ಗುರುದ್ವಾರಕ್ಕೆ ಸ್ವರ್ಣ ಮಂದಿರದ ಮೆರುಗು

7
ಅಮೃತ ಶಿಲೆಗಳಿಂದ ನಿರ್ಮಿಸಿದ ಗುರುದ್ವಾರ ಉದ್ಘಾಟನೆ

ಗುರುದ್ವಾರಕ್ಕೆ ಸ್ವರ್ಣ ಮಂದಿರದ ಮೆರುಗು

Published:
Updated:
Deccan Herald

ಬೀದರ್‌: ನಗರದ ಗುರುನಾನಕ ಝೀರಾದ ಆವರಣದಲ್ಲಿನ ನವೀಕೃತ ಅಮೃತಶಿಲೆಯ ಗುರುದ್ವಾರ ಉದ್ಘಾಟನೆ ಹಾಗೂ ಪ್ರವಚನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಬುಧವಾರ ಭಕ್ತಿಭಾವಗಳೊಂದಿಗೆ ನೆರವೇರಿತು.

ಬೆಳಗಿನ ಜಾವ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಅಖಂಡ ಪಾಠ ಸಮಾರೋಪಗೊಂಡಿತು. ಅಮೃತಸರದ ಶಿರೋಮಣಿ ಗುರುದ್ವಾರ ಪ್ರಬಂಧಕ  ಸಮಿತಿಯ ಪ್ರಧಾನ ಸರ್ದಾರ್ ಗೋಬಿಂದಸಿಂಗ್‌ ಲಂಗೋವಾಲ್, ಮುಖ್ಯ ಕಾರ್ಯದರ್ಶಿ ಸರ್ದಾರ್ ರೂಪಸಿಂಗ್, ದೆಹಲಿ ಗುರುದ್ವಾರದ ಪ್ರಧಾನ ಬಾಬಾ ಗುರುಬಿಂದರ್‌ಸಿಂಗ್, ಪ್ರಮುಖ ಗ್ರಂಥಿ ರಣಜೀತ್‌ಸಿಂಗ್, ನಾಂದೇಡ(ದ) ಜಥೇದಾರ್, ಸಂತಬಾಬಾ ಕುಲವಂತಸಿಂಗ್, ಭಾಯಿ ರಾಮಸಿಂಗ್, ಬಾಬಾ ನರೇಂದ್ರಸಿಂಗ್‌, ಬಾಬಾ ಬಲವಿಂದರ್ ಸಿಂಗ್, ಅನಂದಪುರದ ಗುರುದೇವಸಿಂಗ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

ಗುರುದ್ವಾರ, ಪ್ರಾರ್ಥನಾ ಮಂದಿರ, ಯಾತ್ರಿ ನಿವಾಸ ಕಟ್ಟಡಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ದೇಶದ ವಿವಿಧೆಡೆಯಿಂದ ಬಂದಿದ್ದ ಸಿಖ್‌ರಿಗಾಗಿ ಗುರುದ್ವಾರ ಆವರಣದಲ್ಲಿ ಶಾಮಿಯಾನಾ ಹಾಕಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರು ಸರತಿ ಸಾಲಿನಲ್ಲಿ ನಿಂತು ಗ್ರಂಥ ಸಾಹೀಬ ದರ್ಶನ ಪಡೆದರು. ಸಕಲ ಭಕ್ತರಿಗೆ ತಂಪು ಪಾನೀಯ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತು.

ಕೋಟ್ಯಂತರ ಖರ್ಚು:  ಗುರುದ್ವಾರದಲ್ಲಿ ಆಯಾತಾಕರದಲ್ಲಿ ಚಿನ್ನ ಲೇಪಿತ ಮಂಟಪ ನಿರ್ಮಿಸಲಾಗಿದೆ. ಇದಕ್ಕಾಗಿ ಮೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 10 ಕೆ.ಜಿ. ಶುದ್ಧ ಚಿನ್ನ ಬಳಸಲಾಗಿದೆ.
ಗುರುದ್ವಾರದ ಒಳಛಾವಣಿ ಅಲಂಕಾರಕ್ಕೆ ₹ 80 ಲಕ್ಷ ಹಾಗೂ ಅಮೃತ ಶಿಲೆಗಳಿಗೆ ಒಂದೂವರೆ ಕೋಟಿ ರೂಪಾಯಿ ವ್ಯಯಿಸಲಾಗಿದೆ.
ಉತ್ತರ ಭಾರತದ ಕುಶಲಕರ್ಮಿಗಳು ಹೂಬಳ್ಳಿ, ಮರಗಳು, ಜಿಂಕೆ, ಹುಲಿ ಹಾಗೂ ನವಿಲಿನ ಚಿತ್ರಗಳನ್ನು ಅಮೃತ ಶಿಲೆಯಲ್ಲಿ ಅನಾವರಣಗೊಳಿಸಿದ್ದಾರೆ. ಗುರುದ್ವಾರದ ಒಳಾಂಗಣ ಛಾವಣಿ ಹಾಗೂ ಹೊರ ಭಿತ್ತಿಯ ಮೇಲೂ ವಿಶಿಷ್ಟ ಕಲೆಯನ್ನು ಮೂಡಿಸಿದ್ದಾರೆ.

ರಾಜಸ್ಥಾನದ ಬಿಕನೇರ, ಇರಾನ್‌ನಿಂದ ತರಲಾದ ಅಮೃತಶಿಲೆಗಳನ್ನು ಕಟ್ಟಡಕ್ಕೆ ಬಳಸಲಾಗಿದೆ. ಮಹಾರಾಷ್ಟ್ರದ ನಾಂದೇಡ್‌ನ ಮರಳು ಹಾಗೂ ತೆಲಂಗಾಣದ ಜಹೀರಾಬಾದ್‌ನಿಂದ ಉತ್ತಮ ಗುಣಮಟ್ಟದ ಇಟ್ಟಿಗೆ ತರಿಸಿ ಕಟ್ಟಡ ನಿರ್ಮಿಸಲಾಗಿದೆ.

ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ ಸಾವಿರಾರು ಕರಸೇವಕರು ಸತತ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಪವಿತ್ರ ಸ್ಥಾನಕ್ಕೆ ಸುಂದರ ರೂಪ ನೀಡಿದ್ದಾರೆ. ಕರಕುಶಲ ಕರ್ಮಿಗಳಲ್ಲಿ 30 ಜನರು ಮುಸ್ಲಿಂರು ಎನ್ನುವುದು ವಿಶೇಷ.

‘ಸಿಖ್‌, ಸಂಸ್ಕಾರಿಕ ಧರ್ಮವಾಗಿದೆ. ನಮ್ಮ ಧರ್ಮ ಸನ್ಯಾಸ ಪ್ರತಿಪಾದಿಸುವುದಿಲ್ಲ. ಗುರುನಾನಕ ಪ್ರಬಂಧಕ ಕಮಿಟಿಯು ಬಯಸಿದ್ದರಿಂದ ಪಂಜಾಬ್‌ನಿಂದ ನೂರಾರು ಕರಸೇವಕರು ಬೀದರ್‌ಗೆ ಬಂದು ಗುರುದ್ವಾರ ನಿರ್ಮಾಣ ಮಾಡಿದ್ದಾರೆ’ ಎಂದು ಗುರುದ್ವಾರದ ವ್ಯವಸ್ಥಾಪಕ ದರ್ಬಾರಾ ಸಿಂಗ್‌ ಹೇಳುತ್ತಾರೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !