ಬೀದರ್: ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕಚೇರಿಗಳ ಉದ್ಘಾಟನೆ ನಗರದ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಿ, ಗ್ಯಾರಂಟಿ ಯೋಜನೆಗಳ ಲಾಭ ಪ್ರತಿಯೊಬ್ಬರಿಗೂ ಸಿಗಬೇಕು. ಇನ್ನೂ ಗ್ಯಾರಂಟಿಗಳ ಲಾಭ ಯಾರಿಗೆ ಸಿಕ್ಕಿಲ್ಲವೋ ಅಂತಹವರಿಗೆ ಅದರ ಲಾಭ ತಲುಪಿಸುವ ಕೆಲಸ ಅನುಷ್ಠಾನ ಸಮಿತಿಯವರು ಮಾಡಬೇಕು ಎಂದು ತಿಳಿಸಿದರು.
ಬಡ ಜನರಿಗೆ ಮೂಲಭೂತ ಅವಶ್ಯಕತೆಗಳಾದ ಅನ್ನ, ವಸತಿ, ಬಟ್ಟೆಗಳನ್ನು ಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಗ್ಯಾರಂಟಿ ಯೋಜನೆಗಳು ಮುಂದುವರೆಯುವುದಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೆ ‘ಗ್ಯಾರಂಟಿ’ ನಿಲ್ಲುವುದಿಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಹೇಳಿದರು.
ಗೃಹ ಲಕ್ಷ್ಮಿ ಯೋಜನೆಯ ಲಾಭ ರಾಜ್ಯದ 1.20 ಕೋಟಿ ಮಹಿಳೆಯರು ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 3.20 ಲಕ್ಷ ಮಹಿಳೆಯರಿಗೆ ಇದರ ಲಾಭ ಸಿಗುತ್ತಿದೆ. ಅವರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೇರ ವರ್ಗಾವಣೆ ಮೂಲಕ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.
ರಾಜ್ಯದ ನಾಲ್ಕು ಕೋಟಿ ಜನರು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಗೃಹ ಜ್ಯೋತಿ ಅಡಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಇದರ ಲಾಭ ಸಿಗುತ್ತಿದೆ. ಜಿಲ್ಲೆಯಲ್ಲಿ 3.60 ಲಕ್ಷ ಜನರು ಇದರ ಲಾಭ ಪಡೆಯುತ್ತಿದ್ದಾರೆ. ಯುವ ನಿಧಿ ಯೋಜನೆಯ ಲಾಭ ಏಳು ಸಾವಿರ ನಿರುದ್ಯೋಗಿಗಳಿಗೆ ಸಿಗುತ್ತಿದೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಮಾತನಾಡಿ, ಸರ್ಕಾರದ ಕೆಲಸ ದೇವರ ಕೆಲಸ. ಜನ ಸೇವೆಯೇ ಜನಾರ್ದನ ಸೇವೆ. ಮಹಿಳೆಯರ ಕಷ್ಟ ಅರ್ಥಮಾಡಿಕೊಂಡ ನಮ್ಮ ಸರ್ಕಾರ ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲರೂ ಸೇರಿ ನಮ್ಮ ಕೈಲಾದಷ್ಟು ಜನರಿಗೆ ಅನುಕೂಲವಾಗುವ ಕೆಲಸ ಮಾಡೋಣ ಎಂದು ಹೇಳಿದರು.
ಎಂಟು ಜನರಿಗೆ ಬಿ.ಎಫ್.ಟಿ ಪ್ರಮಾಣ ಪತ್ರಗಳು ಹಾಗೂ 21 ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಕಂಪ್ಯೂಟರ್, ಮೊಬೈಲ್‌ಗಳನ್ನು ಸಚಿವರು ವಿತರಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಾರುತಿ ಬಂಗಾರೆ ಮತ್ತಿತರರು ಹಾಜರಿದ್ದರು.
ಬೆಳಗಿನ ಕಾರ್ಯಕ್ರಮ ಸಂಜೆ ಆರಂಭ
ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸಂಜೆ 4ಕ್ಕೆ ಬಂದದ್ದರಿಂದ ಐದು ಗಂಟೆ ವಿಳಂಬವಾಗಿ ಸಮಾರಂಭ ಜರುಗಿತು. ಸಚಿವರ ನಿರೀಕ್ಷೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಬೆಳಿಗ್ಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಧಿಕಾರಿಗಳು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಮಾಧ್ಯಮದವರು ಸಕಾಲಕ್ಕೆ ಬಂದಿದ್ದರು. ಕೆಲವರು ಸಚಿವರಿಗೆ ಅಹವಾಲು ಸಲ್ಲಿಸುವುದಕ್ಕೂ ಆಗಮಿಸಿದ್ದರು. ಆದರೆ ಕಾದು ಕಾದು ಸುಸ್ತಾಗಿ ಜನ ಅಲ್ಲಿಂದ ನಿರ್ಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.