ಸೋಮವಾರ, ಸೆಪ್ಟೆಂಬರ್ 20, 2021
23 °C
ರೈತರಿಗೆ ಬೆಳೆಹಾನಿ ಆತಂಕ

ಖಟಕಚಿಂಚೋಳಿ: ವಾಡಿಕೆಗಿಂತ ಹೆಚ್ಚಿನ ಮಳೆ; ಸೋಯಾ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಹೋಬಳಿಯಾ ದ್ಯಂತ ಎರಡು ವಾರಗಳಿಂದ ಮಳೆ ಸುರಿಯುತ್ತಿರುವುದರಿಂದ ಹೊಲಗಳಲ್ಲಿ ನೀರು ತುಂಬಿಕೊಂಡು ಬೆಳೆಗಳು ಜಲಾವೃತವಾಗಿವೆ. ಇದು ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಹೋಬಳಿಯ ಹೊನ್ನಾಳಿ, ಕಟ್ಟಿ ತುಗಾಂವ್ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಸುರಿದಿದ್ದರಿಂದ ದುಬಾರಿ ಬೆಲೆಗೆ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಲಾಗಿದೆ. ಹೋಬಳಿಯಲ್ಲಿ ಹೆಸರು 9 ಸಾವಿರ ಹೆಕ್ಟೇರ್, ಉದ್ದು ಹಾಗೂ ಸೋಯಾ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಸದ್ಯ ವಾಡಿಕೆಗಿಂತಲೂ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.

ಭೂಮಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಮಳೆಯು ಸಹ ಬಿಡುವು ನೀಡುತ್ತಿಲ್ಲ. ಜಮೀನುಗಳಲ್ಲಿ ಕಳೆ ಪ್ರಮಾಣ ಹೆಚ್ಚಾಗಿ ಕೀಟಗಳ ಪ್ರಮಾಣವು ಹೆಚ್ಚುವ ಭೀತಿ ರೈತರನ್ನು ಕಾಡುತ್ತಿದೆ. ಹೋಬಳಿಯ ಹೊನ್ನಾಳಿ, ದಾಡಗಿ ಸೇರಿ ಕೆಲ ಭಾಗಗಳಲ್ಲಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ.

‘ಸತತ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತರೆ ಹೊಲದ ಸುತ್ತಲೂ ಒಂದು ಅಡಿ ಆಳದ ತಗ್ಗು ತೆಗೆದು ನೀರನ್ನು ಹೊರಹಾಕಬೇಕು. ನೀರಿನಲ್ಲಿ ಕರಗುವ 19:19:19 ಎನ್‌ಪಿಕೆ, ಪ್ರತಿ ಲೀಟರ್ ಗೆ 10 ಗ್ರಾಂ. ಬೆರೆಸಿ ಸಿಂಪಡಿಸಬೇಕು’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವಪ್ರಭು ತಿಳಿಸುತ್ತಾರೆ.

‘ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ ಬಿತ್ತನೆ ಮಾಡಿದೆ. ಮಳೆಯ ಜೊತಗೆ ತೊಗರಿಯಲ್ಲಿ ಕಳೆ (ಕಸದ)ಯ ಪ್ರಮಾಣ ಹೆಚ್ಚಾಗಿದೆ. ಕಳೆ ಕೀಳಲು ಕಾರ್ಮಿಕರ ಕೊರತೆ ಎದುರಾಗಿದೆ’ ಎಂದು ರೈತ ನಿರ್ಮಲಕಾಂತ ಪಾಟೀಲ ಅಸಹಾಯಕತೆ ಹೊರಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.