ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗ್ರಂಥ ಸಾಹೀಬ್‌ಗೆ ಭಕ್ತಿ ಸಮರ್ಪಣೆ

ಗುರುದ್ವಾರದ ಆವರಣದಲ್ಲಿ ಬಿಡಾರ ಬಿಟ್ಟ ಸಾವಿರಾರು ಭಕ್ತರು l ವಿವಿಧ ರಾಜ್ಯಗಳಿಂದ ಭಕ್ತರ ಆಗಮನ l ತಿಂಗಳ ಹಿಂದೆಯೇ ಯಾತ್ರಿ ನಿವಾಸ ಬುಕ್‌
Last Updated 12 ನವೆಂಬರ್ 2019, 10:31 IST
ಅಕ್ಷರ ಗಾತ್ರ

ಬೀದರ್‌: ಗುರುನಾನಕ್‌ ದೇವ ಅವರ 550ನೇ ಜಯಂತಿ ಅಂಗವಾಗಿ ಇಲ್ಲಿಯ ಗುರುದ್ವಾರದಲ್ಲಿ ಒಂದು ವಾರದಿಂದ ಕಾರ್ಯಕ್ರಮ ನಡೆಯುತ್ತಿದ್ದು, ಸೋಮವಾರ ಕೀರ್ತನೆ, ಭಜನೆ ಹಾಗೂ ಪ್ರಾರ್ಥನೆ ಭಕ್ತಿಭಾವದಿಂದ ನೆರವೇರಿದವು.

ದೇಶದ ವಿವಿಧೆಡೆಯಿಂದ ರೈಲು, ಬಸ್‌, ಲಾರಿ ಹಾಗೂ ಕಾರುಗಳಲ್ಲಿ ಇಲ್ಲಿಗೆ ಬಂದಿರುವ ಸಹಸ್ರಾರು ಭಕ್ತರು ಗುರು ಗ್ರಂಥ ಸಾಹೀಬ್‌ ದರ್ಶನ ಪಡೆಯುತ್ತಿದ್ದಾರೆ. ದೇಶದಾದ್ಯಂತ ತೀರ್ಥ ಯಾತ್ರೆ ಹೊರಟಿರುವ ಅನೇಕ ಸಿಖ್ಖರು ಗುರುನಾನಕರು ಭೇಟಿ ಕೊಟ್ಟು ಪವಿತ್ರವಾಗಿಸಿದ ಸ್ಥಳಗಳ ದರ್ಶನ ಪಡೆಯುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ ಬೀದರ್‌ನ ಗುರುದ್ವಾರಕ್ಕೆ ಒಂದೂವರೆ ಲಕ್ಷ ಭಕ್ತರು ಭೇಟಿ ಕೊಟ್ಟಿದ್ದಾರೆ.

ಗುರುನಾನಕರ ಜಯಂತಿ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸೋಮವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಗುರುನಾನಕ್‌ ಪ್ರಬಂಧಕ ಕಮಿಟಿಯು ಭಕ್ತರಿಗೆ ಗುರುನಾನಕ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ. ನಗರದ ಎಲ್ಲ ಲಾಡ್ಜ್‌ಗಳು ಭರ್ತಿಯಾಗಿವೆ. ಕೆಲವರು ಹೈದರಾಬಾದ್‌ ಹಾಗೂ ಜಹೀರಾಬಾದ್‌ನ ಲಾಡ್ಜ್‌ಗಳಲ್ಲಿ ಉಳಿದುಕೊಂಡಿದ್ದಾರೆ.

ಯಾತ್ರಿ ನಿವಾಸದಲ್ಲಿ 266 ಕೊಠಡಿಗಳು ಒಂದು ತಿಂಗಳ ಹಿಂದೆಯೇ ಬುಕ್‌ ಆಗಿವೆ. ಹೀಗಾಗಿ ಆವರಣದಲ್ಲಿ ಎರಡು ಕಡೆ ತಾತ್ಕಾಲಿಕ ಟೆಂಟ್‌ಹೌಸ್‌ಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ತಂದಿರುವ ಬ್ಯಾಗ್‌ಗಳನ್ನು ಇಡಲು ಕೌಂಟರ್‌ಗಳನ್ನು ತೆರೆಯಲಾಗಿದೆ. ಪಾದರಕ್ಷೆಗಳನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಗುರುದ್ವಾರ, ಗುರುನಾನಕ್‌ ಝೀರಾ ಹಾಗೂ ಯಾತ್ರಿ ನಿವಾಸವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಗುರುನಾನಕರ 550ನೇ ಜಯಂತಿಯ ಲೋಗೊ ಅಳವಡಿಸಲಾಗಿದೆ. ಪ್ರತಿಯೊಂದು ಹಂತದಲ್ಲೂ ಸ್ವಯಂ ಸ್ವೇವಕರು ಕಾರ್ಯನಿರ್ವಹಿಸುತ್ತಿದ್ದು, ಆವರಣದಲ್ಲಿ ಒಂದು ಕಾಗದದ ತುಣುಕು ಕೂಡ ಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ.

