ಆರೋಗ್ಯಪೂರ್ಣ ಸ್ಪರ್ಧೆಯಿಂದ ಪ್ರತಿಭೆಗಳ ಅನಾವರಣ

ಶನಿವಾರ, ಮಾರ್ಚ್ 23, 2019
34 °C
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ ರಮೇಶ ಹೇಳಿಕೆ

ಆರೋಗ್ಯಪೂರ್ಣ ಸ್ಪರ್ಧೆಯಿಂದ ಪ್ರತಿಭೆಗಳ ಅನಾವರಣ

Published:
Updated:
Prajavani

ಬೀದರ್: ‘ಆರೋಗ್ಯಪೂರ್ಣ ಸ್ಪರ್ಧೆ ಮಾಡಿದ್ದಲ್ಲಿ ಪ್ರತಿಭೆಗಳ ಅನಾವರಣ ಸಾಧ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ ರಮೇಶ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮತ್ತು ನ್ಯಾಸ್ ಹಾಗೂ ಆರ್.ವಿ.ಬಿಡಪ್ ಶಿಷ್ಯವೇತನ ಪುರಸ್ಕಾರ ಸಮಿತಿ ವತಿಯಿಂದ ಆಯೋಜಿಸಿದ್ದ ಆರ್.ವಿ.ಬಿಡಪ್ ಪ್ರತಿಭಾ ಪುರಸ್ಕಾರ ಮತ್ತು ಪಿಎಚ್.ಡಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಅಲ್ಪದಿಂದ ಗುರುತಿಸಿಕೊಳ್ಳದೆ, ಅನಂತದಿಂದ ಗುರುತಿಸಿಕೊಳ್ಳಬೇಕು. ಸಂಕುಚಿತ ಮನೋಭಾವ ಬೆಳೆಸಿಕೊಳ್ಳದೆ, ವಿಶಾಲ ಹೃದಯಿಗಳಾಗಬೇಕು’ ಎಂದು ಸಲಹೆ ನೀಡಿದರು.

‘ಅಂಗೈಯಲ್ಲಿ ತಂತ್ರಜ್ಞಾನ ಬಂದಿರುವ ಕಾರಣ ಪುಸ್ತಕ ಸಂಸ್ಕೃತಿ ಗೌಣವಾಗುತ್ತಿದೆ. ಮೊಬೈಲ್ ಸಂಸ್ಕೃತಿಯಿಂದ ಪರಸ್ಪರ ಮನುಷ್ಯತ್ವ ಗುಣ, ಪ್ರೀತಿ, ವಿಶ್ವಾಸಗಳು ಮಾಯವಾಗುತ್ತಿವೆ. ಉಜ್ವಲ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ತಂತ್ರಜ್ಞಾನದ ರುಚಿ ಹಚ್ಚದೆ, ಸಂಸ್ಕೃತಿ ಶಿಕ್ಷಣ ನೀಡಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಮಾತನಾಡಿ, ‘ಯುಜಿಸಿ ಯ ₹ 1.70 ಕೋಟಿ ಅನುದಾನದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ, ಆಹಾರ ಸಂಸ್ಕರಣ ಘಟಕ ಮತ್ತು ಸಮುದಾಯ ಕಾಲೇಜು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಆರ್.ವಿ.ಬಿಡಪ್ ಶಿಷ್ಯವೇತನ ಪುರಸ್ಕಾರ ಸಮಿತಿ ಸಂಚಾಲಕ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ಆರ್.ವಿ.ಬಿಡಪ್ ಅವರು ಸ್ವತಂತ್ರ ಪೂರ್ವದಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ್ದರು. ಕರ್ನಾಟಕ ಏಕೀಕರಣ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೆರೆವಾಸ ಅನುಭವಿಸಿದ್ದರು’ ಎಂದು ಹೇಳಿದರು.

‘ರಜಾಕಾರ ಹಾವಳಿ ಸಂದರ್ಭದಲ್ಲಿ ಹಲ್ಲೆಗೊಳಗಾಗಿದ್ದರೂ ಎದೆಗುಂದಲಿಲ್ಲ .ಫಜಲ್‌ ಅಲಿ ಕಮಿಷನ್ ಶಿಫಾರಸು ಜಾರಿ ಹಾಗೂ ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಪ್ರಯತ್ನಿಸಿದ ಕೀರ್ತಿ ಬಿಡಪ್‌ ಅವರಿಗೆ ಸಲ್ಲುತ್ತದೆ’ ಎಂದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಅಡಳಿತ ಮಂಡಳಿ ಸದಸ್ಯರಾದ ಶಿವಶಂಕರ ಶೆಟಕಾರ, ಸತೀಶ ಪಾಟೀಲ, ವೀರಭದ್ರಪ್ಪ ಭುಯ್ಯಾ, ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಸ್ ಪಾಟೀಲ, ಆಡಳಿತಾಧಿಕಾರಿ ಹಾವಗಿರಾವ್ ಇದ್ದರು.

ಆರ್.ವಿ.ಬಿಡಪ್ ಶಿಷ್ಯವೇತನ ಪುರಸ್ಕಾರ ಪಡೆದ ಆಕಾಶ ರಾಗಾ, ಪಲ್ಲವಿ ಮನೋಹರ, ಸುಷ್ಮಾ ಕಾಶೀನಾಥ, ಭಾಗ್ಯಶ್ರೀ ರಾಜಕುಮಾರ, ಪ್ರತಿಭಾ ನಿರಂಜಯ್ಯ, ಶಿವಾನಿ ಸುನೀಲಕುಮಾರ, ರೋಹಿತ ಅನಿಲಕುಮಾರ, ರೈಚಲರಾಣಿ ಶರಣಪ್ಪ ಹಾಗೂ ಸದಾನಂದ ಭರತರಾವ್ ಅವರಿಗೆ ನಗದು ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಡಾ.ರಾಜಕುಮಾರ ಹೆಬ್ಬಾಳೆ, ಡಾ.ಸುನೀತಾ ಕೂಡ್ಲಿಕರ್, ಡಾ.ದೀಪಾ ಮಾಣಿಕರಾವ್ ಹಾಗೂ ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಅವರನ್ನು ಸನ್ಮಾನಿಸಲಾಯಿತು. ಸುರೇಖಾ ಬಿರಾದಾರ ನಿರೂಪಿಸಿದರು. ಮಹಾನಂದಾ ಮಡಕಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !