ಭಾನುವಾರ, ಆಗಸ್ಟ್ 18, 2019
25 °C
ಗುರು ಪೂರ್ಣಿಮಾ ಮಹೋತ್ಸವದಲ್ಲಿ ಶಿವಕುಮಾರ ಸ್ವಾಮೀಜಿ ನುಡಿ

ಗುರುವಿಗಿದೆ ಅರಿವಿನ ಬೆಳಕು ನೀಡುವ ಶಕ್ತಿ

Published:
Updated:
Prajavani

ಬೀದರ್‌: ‘ಗುರುವಿನ ಸ್ಥಾನ ಶ್ರೇಷ್ಠವಾದುದು. ವ್ಯಕ್ತಿ, ಗುರುವಿನ ಶರಣದಲ್ಲಿದ್ದರೆ ಸುಜ್ಞಾನಪೂರ್ವಕ ಅರಿವಿನೊಂದಿಗೆ ಬದುಕನ್ನು ಸುಂದರಗೊಳಿಕೊಳ್ಳಲು ಸಾಧ್ಯವಿದೆ. ಅರಿವಿನ ಬೆಳಕು ನೀಡುವ ಶಕ್ತಿ ಗುರುವಿಗೆ ಇದೆ’ ಎಂದು ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ನುಡಿದರು.

ನಗರದ ಚಿದಂಬರಾಶ್ರಮ ಸಿದ್ಧಾರೂಢ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಗುರು ಪೂರ್ಣಿಮಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮನುಷ್ಯ ತನ್ನ ಜೀವನದಲ್ಲಿ ಸಹಜವಾಗಿ ಸುಖ, ಸಮೃದ್ಧಿ ಹಾಗೂ ಆತ್ಮರಾಮ ರೂಪವಾದ ಆನಂದವನ್ನು ಅನುಭವಿಸಬೇಕೆಂದು ಬಯಸುತ್ತಾನೆ. ಇವುಗಳ ಪ್ರಾಪ್ತಿಗೆ ಮೊದಲು ಜ್ಞಾನದ ಅವಶ್ಯಕತೆ ಇರುತ್ತದೆ. ಜ್ಞಾನ ಗುರುವಿನಿಂದ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.

‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಗುರು ಕೃಪೆಯಾದರೆ ಸ್ವತಃ ಪರಮಾತ್ಮನೇ ನಿಮ್ಮ ಹತ್ತಿರ ಬರುತ್ತಾನೆ. ಸದ್ಗುರುವಿನಲ್ಲಿ ನಂಬಿಕೆ ಬಹಳ ಮುಖ್ಯ’ ಎಂದು ಹೇಳಿದರು.

‘ಗುರು ಸರ್ವಜ್ಞ. ಅವನಲ್ಲಿ ಅಪಾರ ಶಕ್ತಿ ಇರುತ್ತದೆ. ಸದ್ಗುರು ಕೃಪೆಯಾಗುವುದು ಬಹಳ ಕಠಿಣ. ಆದ್ದರಿಂದ ಗುರುವಿನೊಲುಮೆ ದೊರೆಯಲು ಗುರು ಚರಣದಲ್ಲಿ ಭಕ್ತಿ ಇಡು. ಗುರು ಭಕ್ತಿ ಹಾಳಾದರೆ ಇದ್ದೂ ಸತ್ತಂತೆ. ನಗರದಲ್ಲಿ ‘ಗುಂಪಾ’ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣ ಸದ್ಗುರು ಸಿದ್ಧಾರೂಢರಲ್ಲಿಟ್ಟ ಭಕ್ತಿ. ಸದ್ಭಕ್ತರು ಸಿದ್ಧಾರೂಢರಲ್ಲಿ ಭಕ್ತಿಯಿಟ್ಟು ನಡೆದರೆ ಕಷ್ಟಗಳು ಸಹಜವಾಗಿ ದೂರಾಗುತ್ತವೆ’ ಎಂದು ತಿಳಿಸಿದರು.

ಗುರುದೇವಾಶ್ರಮದ ಗಣೇಶಾನಂದ ಮಹಾರಾಜರು ಮಾತನಾಡಿ, ‘ಸದ್ಗುರು ಚರಣದರ್ಶನ ಯಾರಿಗೆ ಲಭಿಸಿದೆಯೋ ಅವರಿಗೆ ಭಗವಂತನ ಕೃಪೆಯಾಗಿದೆ ಎಂದರ್ಥ. ಭಗವಂತ ನಮ್ಮ ಮೇಲೆ ಕೃಪೆ ಮಾಡಿದ್ದಾನೆಂದೂ ಅರ್ಥೈಸಿಕೊಳ್ಳಬಹುದು’ ಎಂದು ಹೇಳಿದರು.

ಇಂಡಿಯ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ‘ಭೂಮಿಯ ಮೇಲೆ ಹುಟ್ಟಿದವನು ಒಂದು ದಿನ ಸಾಯಿಲೇಬೇಕು. ಯಾರು ಸದ್ಗುರು ಕೃಪೆಗೆ ಪಾತ್ರರಾಗುತ್ತಾರೋ ಅವರು ಧನ್ಯರು. ಸದ್ಗುರು ಜನ್ಮಕೊಟ್ಟ ತಂದೆ-ತಾಯಿಗಿಂತಲೂ ಶ್ರೇಷ್ಠ’ ಎಂದು ಬಣ್ಣಿಸಿದರು.

ಮಾತೆ ಯೋಗೇಶ್ವರಿ ತಾಯಿ ಮಾತನಾಡಿ, ‘ಆಧ್ಯಾತ್ಮಿಕ ದಾರಿಯಲ್ಲಿ ಸಾಗುವವರಿಗೆ ಈ ದಿನ ಅತಿ ಮಹತ್ವದ ದಿನ. ಇದು ಗುರುವಿನ ಉಪಕಾರ ಸ್ಮರಣೆಯ ದಿನ. ಹೆತ್ತವರ ಉಪಕಾರ ತೀರಿಸಬಹುದು. ಆದರೆ ದುಃಖವನ್ನು ತೊಲಗಿಸಿ ಆನಂದ ಪ್ರಾಪ್ತಿ ಮಾಡುವ ಸದ್ಗುರುವಿನ ಉಪಕಾರ ತೀರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಗೋಪಾಲ ಶಾಸ್ತ್ರಿ ಕಲ್‍ಹಂಗರಗಾ ಮಾತನಾಡಿ, ‘ಗುರು ಪೂರ್ಣಿಮೆಗೆ ವ್ಯಾಸಪೂರ್ಣಿಮಾ ಎಂದೂ ಕರೆಯುತ್ತಾರೆ. ಕಾರಣ ಇದು ವ್ಯಾಸರು ಜನಿಸಿದ ದಿನ. ವೇದಗಳ ವಿಭಜನೆ ಮಾಡಿದ ಕೀರ್ತಿ ವ್ಯಾಸರದು. ಅದಕ್ಕೆ ವೇದವ್ಯಾಸರು ಎಂದು ಹೆಸರುವಾಸಿಯಾದರು’ ಎಂದು ತಿಳಿಸಿದರು.

‘ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ದಾರಿಗೆ ತರುವವನೇ ಗುರು. ಕಾವಿತೊಟ್ಟ ಮಾತ್ರಕ್ಕೆ ಗುರುವಲ್ಲ. ಗುರು, ಶಿಷ್ಯನ ಅಜ್ಞಾನವನ್ನು ಹೋಗಲಾಡಿಸುವ ಸಾಮರ್ಥ್ಯ ಉಳ್ಳವನಾಗಿರಬೇಕು. ಹೈನಕ್ಕಾಗಿ ಆಕಳು ಕಟ್ಟಿದ್ದರೆ ಹೆಂಡಿ ತಾನೆ ಬಂದಂತೆ. ಜ್ಞಾನಕ್ಕಾಗಿ ಕಾವಿ ತೊಟ್ಟರೆ ಭೋಗ ತಾನೇ ಹಿಂಬಾಲಿಸುತ್ತದೆ’ ಎಂದರು.

ನಾಗಪುರದ ಮನಿಷಾತಾಯಿ ಮಾತನಾಡಿದರು. ಶ್ರೀಗಳ ಆಶೀರ್ವಚನದ ನಂತರ ಮಠದ ಸಕಲ ಸಾಧಕ-ಸಾಧಕಿಯರಿಂದ ಷೋಡಶೋಪಚಾರ ಮೂಲಕ ಶ್ರೀಗಳ ಪಾದಪೂಜೆ ಜರುಗಿತು. ಬಸವಂತರಾಯ ರೇವಣಸಿದ್ದಪ್ಪ ಬಿರಾದಾರ ಅವರು ನಾಣ್ಯಗಳಿಂದ ತುಲಾಭಾರ ಸೇವೆ ಮಾಡಿದರು. ಶ್ರೀಗಳಿಗೆ ಸುವರ್ಣ ಕಿರೀಟ ಧಾರಣೆ ಹಾಗೂ ಕನಕ ಪುಷ್ಪ ವೃಷ್ಟಿ ಮಾಡಲಾಯಿತು.

ಮುಂಬೈ, ಪುಣೆ, ನಾಸಿಕ್, ನಾಗಪೂರ, ಲಾತೂರ್‌, ಉದಗಿರ, ಹೈದರಾಬಾದ್, ಹುಬ್ಬಳ್ಳಿ ಹಾಗೂ ಗೋವಾದಿಂದ ಬಂದಿದ್ದ ಸಹಸ್ರಾರು ಸದ್ಭಕ್ತರು ಪಾಲ್ಗೊಂಡಿದ್ದರು.

ಚನ್ನಬಸಪ್ಪ ಹಾಲಹಳ್ಳಿ, ಬಿ.ಜಿ. ಶೆಟಕಾರ, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪೂರ, ಕರಬಸಪ್ಪ ಮುಸ್ತಾಪೂರೆ, ಮಡಿವಾಳಪ್ಪ ಗಂಗಶೆಟ್ಟಿ, ಈಶ್ವರಗೌಡ ಕಮಡಳ್ಳಿ, ಭಾರತಿಬಾಯಿ ಕಣಜಿ, ಉದಯಭಾನು ಹಲವಾಯಿ, ಹಾವಗಿರಾವ್ ಮೈಲಾರೆ, ಸಹಜಾನಂದ ಕಂದಗೂಳ, ಪ್ರಭು ಬೆಣ್ಣೆ, ಡಾ. ವಿ.ಎಸ್. ಪಾಟೀಲ, ರಮೇಶಕುಮಾರ ಪಾಟೀಲ, ಲಕ್ಷ್ಮಣ ಎಂ., ಪೂಜಾರಿ, ಶ್ರೀನಾಥ ಮಸ್ಕಲೆ, ಶರಣಬಸಪ್ಪ ಪೂಜಾರಿ, ಡಾ.ಚಂದ್ರಪ್ಪ ಭತಮುರ್ಗೆ ಇದ್ದರು.

Post Comments (+)