ಕೀರ್ತನ ಕಾರ್ಯಕ್ರಮ: ಗುರುದ್ವಾರ ಶ್ರೀ ನಾನಕ್‌ ಝೀರಾ ಸಾಹೀಬ್ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್‌ ಶಾಮಿಯಾನದಲ್ಲಿ ನಡೆದ ಸೋಮವಾರದ ಕೀರ್ತನ ಕಾರ್ಯಕ್ರಮದಲ್ಲಿ ಭಕ್ತರು ಕೀರ್ತನೆ ಹಾಗೂ ಭಜನೆ ಆಲಿಸಿದರು.

ರಾಜೇಂದ್ರಸಿಂಗ್, ಗ್ಯಾನಿ ಜನಬೀರ್‌ಸಿಂಗ್, ಹಜೂರ್‌ಸಾಹೇಬ, ಬಾಬಾ ಭಟ್ನಾಸಿಂಗ್, ಜಬ್ಬೀರ್‌ ಸಿಂಗ್, ಪುತನಾಸಾಹೇಬ್, ರಣಜೀತ್‌ಸಿಂಗ್ ಖಾಲ್ಸಾ, ಬಾಂಗ್ಲಾಸಾಹೇಬ, ರವೀಂದ್ರ ಸಿಂಗ್, ಚಮನ್‌ಜೀತ್‌ಸಿಂಗ್, ಅಮೃತ್‌ಸಿಂಗ್ ಪಟಿಯಾಲಾ, ಜಸ್ಬೀರ್‌ಸಿಂಗ್, ಗುರುಪ್ರೀತಸಿಂಗ್ ಶಿಮ್‌ವಾಲೆ, ಜೀವನ್‌ಸಿಂಗ್ ಲೂಧಿಯಾನಾ, ಲಾಲ್‌ಸಿಂಗ್ ಫಖರ್, ಗುರುನಾಮ ಸಿಂಗ್, ಅಮನ್‌ದೀಪ್‌ಸಿಂಗ್, ಸತೀಂದ್ರಪಾಲ್ ಅಮೃತಸರ್, ಅಮೃತ್‌ಸಿಂಗ್‌ ಠಾಣಾ, ಗುಲಾಮ್ ಹೈದರ್‌ ಖಾದ್ರಿ ಹಫೀಜ್‌ ಅಬ್ದುರ್‌ ರೆಹಮಾನ್‌ ನಿರಂತರವಾಗಿ ಕಾರ್ಯಕ್ರಮ ಸರತಿಯಂತೆ ನೀಡುತ್ತಿದ್ದಾರೆ.

ಸರ್ವಧರ್ಮ ಸಮ್ಮೇಳನದಲ್ಲಿ ಬೆಲ್ದಾಳ ಸಿದ್ದರಾಮ ಶರಣರು, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಗುಲಾಂ ಹೈದರ್ ಖಾದ್ರಿ, ಹಾಜಿ ಅಬ್ದುಲ್ ರೆಹಮಾನ್, ಭಾಯಿ ಜೋತಿಂದ್ರ ಸಿಂಗ್, ಗ್ಯಾನಿ ಜಂಗಬೀರ್‌ಸಿಂಗ್, ಹಜೂರ್ ಸಾಹೀಬ್ ನಾಂದೇಡ್, ಗ್ಯಾನಿ ರಂಜೀತ್ ಸಿಂಗ್, ಗ್ಯಾನಿಭಾಯಿ ರಾಜೇಂದ್ರಸಿಂಗ್ ದೆಹಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT