ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆ

ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ; ಮಾಂಜ್ರಾ ನದಿಗೆ ಹೆಚ್ಚುವರಿ ನೀರು
Last Updated 27 ಸೆಪ್ಟೆಂಬರ್ 2021, 2:50 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದ ಜಮೀನುಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಈಚೆಗೆ ಬಿದ್ದ ಭಾರಿ ಮಳೆಯಿಂದ ನಾವದಗಿ ಸೇರಿದಂತೆ ಹಲವು ಗ್ರಾಮಗಳಿಗೆ ಮಳೆ ನೀರು ನುಗ್ಗಿತು. ಇದರಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಮಳೆ ನೀರು ಹೊಲಗಳನ್ನು ಆವರಿಸಿದೆ. ಇದರಿಂದ ಕೃಷಿಕರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಸೋಯಾಬೀನ್, ತೊಗರಿ, ಉದ್ದು, ಶುಂಠಿ, ಪಪ್ಪಾಯಿ ಸೇರಿದಂತೆ ಇತರೆ ಬೆಳೆಗಳು ಹಾನಿಗೀಡಾಗಿವೆ.

ಮಹಾರಾಷ್ಟ್ರದ ಧನೇಗಾಂವ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹರಿ ಬಿಡಲಾಗಿದೆ. ನದಿ ಪಾತ್ರದ ಕಾಳಸರತೂಗಾಂವ, ವಾಡಿ, ಮಾಣಿಕೇಶ್ವರ, ಭಾಟಸಾಂಗವಿ, ಶಿವಣಿ, ಲಖನಗಾಂವ, ಸಾಯಗಾಂವ, ಸೋಮಪೂರ ಸೇರಿದಂತೆ ಇತರ ಗ್ರಾಮಗಳ ಜಮೀನುಗಳಿಗೆ ನದಿ ನೀರು ನುಗ್ಗಿದೆ. ಬೆಳೆಗಳು ನಾಶವಾಗಿವೆ. ಬೆಳೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋದರೂ ಅಧಿಕಾರಿಗಳು ರೈತರಿಗೆ ಪರಿಹಾರ ನೀಡುತ್ತಿಲ್ಲ ಎಂದು ರೈತರಾದ ನೀಲಕಂಠ ನಾಗಶಂಕರೆ, ಮಲ್ಲಿಕಾರ್ಜುನ ಬಿರಾದಾರ, ಸಂಗ್ರಾಮ ಪಾಟೀಲ, ಶಿವಕುಮಾರ ಪಾಟೀಲ ಅಲವತ್ತುಕೊಂಡರು.

ಸೋಮಪೂರ- ಸೋನಾಳ ಸೇತುವೆ ಜಲಾವೃತವಾಗಿದ್ದು, ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಅವರು, ‘ಉದ್ದು, ಹೆಸರು, ಸೋಯಾ ಬೆಳೆಗಳು ಹಾಳಾಗಿವೆ. ಬೆಳೆ ವೀಕ್ಷಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಕೇಂದ್ರ ಸಚಿವ ಭಗವಂತ ಖೂಬಾ ಅವರ ಗಮನಕ್ಕೆ ತರಲಾಗುವುದು’ ಎಂದರು.

ಪ್ರಮುಖರಾದ ಶಾಂತವೀರ ಕೇಸ್ಕರ್, ಗೋವಿಂದರಾವ ಬಿರಾದಾರ, ಜಗನ್ನಾಥ ಬಿರಾದಾರ, ಚಂದ್ರಕಾಂತ ಬಿಗೆ, ಶಿವಾಜಿ ಸೋಂಪುರ, ಶಿವಾಜಿ ಬಿರಾದಾರ, ಉತ್ತಮ ಬಿರಾದಾರ, ತಾನಾಜಿ ಬಿರಾದಾರ ಇದ್ದರು.

*ತಾಲ್ಲೂಕಿನಲ್ಲಿ ಸುರಿದ ಮಳೆಗೆ ಅಂದಾಜು 4 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯ ಸಮೀಕ್ಷೆ ಮುಗಿದ ಬಳಿಕ ನಿಖರ ಮಾಹಿತಿ ಸಿಗಲಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ

-ಕೀರ್ತಿ ಚಾಲಾಕ್‌, ತಹಶೀಲ್ದಾರ್‌

*ಬೆಳೆದು ನಿಂತ ಬೆಳೆಗಳು ಕೃಷಿಕರ ಕೈಸೇರುವ ಮುನ್ನ ಅತಿವೃಷ್ಟಿಯಿಂದ ನಾಶವಾಗಿವೆ. ಸರ್ಕಾರ ಕೂಡಲೇ ಪರಿಹಾರ ಘೋಷಿಸಿಬೇಕು

ಸಿದ್ರಾಮಪ್ಪಾ ಆಣದೂರೆ, ರೈತ ಸಂಘದ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT