ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಾವಧಿಗೆ ತರಕಾರಿ, ದೀರ್ಘಾವಧಿಗೆ ಹಣ್ಣು ಬೆಳೆಯಿರಿ: ವಿಶ್ವನಾಥ ಜಿಳ್ಳೆ

ಆಧುನಿಕ ಪದ್ಧತಿ ಅನುಸರಿಸಿ ವೈವಿಧ್ಯಮಯ ಬೆಳೆ ಬೆಳೆದರೆ ಹಾನಿಯೇ ಇಲ್ಲ
Last Updated 17 ಜೂನ್ 2022, 14:19 IST
ಅಕ್ಷರ ಗಾತ್ರ

ಬೀದರ್: ಇಲ್ಲಿ ಶುಕ್ರವಾರ ನಡೆದ ‘‍ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮಕ್ಕೆ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಮುಂಗಾರು ಆರಂಭದಲ್ಲಿ ಬೆಳೆಯಬಹುದಾದ ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಅವರು ಪಡೆದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವಿಶ್ವನಾಥ ಜಿಳ್ಳೆ ಅವರು ಬೀದರ್‌ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯಿಂದಲೂ ಕರೆ ಮಾಡಿದ ರೈತರಿಗೆ ಮಾಹಿತಿ ಒದಗಿಸಿದರು. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ವಿವಿಧ ಯೋಜನೆಗಳ ಬಾಕಿ ಹಣವನ್ನು ಒಂದು ತಿಂಗಳಲ್ಲಿ ಬಿಡುಗಡೆ ಮಾಡುವ ಬಗ್ಗೆಯೂ ಭರವಸೆ ನೀಡಿದರು.

ತೋಟಗಾರಿಕೆ ಕ್ಷೇತ್ರದಲ್ಲಿ ಇರುವ ವಿಪುಲ ಅವಕಾಶ, ಹೊಸ ತಳಿಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಇರುವ ರಿಯಾಯಿತಿಗಳ ಬಗ್ಗೆ ರೈತರು ಕರೆ ಮಾಡಿ, ಮಾಹಿತಿ ಪಡೆದರು.

ಚಳಕಾಪುರವಾಡಿಯ ಸುಭಾಷ ಕಾಶೆಪ್ಪ

* ಕೃಷಿ ಹೊಂಡ ನಿರ್ಮಿಸಿದರೂ ಎರಡನೇ ಘಟಕದ ಬಾಕಿ ಹಣ ಬಿಡುಗಡೆಯಾಗಿಲ್ಲ. ಯಾವಾಗ ಕೊಡುತ್ತೀರಿ?

ಉ: ಕಳೆದ ವರ್ಷ ತೋಟಗಾರಿಕೆ ಇಲಾಖೆಗೆ ಯೋಜನಾ ಗಾತ್ರದಷ್ಟು ಹಣ ಬಿಡುಗಡೆ ಆಗಿರಲಿಲ್ಲ. ಈ ವರ್ಷ ಜುಲೈ ಅಂತ್ಯದವರೆಗೆ ಹಿಂದಿನ ವರ್ಷದ ಬಾಕಿ ಹಣ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಹುಡಗಿ ಗ್ರಾಮದ ರೈತ ಸತೀಶ್

* ಹೊಲದಲ್ಲಿ ಪಪ್ಪಾಯ ಬೆಳೆಸಲು ನಿರ್ಧರಿಸಿದ್ದೇನೆ. ಇದು ಹೊರತುಪಡಿಸಿದರೆ ಬೇರೆ ಯಾವ ಬೆಳೆಗೆ ಪ್ರೋತ್ಸಾಹ ಯೋಜನೆ ಇದೆ?

ಉ: ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆ ಹಾಗೂ ನರೇಗಾ ಯೋಜನೆಯಡಿ ಸೌಲಭ್ಯ ಪಡೆದು ಪಪ್ಪಾಯ ಬೆಳೆಸಬಹುದು. ಇದಕ್ಕೆ ಇಲಾಖೆಯಿಂದ ನೆರವು ದೊರೆಯಲಿದೆ. ವಿವರಗಳಿಗೆ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಬಹುದು.

ಚಿಂಚೋಳಿಯ ರಘು ದೇಸಾಯಿ

* ನಮ್ಮ ತೋಟದಲ್ಲಿ ಐದು ವರ್ಷಗಳಿಂದ ಪಪ್ಪಾಯ ಬೆಳೆಸುತ್ತಿದ್ದೇನೆ. ಈಗ ರೋಗ ಬಾಧೆ ಕಾಣಿಸಿಕೊಳ್ಳುತ್ತಿದೆ. ಪ್ರತಿ ವರ್ಷ ವಿಮೆ ಕಂತು ಕಟ್ಟುತ್ತಿದ್ದೇನೆ. ಆದರೆ, ಪರಿಹಾರ ಬಂದಿಲ್ಲ. ಏನು ಮಾಡಬೇಕು?

ಉ: ಆರಂಭದಲ್ಲೇ ರೋಗ ಮುಕ್ತ ಸಸಿಗಳನ್ನು ಬೆಳೆಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ನಿಮ್ಮ ತಾಲ್ಲೂಕಿನ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದರೆ ಸಮಸ್ಯೆಗೆ ಪರಿಹಾರ ತಿಳಿಸುವರು.

ಚಾಂಗಲೇರಾದ ಬಾಬುರಾವ್‌ ಪಾಟೀಲ, ಖಟಕಚಿಂಚೋಳಿಯ ಶಿವಲಿಂಗ

* ಲಿಂಬೆ ತೋಟ ಮಾಡಲು ನಿರ್ಧರಿಸಿದ್ದೇನೆ. ಒಂದಿಷ್ಟು ಸಲಹೆ ಕೊಡಿ

ಉ: ಜಿಲ್ಲೆಯಲ್ಲಿ ಎರಡು ತಳಿಯ ಲಿಂಬೆ ಬೆಳೆಸಬಹುದು. ಹೈಬ್ರೀಡ್‌ ತಳಿಯ ಲಿಂಬೆ 3 ವರ್ಷಗಳಲ್ಲಿ ಬೆಳೆದರೆ, ಸ್ಥಳೀಯ ಲಿಂಬೆ ಏಳು ವರ್ಷಗಳಲ್ಲಿ ಫಲ ನೀಡುತ್ತದೆ. ತೋಟಗಾರಿಕೆ ಇಲಾಖೆಯಲ್ಲಿ ಸುಧಾರಿತ ತಳಿಯ ಸಸಿಗಳು ಲಭ್ಯ ಇವೆ. ಅವುಗಳನ್ನು ಖರೀದಿಸಿ ಲಿಂಬೆ ತೋಟ ಮಾಡಬಹುದು.

ಬೀದರ್‌ನ ಶಿವಕುಮಾರ ಗಾದಗೆ

* ಗೋಡಂಬಿ ಬೆಳೆಯಲು ಆಲೋಚನೆ ನಡೆಸಿದ್ದೇನೆ. ಇದನ್ನು ಹೊರತು ಪಡಿಸಿ ಬೇರೆ ಏನು ಬೆಳೆಯಬಹುದು?

ಉ: ನಗರದಲ್ಲಿ ಗೋಡಂಬಿ ಸಂಸ್ಕರಣಾ ಘಟಕ ಇದೆ. ಗೋಡಂಬಿಗೆ ಉತ್ತಮ ಬೆಲೆಯೂ ಇದೆ. ಬೀದರ್‌ನಲ್ಲಿ ಭಾಸ್ಕರ್, ವೆಂಗುರ್ಲಾ–4 ತಳಿಯ ಗೋಡಂಬಿ ಸಸಿಗಳು ಲಭ್ಯ ಇವೆ. ಈ ತಳಿಗೆ ರೋಗ, ಕೀಟಬಾಧೆ ಕಡಿಮೆ. ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ಕೊಟ್ಟು ವಿಸ್ತೃತ ಮಾಹಿತಿ ಪಡೆಯಿರಿ.

ಭಾಲ್ಕಿ ತಾಲ್ಲೂಕಿನ ಡಾವರಗಾಂವದ ರಾಜಶೇಖರ ಶೇರಿಕಾರ್

* ಕೆರೆ ಪಕ್ಕದಲ್ಲಿ ಎರಡು ಎಕರೆ ಜಮೀನು ಇದೆ. ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ಯಾವ ಬೆಳೆ ಬೆಳೆಯಬಹುದು?

ಉ: ಋತುಮಾನ ಆಧಾರಿತ ಬೆಳೆಯನ್ನೇ ಬೆಳೆಯಬೇಕು. ಭೂಮಿ ಜವಳುಗಟ್ಟಿದರೆ ಯಾವುದೇ ಮರ ಬೆಳೆದರೂ ಅದು ಒಣಗುತ್ತದೆ. ಹುಣಸೆ ಮರ ಬೆಳೆದರೆ ಒಳ್ಳೆಯದು. ಇದಕ್ಕೆ ಮಳೆಗಾಲದಲ್ಲಿ ತೇವಾಂಶ ಸಹಿಸಿಕೊಳ್ಳುವ ಶಕ್ತಿ ಇದೆ.

ಖಟಕಚಿಂಚೋಳಿಯ ರೇವಣಸಿದ್ದಪ್ಪ

* ಕಲ್ಲಂಗಡಿ ಬೆಳೆಯುತ್ತಿದ್ದೇನೆ. ಉತ್ತಮ ಬೆಲೆ ದೊರಕುತ್ತಿಲ್ಲ ಏನು ಮಾಡಬೇಕು?

ಉ: ನವೆಂಬರ್‌ನಲ್ಲಿ ನಾಟಿ ಮಾಡಿದರೆ ಒಳ್ಳೆಯದು. ಬೇಸಿಗೆಯಲ್ಲಿ ಉತ್ತಮ ಬೆಲೆ ದೊರಕುತ್ತದೆ. ಪ್ರಸ್ತುತ ಹಿರೇಕಾಯಿ, ನುಗ್ಗೆ, ಕುಂಬಳಕಾಯಿ ಬೆಳೆಯುವುದು ಸೂಕ್ತ.

ಸಿಂದಬಂದಗಿಯ ಮಲ್ಲಿಕಾರ್ಜುನ ಸ್ವಾಮಿ

* ಎರಡು ಎಕರೆಯಲ್ಲಿ ಎಲೆಕೋಸು ಬೆಳೆಸಿದ್ದೇನೆ. ಬೇರೆ ಏನು ಬೆಳೆಸಬಹುದು?

ಉ: ಜುಲೈನಲ್ಲಿ ಬಾಳೆ ಗಿಡ ಬೆಳೆಸಬಹುದು. ಇಲಾಖೆಯಿಂದ ರಿಯಾಯಿತಿ ದರದಲ್ಲಿ ಅಂಗಾಂಶ ಕೃಷಿ ಬಾಳೆ ಕೊಡುತ್ತಿದ್ದೇವೆ. ಮಣ್ಣು ಪರೀಕ್ಷೆ ನಡೆಸಿ ನಾಟಿ ಮಾಡಬೇಕು. ನುಗ್ಗೆಯನ್ನೂ ಬೆಳೆಸಬಹುದು.

* ಹನಿ ನೀರಾವರಿಗೆ ಸಹಾಯಧನ ಇದೆಯೇ ?

ಚಿಟಗುಪ್ಪ ತಾಲ್ಲೂಕಿನ ಕಾರಪಾಕಪಳ್ಳಿಯ ಗುಂಡಪ್ಪ

ಉ: ಹನಿ ನೀರಾವರಿ ಅಳವಡಿಸಿಕೊಳ್ಳಲು ಸರ್ಕಾರ ನೆರವು ನೀಡುತ್ತಿದೆ. ಇಲಾಖೆಯಿಂದಲೂ ರಿಯಾಯಿತಿ ಪಡೆಯಬಹುದು.

* ತೋಟಗಾರಿಕೆ ಸಸಿಗಳ ಬೆಲೆ ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಿಲ್ಲವೆ? ಬದನೆಕಾಯಿಗೆ ಬೆಲೆ ಸಿಗುತ್ತಿಲ್ಲ?

ರಾಮಪುರದ ಮಹೇಶ ಮಾಶೆಟ್ಟಿ

ಉ: ರೈತರು ಒಂದೇ ಬೆಳೆಗೆ ಅಂಟಿಕೊಳ್ಳಬಾರದು ವೈವಿಧ್ಯಮಯ ಬೆಳೆಗಳನ್ನು ಬೆಳೆಯಬೇಕು. ರಿಸ್ಕ್‌ ಕಡಿಮೆ ಮಾಡಿಕೊಳ್ಳಬೇಕು.

* ಶ್ರೀಗಂಧ ಬೆಳೆಯಲು ನಿರ್ಧರಿಸಿದ್ದೇನೆ. ಸಹಾಯಧನ ಇದೆಯೇ?

ಕೌಠಾದ ಉಮಾಕಾಂತ

ಉ: ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯಿಂದಲೂ ನೆರವು ಪಡೆದು ಶ್ರೀಗಂಧ ಬೆಳೆಯಬಹುದು. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಲ್ಲಿ ಸಹಾಯಧನ ಪಡೆಯಲು ಅವಕಾಶ ಇದೆ.

* ಎರಡು ಎಕರೆ ಪಪ್ಪಾಯಿ ಬೆಳೆಸಲು ನಿರ್ಧರಿಸಿದ್ದೇನೆ ಸಲಹೆ ಕೊಡಿ?

ಆಳಂದದ ರೈತ ರವಿಕುಮಾರ ನಿಂಬಾಳ

ಉ: ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆ ಅಡಿಯಲ್ಲಿ ಸಹಾಯಧನ ಇದೆ. ಪಪ್ಪಾಯಿ ಬೆಳೆಸಬಹುದು.

* ಆಲೂಗಡ್ಡೆ ಬೆಳೆದಿದ್ದೇನೆ. ಒಳ್ಳೆಯ ಬೆಲೆ ಸಿಗಲಿಲ್ಲ. ಏನು ಮಾಡಬೇಕು?

ರಾಜಗೀರಾದ ಗುರುನಾಥ ರಾಜಗೀರಾ

ಉ: ಅರೆಮಲೆನಾಡು ಪ್ರದೇಶದಲ್ಲಿ ಹಣ್ಣು, ತರಕಾರಿ, ಹೂವು ಬೆಳೆಯಬೇಕು ವೈಜ್ಞಾನಿಕ ಕೃಷಿ ಮಾಡಬೇಕು. ಅಂದಾಗ ಮಾತ್ರ ರೈತರು ಉತ್ತಮ ಆದಾಯ ಪಡೆಯಲು ಸಾಧ್ಯವಿದೆ.

ವಡಗಾಂವದ ಆನಂದಕುಮಾರ

* ಯಾವ ಹೂವು ಬೆಳೆದರೆ ಲಾಭ ಗಳಿಸಬಹುದು?

ಉ: ಮೊದಲು ಹೊಲದ ಮಣ್ಣು ಪರೀಕ್ಷೆ ಮಾಡಿಸಿ. ಪೋಷಕಾಂಶ ನೋಡಿ ನಿರ್ಧಾರ ತೆಗೆದುಕೊಳ್ಳಿ. ಮಣ್ಣು ಪರೀಕ್ಷೆ ವರದಿ ನೋಡಿ ತೋಟಗಾರಿಕೆ ಕಚೇರಿ ಇಲಾಖೆಯ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡುವರು.

ಹುಲಸೂರಿನ ಬೇಲೂರು ಕಾಮರಾಜ

* ಮಾವಿನ ತೋಟ ಮಾಡಬೇಕಿದೆ, ಸಲಹೆ ಕೊಡಿ.

ಉ: ಉತ್ತಮ ತಳಿಯ ಸಸಿ ಆಯ್ಕೆ ಮಾಡಿಕೊಂಡು ಮಾವಿನ ತೋಟ ಮಾಡಿದರೆ ಮೂರನೇ ವರ್ಷಕ್ಕೆ ಫಸಲು ಪಡೆಯಬಹುದು. ಇದರಿಂದ ಗುಣಮಟ್ಟದ ಹಣ್ಣು ಹಾಗೂ ಉತ್ತಮ ಆದಾಯ ದೊರಕಲಿದೆ.

ಬೀದರ್‌ನ ವೀರಭದ್ರಪ್ಪ ಉಪ್ಪಿನ್, ಡಾಬರಗಾಂವದ ಗೋವಿಂದರಾವ್‌ ತುಪದೆ, ನಿರ್ಣಾದ ಶಿವಾನಂದ, ಬೀದರ್‌ ತಾಲ್ಲೂಕಿನ ಸಿದ್ದಾಪುರದ ಸಂಗಮೇಶ ಬಿರಾದಾರ, ಮಹೇಶ ಗೋರನಾಳಕರ್, ಶಿವಕುಮಾರ, ಖಟಕಚಿಂಚೋಳಿಯ ಆಕಾಶ, ಕಲಬುರಗಿ ಜಿಲ್ಲೆ ಆಳಂದದ ಗೋವಿಂದ ಗುಂಡದ, ಸುಧಾಕರ ಪಾತರಪಳ್ಳಿ ಪ್ರಶ್ನೆಗಳನ್ನು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT