ಮಂಗಳವಾರ, ಆಗಸ್ಟ್ 20, 2019
27 °C
ಮೂರು ದಿನ ಸಂಜೆ ಭಾರಿ ಮಳೆ ಸುರಿಯುವ ಮುನ್ಸೂಚನೆ

ಒಂದೇ ಮಳೆಗೆ ಉಕ್ಕಿ ಹರಿದ ಗಟಾರು, ಉರುಳಿದ ಮರ

Published:
Updated:
Prajavani

ಬೀದರ್: ಬೀದರ್‌ ಹೋಬಳಿಯಲ್ಲಿ 12 ಗಂಟೆಗಳ ಅವಧಿಯಲ್ಲಿ 71 ಮಿ.ಮೀ. ಮಳೆಯಾಗಿದೆ. ನಗರದಲ್ಲಿ ಶನಿವಾರ ಬೆಳಗಿನ ಜಾವ 1 ಗಂಟೆಗೆ ಆರಂಭವಾದ ಮಳೆ ಬೆಳಿಗ್ಗೆ 7 ಗಂಟೆಯ ವರೆಗೂ ಸುರಿದಿದೆ. ರಾತ್ರಿ ಎರಡು ತಾಸು ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಓಲ್ಡ್‌ಸಿಟಿಯಲ್ಲಿ ಗಟಾರುಗಳು ಉಕ್ಕಿ ಹರಿದವು. ಬೆಳಿಗ್ಗೆ 8 ಗಂಟೆಯ ವರೆಗೂ ರಸ್ತೆಯ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಭಾರಿ ಮಳೆಗೆ ಬ್ರಿಮ್ಸ್ ಆಸ್ಪತ್ರೆಯ ಬಳಿ ಬೇವಿನ ಮರವೊಂದು ರಸ್ತೆಯ ಮೇಲೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟು ಮಾಡಿತು. ನಯಿಕಮಾನ್‌ದಿಂದ ಚೌಬಾರಾಕ್ಕೆ ಹೋಗುವ ರಸ್ತೆಯಲ್ಲಿ ಶನಿವಾರ ನಸುಕಿನ ಜಾವ ಸುರಿದ ಭಾರಿ ಮಳೆಯಿಂದಾಗಿ ನೀರು ರಸ್ತೆ ಮೇಲೆ ಹಳ್ಳದಂತೆ ಹರಿಯಿತು. ಅಂಗಡಿಗಳ ಮಾಲೀಕರು ಬಹಳ ಹೊತ್ತಿನ ವರೆಗೂ ಅಂಗಡಿಗಳನ್ನು ತೆರೆದಿರಲಿಲ್ಲ. ನೀರು ಗಟಾರಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡುತ್ತಿದ್ದರು. ಬೀದಿ ವ್ಯಾಪಾರಿಗಳು ತೊಂದರೆ ಅನುಭವಿಸಬೇಕಾಯಿತು.

ಚೌಬಾರಾ ಬಳಿ ನಗರಸಭೆ ರಸ್ತೆ ಬದಿಗೆ ಜೆಸಿಬಿಯಿಂದ ಅಗೆದು ಬಿಟ್ಟಿದೆ. ಕೊಳಚೆ ನೀರಿನಲ್ಲಿ ಮಳೆ ನೀರು ಸೇರಿಕೊಂಡು ಇನ್ನಷ್ಟು ಸಮಸ್ಯೆ ಆಯಿತು. ಜನ ಮನೆಗಳಿಂದ ಹೊರಗೆ ಬರುವುದು ಕಷ್ಟವಾಯಿತು. ಸಿಎಂಸಿ ಕಾಲೊನಿ ಹಾಗೂ ಲುಂಬಿಣಿನಗರದಲ್ಲಿ ಗಟಾರು ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದು ಕೆಸರುಮಯವಾಯಿತು. ಜನ ನಗರಸಭೆಯ ಅಧಿಕಾರಿಗಳಿಗೆ ಶಾಪ ಹಾಕುತ್ತ ಮನೆಯಿಂದ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದರು.

ಡಾ.ಅಂಬೇಡ್ಕರ್‌ ವೃತ್ತ ಸಮೀಪ ಸಿದ್ಧಿ ವಿನಾಯಕ ಹೋಟೆಲ್, ತಾಲ್ಲೂಕು ಪಂಚಾಯಿತಿ ಮುಂಭಾಗದ ಎಸ್‌ಬಿಐ ಎದುರು, ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಪ್ರತಾಪನಗರದ ಲಾಹೋಟಿ ಕಾರ್‌ ಶೋರೂಂ ಸಮೀಪದ ಮೈದಾನದಲ್ಲಿರುವ ಗುಡಿಸಲುಗಳಿಗೆ ರಾತ್ರಿ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಸಿತು. ಗುಡಿಸಲು ನಿವಾಸಿಗಳು ಮಧ್ಯರಾತ್ರಿ ತಮ್ಮ ಪಾತ್ರೆಪಗಡೆಗಳೊಂದಿಗೆ ದೊಡ್ಡ ಕಟ್ಟಡದ ಮುಂಭಾಗದಲ್ಲಿ ಆಶ್ರಯ ಪಡೆಯಬೇಕಾಯಿತು.

Post Comments (+)