ಮಂಗಳವಾರ, ಆಗಸ್ಟ್ 20, 2019
27 °C
ಒಂದೂವರೆ ತಾಸು ಮಳೆ ಬಿದ್ದರೂ ತಂಪಾಗದ ಇಳೆ

ನಗರದಲ್ಲಿ ಜೋರಾಗಿ ಸುರಿದ ಮೊದಲ ಮಳೆ

Published:
Updated:
Prajavani

ಬೀದರ್‌: ಜಿಲ್ಲೆಗೆ ಮುಂಗಾರು ಪ್ರವೇಶ ಮಾಡಿದಾಗಿನಿಂದಲೂ ಮಳೆ ಅಬ್ಬರಿಸಿಲ್ಲ. ಒಂದೂವರೆ ತಿಂಗಳಿಂದ ಬೇಸಿಗೆ ಬಿಸಿಲು ಇದೆ. ಮೂರು ದಿನಗಳಿಂದ ಸಂಜೆ ಹೊತ್ತು ಅಲ್ಪ ಸ್ವಲ್ಪ ಮಳೆ ಬಿದ್ದು ಹೋಗುತ್ತಿದೆ. ಶುಕ್ರವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆ ಮಳೆ ಸುರಿದು ಜನರಲ್ಲಿ ಸಂತಸ ಮೂಡಿಸಿತು.

ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿದರೂ ಸಂಜೆಯ ವೇಳೆಗೆ ಚದುರಿ ಹೋಗುತ್ತಿವೆ. ಶುಕ್ರವಾರ ಬೆಳಿಗ್ಗೆಯಿಂದ ಧಗೆ ಆವರಿಸಿತ್ತು. ಮಧ್ಯಾಹ್ನ 1.15ರ ವೇಳೆಗೆ ಆರಂಭವಾದ ಮಳೆ 2.15ರ ವರೆಗೂ ಜೋರಾಗಿ ಅಪ್ಪಳಿಸಿತು. ನಂತರ ಜಿಟಿ ಜಿಟಿಯಾಗಿ ಸುರಿದು ನಿಂತಿತು.

ಮಳೆಯ ಅಬ್ಬರಕ್ಕೆ ದ್ವಿಚಕ್ರ ವಾಹನ ಸವಾರರು ರಸ್ತೆ ಬದಿಗೆ ವಾಹನಗಳನ್ನು ನಿಲುಗಡೆ ಮಾಡಿ ಅಂಗಡಿಗಳು ಹಾಗೂ ದೊಡ್ಡ ಕಟ್ಟಡಗಳತ್ತ ಓಡಿ ಹೋಗಿ ಮಳೆಯಿಂದ ರಕ್ಷಣೆ ಪಡೆದರು. ಇದೇ ವೇಳೆಯಲ್ಲಿ ಕಾಲೇಜು ಬಿಟ್ಟಿದ್ದರಿಂದ ವಿದ್ಯಾರ್ಥಿಗಳು ಮಳೆಯಲ್ಲೇ ತೊಯ್ದುಕೊಂಡು ಸಾಗಿದರು. ವಿದ್ಯಾರ್ಥಿನಿಯರು ಆಟೊಗಳಲ್ಲಿ ಮನೆಗೆ ತೆರಳಿದರು.

ಮಳೆಗೆ ರಸ್ತೆಯ ಮೇಲೆ ನೀರು ಹರಿಯಿತು. ರೋಟರಿ ವೃತ್ತ, ಮಹಾವೀರ ವೃತ್ತದಿಂದ ಬೊಮ್ಮಗೊಂಡೇಶ್ವರ ಕಡೆಗೆ ಹೋಗುವ ಮಾರ್ಗದಲ್ಲಿ ರೈಲ್ವೆ ಮೇಲ್ಸೇತುವೆ ಕೆಳಗೆ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು. ಇದರಿಂದಾಗಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಮಳೆ ನಿಂತ ಮೇಲೆ ನೀರು ಹರಿದು ಹೋಗಿ ಸಂಚಾರ ಸುಗಮಗೊಂಡಿತು.

ಓಲ್ಡ್‌ಸಿಟಿಯ ಚೌಬಾರಾ ಬಳಿ ನಗರಸಭೆ ಜೆಸಿಬಿಯಿಂದ ಗಟಾರು ಅಗೆದಿದೆ. ಅದರಲ್ಲಿ ಮಳೆ ನೀರು ತುಂಬಿಕೊಂಡು ಜನ ಮನೆಯಿಂದ ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಯಿತು. 15 ದಿನಗಳಿಂದ ನಗರಸಭೆ ಸಿಬ್ಬಂದಿ ಕಾಮಗಾರಿ ಸ್ಥಗಿತಗೊಳಿಸಿದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.

ಮಡಿವಾಳ ವೃತ್ತದ ಬಳಿ ರಸ್ತೆ ಬದಿಯಲ್ಲಿ ಸಾಕಷ್ಟು ನೀರು ನಿಂತುಕೊಂಡಿತ್ತು. ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು ಸಲಾಕೆಯಿಂದ ಮಣ್ಣು ಸರಿಸಿ ನೀರು ಸರಾಗವಾಗಿ ಗಟಾರಿಗೆ ಹರಿದು ಹೋಗುವಂತೆ ಮಾಡಿದರು. ಮಳೆಯ ಸಂದರ್ಭದಲ್ಲಿ ತಂಪಾದ ವಾತಾವರಣ ಸೃಷ್ಟಿಯಾದರೂ ಮಳೆ ನಿಂತ ನಂತರ ಸೆಕೆ ಶುರುವಾಗಿ ಜನ ಒಂದಿಷ್ಟು ಹಿಂಸೆ ಅನುಭವಿಸುವಂತಾಯಿತು.

ಹುಮನಾಬಾದ್‌ಲ್ಲಿ 40 ನಿಮಿಷ, ಬಸವಕಲ್ಯಾಣ, ಭಾಲ್ಕಿ, ಚಿಟಗುಪ್ಪ ತಾಲ್ಲೂಕಿನಲ್ಲಿ ಅರ್ಧಗಂಟೆ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಜನವಾಡದಲ್ಲಿ 45 ಮಿ.ಮೀ ಹಾಗೂ ಬೀದರ್‌ನಲ್ಲಿ 23 ಮಿ.ಮೀ ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಈಗಲೂ ಗರಿಷ್ಠ ಉಷ್ಣಾಂಶ 30 ಡಿಗ್ರಿ ಅಸುಪಾಸಿನಲ್ಲೇ ಇದೆ. ಮಳೆ ಸುರಿದರೂ ತಂಪು ಆವರಿಸಿಲ್ಲ. ಬದಲಾಗಿ ಸೆಕೆ ಹೆಚ್ಚಾಗಿದೆ. ಭೂಮಿಯಲ್ಲಿ ನೀರು ಇಂಗುವಷ್ಟು ಮಳೆ ಸುರಿದಿಲ್ಲ. ಇಳೆ ತಂಪಾಗಲು ಇನ್ನಷ್ಟು ಮಳೆಯ ಅಗತ್ಯ ಇದೆ. ಮುಂದಿನ ಒಂದು ವಾರ ಜಿಲ್ಲೆಯಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

Post Comments (+)