ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದತ್ತ ಧಾವಿಸುತ್ತಿವೆ ಮಿಡತೆಗಳು

ಒಂದೇ ಅವಧಿಯಲ್ಲಿ ಬೆಳೆ ನಾಶ ಮಾಡುವ ಕೀಟಗಳು
Last Updated 28 ಮೇ 2020, 4:34 IST
ಅಕ್ಷರ ಗಾತ್ರ

ಬೀದರ್‌: ಬಹುಭಕ್ಷಕ ಮಿಡತೆಗಳು ರಾಜಸ್ಥಾನ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಮೂಲಕ ಮಹಾರಾಷ್ಟ್ರ ಪ್ರವೇಶಿಸಿವೆ. 3–4 ದಿನಗಳಲ್ಲಿ ಕರ್ನಾಟಕವನ್ನೂ ಪ್ರವೇಶಿಸುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರ ಮಹಾರಾಷ್ಟ್ರದ ಗಡಿಯಲ್ಲಿರುವ‌ ಜಿಲ್ಲೆಗಳ ಜಿಲ್ಲಾ ಆಡಳಿತಗಳಿಗೆಸೂಚನೆ ನೀಡಿದೆ.

‘ಲಕ್ಷಾಂತರ ಸಂಖ್ಯೆಯಲ್ಲಿ ಗುಂಪಿನಲ್ಲಿ ಬರುತ್ತಿರುವ ಇವು ಒಂದು ದಿನದಲ್ಲಿ 150 ಕಿಲೋ ಮೀಟರ್‌ವರೆಗೂ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಮಿಡತೆ ಒಂದು ದಿನದಲ್ಲಿ ತನ್ನಷ್ಟೇ ತೂಕದ ಆಹಾರ ಸೇವಿಸುತ್ತದೆ. ಮಿಡತೆಗಳ ಸೈನ್ಯ ಒಂದು ದಿನದಲ್ಲಿ ಸುಮಾರು 35,000 ಮಂದಿ ತಿನ್ನುವಷ್ಟು ಆಹಾರ ಧಾನ್ಯವನ್ನು ತಿಂದು ಮುಗಿಸುತ್ತದೆ’ ಎನ್ನುತ್ತಾರೆ ತಜ್ಞರು.

‘ನಿರ್ದಿಷ್ಟ ಹವಾಮಾನದ ಸಂದರ್ಭದಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಬಿರು ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದರೆ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸುತ್ತವೆ. ಉಷ್ಣಾಂಶ ಏರಿಕೆಯಾದರೆ, ಇವು ಉಗ್ರ ಸ್ವರೂಪ ಪಡೆದು ದುಪ್ಪಟ್ಟು ಆಹಾರ ಸೇವಿಸುತ್ತವೆ. 3ರಿಂದ 5 ತಿಂಗಳು ಬದುಕಿರುತ್ತವೆ. ಬೀದರ್‌, ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸದ್ಯ 40ಕ್ಕಿಂತ ಹೆಚ್ಚು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ. ಭಾನುವಾರದ ನಂತರ ಮಳೆ ಸುರಿಯುವ ಸಾಧ್ಯತೆಯೂ ಇದೆ. ಮಿಡತೆಗಳ ಸಂತಾನಭಿವೃದ್ಧಿಗೆ ಪೂರಕ ವಾತಾವರಣ ಇದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್‌.ಎಂ. ಹೇಳುತ್ತಾರೆ.

ಮಹಾರಾಷ್ಟ್ರದ ವಿದರ್ಭ ಪ್ರದೇಶದ ನಾಗಪುರ ಹಾಗೂ ಅಮರಾವತಿ ಜಿಲ್ಲೆಯಲ್ಲಿ ರಣ ಬಿಸಿಲಿನ ಮಧ್ಯೆಯೇ ಅಕಾಲಿಕ ಮಳೆ ಸುರಿದಿದೆ. ಹೀಗಾಗಿ ಇವುಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇವುಗಳ ಹಾವಳಿ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗಾಗಲೇ ಮಿಡತೆ ಎಚ್ಚರಿಕೆ ಸಂಸ್ಥೆ (ಎಲ್‌ಡಬ್ಲ್ಯುಒ)ಯನ್ನು ಸ್ಥಾಪಿಸಿದೆ. ಈ ಸಂಸ್ಥೆ ಕೃಷಿ ಇಲಾಖೆ ಮೂಲಕ ಆಯಾ ರಾಜ್ಯಗಳಿಗೆ ಮಾಹಿತಿ ರವಾನಿಸುತ್ತಿದೆ.

ಮಿಡತೆಗಳ ಹಾವಳಿ ತಪ್ಪಿಸಲು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಡ್ರೋಣ್‌ಗಳ ಮೂಲಕ ಮಲಾತಿಯಾನ್‌ ಎನ್ನುವ ಆರ್ಗಾನೋಫಾಸ್ಫೇಟ್‌ ಕ್ರಿಮಿನಾಶಕ ಸಿಂಪಡಿಸುವುದು ಸೂಕ್ತ. ಬೆಳೆ ಇರುವ ಪ್ರದೇಶದಲ್ಲಿ ಕ್ಲೋರೋಪಿರಿಫಾಸ್‌ ಅನ್ನು ಸಿಂಪಡಿಸಬಹುದಾಗಿದೆ ಎಂದು ಸಂಸ್ಥೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಬುಧವಾರ ಕೃಷಿ, ತೋಟಗಾರಿಕೆ, ಅರಣ್ಯ, ಕಂದಾಯ ಇಲಾಖೆಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ತುರ್ತು ಸಭೆ ನಡೆಸಿ ಸಮಾಲೋಚನೆ ನಡೆಸಿದರು.

‘ಜಿಲ್ಲೆಯಲ್ಲಿ ಕೆಲ ರೈತರು ಅಲ್ಲಲ್ಲಿ ತರಕಾರಿ ಬೆಳೆದಿದ್ದನ್ನು ಬಿಟ್ಟರೆ ಗಡಿ ಪ್ರದೇಶದಲ್ಲಿ ಯಾವುದೇ ಬೆಳೆ ಇಲ್ಲ. ಹೀಗಾಗಿ ಮಿಡತೆಗಳು ಇತ್ತ ಬರುವ ಸಾಧ್ಯತೆ ಕಡಿಮೆ’ ಎಂದುಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT