ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ವರುಣನ ಆರ್ಭಟ; ಅತಿವೃಷ್ಟಿಗೆ ರಸ್ತೆ ಹಾಳು, ಕೇಳುವವರಿಲ್ಲ ಜನರ ಗೋಳು

ವರುಣನ ಆರ್ಭಟಕ್ಕೆ ಹಾಳಾದ ರಸ್ತೆ; ಪರಿತಪಿಸುತ್ತಿರುವ ವಾಹನ ಸವಾರರು
Last Updated 17 ಜುಲೈ 2022, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಸುರಿಯಬೇಕಿದ್ದ ಮಳೆ ಒಂದೇ ವಾರದಲ್ಲಿ ಅಬ್ಬರಿಸಿದ ಕಾರಣ ರಸ್ತೆಗಳು ಹಾಳಾಗಿವೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರ, ಪಟ್ಟಣಗಳಲ್ಲಿನ ರಸ್ತೆಗಳ ಡಾಂಬರ್ ಕಿತ್ತು ಹೋಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಬೀದರ್‌–ಔರಾದ್‌, ಬೀದರ್ –ಲಾತೂರ್ ರಾಷ್ಟ್ರೀಯ ಹೆದ್ದಾರಿ ಅನೇಕ ಕಡೆ ಕಿತ್ತುಕೊಂಡು ಹೋಗಿದೆ. ಬೀದರ್‌– ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ 2019ರಲ್ಲೇ ಪೂರ್ಣಗೊಳ್ಳಬೇಕಿತ್ತು. ಅಸಮರ್ಪಕ ಕಾಮಗಾರಿಯಿಂದ ರಸ್ತೆ ಪೂರ್ಣಗೊಂಡಿಲ್ಲ. ರಸ್ತೆ ಗುಂಡಿಗಳಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದಾರೆ. ಔರಾದ್–ಬೀದರ್ ಹಾಗೂ ಹುಮನಾಬಾದ್–ಬೀದರ್‌ ಮಧ್ಯೆ ಪ್ರಯಾಣಿಸುವವರ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ. ಹೆದ್ದಾರಿ ಹಾಳು ಬಿದ್ದರೂ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ನಗರದಲ್ಲಿ ಹಾರೂರಗೇರಿ ಕ್ರಾಸ್‌ ಸಮೀಪ, ಲಕ್ಷ್ಮೀಬಾಯಿ ಕಮಠಾಣೆ ಕಾಲೇಜು ಕ್ರಾಸ್, ಮೈಲೂರು, ಕೆಇಬಿ ಮುಂಭಾಗದ ರಸ್ತೆ, ಅಮೀರ್‌ಬರೀದ್‌ ಉದ್ಯಾನದ ಹಿಂಬದಿ ರಸ್ತೆ ಮಳೆಗೆ ಕಿತ್ತುಕೊಂಡು ಹೋಗಿದೆ. ಕಾರಣ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಭಾಲ್ಕಿ ಪಟ್ಟಣದ ಶಿವಾಜಿ ವೃತ್ತ ಸಮೀಪ, ಗಾಂಧಿ ವೃತ್ತ ಬಳಿ, ಬಾಲಾಜಿ ಮಂದಿರ ಮುಂಭಾಗ, ಬಸವೇಶ್ವರ ಮೂರ್ತಿ ಒಳಗೊಂಡಂತೆ ಕಲವಾಡಿಯಿಂದ ದಾಡಗಿ ಕ್ರಾಸ್, ಅಂಬೇಸಾಂಗವಿ ಕ್ರಾಸ್ ನಿಂದ ಭಾಲ್ಕಿ ಮಧ್ಯದ ರಸ್ತೆಯ ಕೆಲವೆಡೆ ತಗ್ಗು, ಗುಂಡಿ ನಿರ್ಮಾಣ ಗೊಂಡಿದ್ದು, ವಾಹನ ಸವಾರರಿಗೆ ಮಳೆಯಲ್ಲಿ ರಸ್ತೆ ಯಾವುದು, ಗುಂಡಿ ಯಾವುದು ಎನ್ನುವುದು ತಿಳಿಯುತ್ತಿಲ್ಲ ಎಂದು ವಾಹನ ಚಾಲಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಸದ್ಯದ ಮಳೆಗಂತೂ ರಸ್ತೆಗಳು ಹೇಳಿಕೊಳ್ಳುವಷ್ಟರ ಮಟ್ಟಿಗೆ ಹಾಳಾಗಿಲ್ಲ. ರಸ್ತೆಗಳು ಗುಣಮಟ್ಟದಿಂದ ಕೂಡಿವೆ’ ಎಂದು ಎಇಇ ಶಿವಶಂಕರ ಕಾಮಶೆಟ್ಟಿ ತಿಳಿಸಿದರು.

ಬಸವಕಲ್ಯಾಣ ನಗರದಲ್ಲಿನ ಗಾಂಧಿ ವೃತ್ತ ಸಮೀಪದ ಮುಖ್ಯ ರಸ್ತೆ, ಬಸ್ ನಿಲ್ದಾಣ ರಸ್ತೆ, ಶಿವಪುರ ರಸ್ತೆಯ ಕಟ್ಟಿಗೆ ಅಡ್ಡಾ ಹತ್ತಿರದಲ್ಲಿನ ರಸ್ತೆಯಲ್ಲಿ ತಗ್ಗು ಬಿದ್ದು ಅದರಲ್ಲಿ ನೀರು ಸಂಗ್ರಹಗೊಂಡಿದೆ. ತಾಲ್ಲೂಕಿನ ಆಲಗೂಡ ಗ್ರಾಮದ ರಸ್ತೆ, ನಾರಾಯಣಪುರ ರಸ್ತೆ, ಪ್ರತಾಪುರ ರಸ್ತೆಗಳಲ್ಲಿಯೂ ತಗ್ಗುಗಳು ಬಿದ್ದು ಹಾನಿಯಾಗಿದೆ.

ಹುಲಸೂರ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಮಳೆಗೆ ಅಲ್ಲಲ್ಲಿ ಕಿತ್ತು ಹೋಗಿದೆ. ರಸ್ತೆ ಮಧ್ಯೆ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಬೀದರ್ –ಲಾತೂರ್ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 752), ಹುಲಸೂರಿನಲ್ಲಿರುವ ಮುಖ್ಯರಸ್ತೆಯೂ ಹಾಳಾಗಿದೆ.

ಸಹಕಾರ: ಮನ್ಮಥ ಸ್ವಾಮಿ, ಗುಂಡು ಅತಿವಾಳ, ಮಾಣಿಕ ಭೂರೆ, ಬಸವರಾಜ ಪ್ರಭಾ, ಬಸವಕುಮಾರ ಕವಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT