ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಮಾಂಜ್ರಾ ನದಿಗೆ ಅಪಾರ ನೀರು

Last Updated 14 ಜೂನ್ 2021, 16:57 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಬೀದರ್, ಔರಾದ್, ಕಮಲನಗರ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ಸೋಮವಾರ ಬೆಳಗಿನ ಜಾವ ಭಾರಿ ಮಳೆಯಾಗಿದೆ. ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ. ಮಾಂಜ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ಔರಾದ್ ತಾಲ್ಲೂಕಿನ ಕಂದಗೂಳ ಸಮೀಪ ಮಾಂಜ್ರಾ ನದಿ ಮೈದುಂಬಿ ಹರಿಯುತ್ತಿದೆ. ಹಳ್ಳಕೊಳ್ಳಗಳು ತುಂಬಿವೆ. ಹೊಲಗಳಲ್ಲಿನ ನೀರು ನಿರಂತರವಾಗಿ ಹಳ್ಳಗಳಿಗೆ ಹರಿದು ಬರುತ್ತಿದೆ. ವಡಗಾಂವ ಹಾಗೂ ಕಂದಗೂಳ ರಸ್ತೆಯಲ್ಲಿ ಹಳ್ಳ ತುಂಬಿ ಬೆಳಿಗ್ಗೆ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

ಹುಮನಾಬಾದ್, ಚಿಟಗುಪ್ಪ ಹಾಗೂ ಹುಲಸೂರು ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ಬೋರಗಿ ಗ್ರಾಮದಲ್ಲಿ ಗಟಾರಗಳು ತುಂಬಿ ಹರಿದವು. ಗ್ರಾಮದ ಪ್ರಮುಖ ರಸ್ತೆ ಹಾಗೂ ಓಣಿಗಳಲ್ಲಿ ಬಹಳ ಹೊತ್ತಿನವರೆಗೂ ನೀರು ನಿಂತುಕೊಂಡಿತ್ತು. ಗ್ರಾಮದಲ್ಲಿ ಮಣ್ಣು ಹಾಗೂ ಕಲ್ಲಿನ ಮನೆಗಳೇ ಅಧಿಕ ಸಂಖ್ಯೆಯಲ್ಲಿ ಇವೆ. ಹೀಗಾಗಿ ಯುವಕರು ಸಲಿಕೆ ಹಿಡಿದು ನೀರಿಗೆ ದಾರಿ ಮಾಡಿಕೊಟ್ಟರು.

ಬೀದರ್‌ ನಗರದ ಓಲ್ಡ್‌ಸಿಟಿ, ಚಿದ್ರಿರಸ್ತೆ, ಗಾಂಧಿ ಗಂಜ್‌ ಪ್ರದೇಶದಲ್ಲಿ ರಸ್ತೆ ಮೇಲೆ ಬೆಳಿಗ್ಗೆ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು. ಮಧ್ಯಾಹ್ನ ಸುಡು ಬಿಸಿಲು ಇತ್ತು.

ಸಂತಪುರ-ಸಂಗಮ ಸಂಪರ್ಕ ಕಡಿತ

ಔರಾದ್: ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಔರಾದ್ ಪಟ್ಟಣದ ಸಂತೋಷ ಕಾಲೊನಿ, ಜನತಾ ಕಾಲೊನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಎದುರಿಸಿದ್ದಾರೆ. ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇದರಿಂದ ಇಡೀ ರಾತ್ರಿ ಪರದಾಡಬೇಕಾಯಿತು ಎಂದು ಸಂತೋಷ ಕಾಲೊನಿ ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.

ನೀರಿನ ರಭಸಕ್ಕೆ ಸಂತಪುರ-ಸಂಗಮ ನಡುವಿನ ನಾಗೂರ ಬಳಿಯ ಬದಲಿ ಸೇತುವೆ ಕಿತ್ತು ಹೋಗಿದೆ. ಇದರಿಂದ ಈ ಭಾಗದ ಸಂಚಾರ ಸ್ಥಗಿತಗೊಂಡಿದೆ. ಭಾಲ್ಕಿ ಕಡೆ ಹೋಗುವ ಪ್ರಯಾಣಿಕರು ಮಸ್ಕಲ್ ಮಾರ್ಗವಾಗಿ ಹೋಗುತ್ತಿದ್ದಾರೆ.

‘ಬೆಳಕುಣಿ ಬಳಿಯ ಸೇತುವೆ ಮೇಲಿಂದ ನೀರು ಹರಿದು ಈ ಭಾಗದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಸೇತುವೆ ಒಂದು ಭಾಗ ಹಾಳಾಗಿದೆ. ಸ್ವಲ್ಪ ನೀರು ಜಾಸ್ತಿಯಾದರೂ ಸಂಪರ್ಕ ಕಡಿತವಾಗುತ್ತಿದೆ’ ಎಂದು ಬೆಳಕುಣಿ ನಿವಾಸಿ ಜಾವಿದ್ ತಿಳಿಸಿದ್ದಾರೆ.

ಸಂತಪುರ ಹೋಬಳಿಯಲ್ಲಿ 42.8 ಮಿ.ಮೀ, ಔರಾದ್ ಹೋಬಳಿಯಲ್ಲಿ 53.4, ಚಿಂತಾಕಿ ಹೋಬಳಿಯಲ್ಲಿ 35.3 ಮಿ.ಮೀ ಮಳೆ ದಾಖಲಾಗಿದೆ.

ಚಿಂತಾಕಿ, ವಡಗಾಂವ್ ಹೋಬಳಿಯಲ್ಲೂ ಉತ್ತಮ ಮಳೆಯಾಗಿದೆ. ಹೊಲಗಳಲ್ಲಿ ನೀರು ಹರಿದಿದೆ. ಸ್ವಲ್ಪ ಗಾಳಿ ಆಡಿದ ನಂತರ ಬಿತ್ತನೆಗೆ ಭೂಮಿ ಯೋಗ್ಯವಾಗಲಿದೆ ಎಂದು ಅಲ್ಲಾಪುರ ರೈತ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT