ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮ ಸಂಸ್ಕೃತಿಯಿಂದ ಉನ್ನತ ಸಾಧನೆ: ಶಾರದೇಶಾನಂದ ಸ್ವಾಮೀಜಿ ಹೇಳಿಕೆ

ಜನಸೇವಾ ಶಾಲೆಯಲ್ಲಿ ವಿಶೇಷ ಉಪನ್ಯಾಸ
Last Updated 21 ಜನವರಿ 2022, 13:24 IST
ಅಕ್ಷರ ಗಾತ್ರ

ಬೀದರ್: ಶ್ರಮ ಸಂಸ್ಕೃತಿ ಮೈಗೂಡಿಸಿಕೊಂಡರೆ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶಾರದೇಶಾನಂದ ಸ್ವಾಮೀಜಿ ನುಡಿದರು.

ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋಮಾರಿತನದಿಂದ ಏನನ್ನೂ ಸಾಧಿಸಲಾಗದು ಎಂದು ಹೇಳಿದರು.

ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಏಕಾಗ್ರತೆ ಹಾಗೂ ಆತ್ಮವಿಶ್ವಾಸದ ಪಾತ್ರ ಬಹುಮುಖ್ಯವಾಗಿದೆ. ನೌಕರಿ ಬದಲು ಶಿಕ್ಷಣದ ಉದ್ದೇಶ ಜ್ಞಾನಾರ್ಜನೆ ಆಗಬೇಕಿದೆ ಎಂದರು.

ಮಾತೃಭಾಷೆ ಶಿಕ್ಷಣ ಅತ್ಯಂತ ಪರಿಣಾಮಕಾರಿ ಆಗಿರುತ್ತದೆ. ಉತ್ತುಂಗದ ಸಾಧನೆಗೈದವರಲ್ಲಿ ಮಾತೃಭಾಷೆಯಲ್ಲಿ ಓದಿದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮೊಬೈಲ್, ಟಿವಿಗಳಿಂದ ದೂರ ಇರಬೇಕು. ಓದಿನತ್ತ ಗಮನ ಕೇಂದ್ರೀಕರಿಸಬೇಕು. ಸ್ವಾಮಿ ವಿವೇಕಾನಂದರಂಥ ಮಹಾ ಪುರುಷರ ಜೀವನ ಅರಿಯಬೇಕು. ಉತ್ತಮ ಪ್ರಜೆಗಳಾಗಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಈವರೆಗೆ ರಾಜ್ಯದ ಸುಮಾರು 700ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಅವುಗಳಲ್ಲಿನ ಅತ್ಯುತ್ತಮ 10 ಶಾಲೆಗಳಲ್ಲಿ ಜನಸೇವಾ ಶಾಲೆ ಕೂಡ ಒಂದಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕøತಿ ಆಧಾರಿತ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ, ಶಿಕ್ಷಕರಾದ ರಾಹುಲ್, ಲಕ್ಷ್ಮಣ, ಶಿವಲೀಲಾ, ವನಜಾಕ್ಷಿ, ಮೀರಾಬಾಯಿ, ರೇಣುಕಾ, ಸುಲೋಚನಾ, ಮಹೇಶ್ವರಿ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಶಿವಾನಂದ ಮಲ್ಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT