಡಗಿರ ಹೇಳಿದರು.

‘ಹುಮನಾಬಾದ್ ಪಟ್ಟಣದಲ್ಲಿ ₹ 75 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ಪೂರ್ಣಗೊಂಡಿದೆ. 200 ಮೀಟರ್ ಟ್ರ್ಯಾಕ್, ಸುತ್ತುಗೋಡೆ, ಗಾರ್ಡನ್, ಪೆವಿಲಿಯನ್ ಕಟ್ಟಡ ಸೇರಿದಂತೆ ಅಗತ್ಯ ಸೌಕರ್ಯ ಇದೆ. ಇಲ್ಲಿ ಇತರ ಕಾಮಗಾರಿ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ₹ 50 ಲಕ್ಷ ಬೇಕಿದೆ. ಭಾಲ್ಕಿ ಕ್ರೀಡಾಂಗಣಕ್ಕೆ ₹ 50 ಲಕ್ಷ ವೆಚ್ಚ ಮಾಡಲಾಗಿದೆ’ ಎಂದು ಬೀದರ್‌ನ ಸಹಾಯಕ ನಿರ್ದೇಶಕ ಗಮನ ಸೆಳೆದರು.

ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ರಮೇಶ. ಸುಭಾಷ್ ಚಂದ್ರ, ಉಪ ನಿರ್ದೇಶಕರಾದ ಬಸವರಾಜ ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT