ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ ಕೆರೆ ಒಡೆದು ಜಮೀನಿಗೆ ನುಗ್ಗಿದ ನೀರು

ಸತತ ಮಳೆಗೆ ಹುಲಸೂರ, ಖೇರ್ಡಾ(ಕೆ), ಗೋರಟಾ(ಬಿ), ಆಲಗೂಡದಲ್ಲಿ ಹಾನಿ
Last Updated 18 ಸೆಪ್ಟೆಂಬರ್ 2020, 6:19 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ನದಿ, ನಾಲೆಗಳು ತುಂಬಿ ಹರಿದಿದ್ದು ಹುಲಸೂರ ಕೆರೆ ಒಡೆದು ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.

ಹುಲಸೂರನ ದಕ್ಷಿಣ ಭಾಗದಲ್ಲಿನ ಕಾಮಶೆಟ್ಟಿನವರ ಕೆರೆ ಎಂದೇ ಕರೆಯುವ ಹಳೆಯ ಕೆರೆಯ ಏರಿ ಒಡೆದಿದ್ದರಿಂದ ನೀರು ಹೊಲಗಳಿಗೆ ನುಗ್ಗಿ ಬೆಳೆಹಾನಿಯಾಗಿದೆ. ಕೆರೆ ಸಮೀಪದಿಂದ ಪಟ್ಟಣದ ಚೌಕಿಮಠದವರೆಗಿನ ಅಂದಾಜು 200 ಎಕರೆಯಷ್ಟು ಜಮೀನಿನಲ್ಲಿನ ಬೆಳೆ ಕೊಚ್ಚಿಕೊಂಡು ಹೋಗಿದೆ ಎಂದು ಗ್ರಾಮಸ್ಥರಾದ ರಾಜಕುಮಾರ ತೊಂಡಾರೆ ತಿಳಿಸಿದ್ದಾರೆ.

ಗಂಡೂರಿ ನಾಲಾ ತುಂಬಿ ಹರಿದಿದ್ದ ರಿಂದ ಖೇರ್ಡಾ (ಕೆ), ಕೊಹಿನೂರ ವಾಡಿ, ಶಿರಗಾಪುರ ಗ್ರಾಮಗಳ ವ್ಯಾಪ್ತಿಯ ಹೊಲಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಆಲಗೂಡ ನಾಲೆಯ ನೀರು ಉಕ್ಕಿ ಅನೇಕರ ಜಮೀನುಗಳನ್ನು ಹಾಳು ಮಾಡಿದೆ. ಉದ್ದು, ಹೆಸರು, ಸೋಯಾಬಿನ ನೀರಿನೊಂದಿಗೆ ಹರಿದುಕೊಂಡು ಹೋಗಿದೆ ಎಂದು ಮಾರುತಿ ಹೇಳಿದ್ದಾರೆ.

ಗೋರಟಾ(ಬಿ) ಗ್ರಾಮದ ಪರಿಶಿಷ್ಟ ಜಾತಿಯವರ ಓಣಿಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಮನೆಗಳು ಜಲಾವೃತಗೊಂಡಿವೆ. ನೀರು ಮುಂದಕ್ಕೆ ಸಾಗುತ್ತಿಲ್ಲವಾದ್ದರಿಂದ ಮನೆಗಳಿಗೆ ಹೋಗಲು ದಾರಿ ಇಲ್ಲದಂತಾಗಿದೆ ಎಂದು ಮಹೇಶ ಪಟ್ನೆ ಹೇಳಿದ್ದಾರೆ.

ತಾಲ್ಲೂಕಿನ ಗಡಿಯಿಂದ ಹಾದುಹೋಗುವ ಬೆಣ್ಣೆತೊರೆ ನದಿ ಕೂಡ ಧಾರಾಕಾರ ಮಳೆಗೆ ಇದೇ ಪ್ರಥಮ ಬಾರಿ ತುಂಬಿ ಹರಿದಿದ್ದು ಸೇತುವೆಯ ಮೇಲಿನಿಂದ ನೀರು ಹೋಗಿದೆ. ಹೀಗಾಗಿ ಹತ್ತರ್ಗಾ ಹಾಗೂ ಹಿಪ್ಪರ್ಗಾ ಮಧ್ಯದ ರಸ್ತೆ ಸಂಚಾರ ನಿಂತು ಹೋಗಿತ್ತು. ವಡ್ಡರ್ಗಾ, ಭೋಸಗಾ, ಕೊಹಿನೂರ, ಸರಜವಳಗಾ ರಸ್ತೆಗಳಲ್ಲಿನ ನಾಲೆಗಳು ಕೂಡ ಇಡೀ ದಿನ ತುಂಬಿ ಹರಿದಿದ್ದರಿಂದ ವಾಹನ ಸಂಚಾರ ನಿಂತುಹೋಗಿ ಜನರು ಪರದಾಡುವಂತಾಯಿತು.

ಬಸವಕಲ್ಯಾಣ ಪಟ್ಟಣದ ಬಸ್ ನಿಲ್ದಾಣ ಭಾಗದಲ್ಲಿಯೂ ನೀರು ಸಂಗ್ರಹಗೊಂಡು ಜನರು ತೊಂದರೆ ಅನುಭವಿಸಿದರು. ಕೆಲ ಮನೆಗಳು ಜಲಾವೃತಗೊಂಡವು. ಅನೇಕ ಗ್ರಾಮಗಳಲ್ಲಿ ಮನೆ ಅಂಗಳ ಹಾಗೂ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡಿತ್ತು. ಕೆಲವೆಡೆ ಮನೆ ಗೋಡೆಗಳು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT