ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ ನಗರಕ್ಕೆ ಬಂತು ಹೈಟೆಕ್‌ ಸಲೂನ್

ಒಂದೇ ಬಾರಿಗೆ ಕುಟುಂಬದ ಸದಸ್ಯರೆಲ್ಲರಿಗೂ ಸೇವೆ
Last Updated 14 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲೇ ಮೊದಲ ಬಾರಿಗೆ ಪರಂಪರೆ ನಗರದಲ್ಲಿ ಹೈಟೆಕ್‌ ಸಲೂನ್ ಆರಂಭವಾಗಿದೆ. ಕಲಬುರ್ಗಿ, ಹೈದರಾಬಾದ್‌ ಹಾಗೂ ಲಾತೂರ್‌ ಮಹಾನಗರಗಳಿಗೆ ಹೋಗಿ ಹೈಟೆಕ್‌ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದ ಪ್ರತಿಷ್ಠಿತರಿಗೆ ಇದೀಗ ಸ್ವಂತ ಊರಲ್ಲೇ ಹೈಟೆಕ್‌ ತಂತ್ರಜ್ಞಾನದ ಮೂಲಕ ಕೇಶ ವಿನ್ಯಾಸದ ಸೌಲಭ್ಯ ದೊರೆಯುತ್ತಿದೆ. ಸಾಮಾನ್ಯ ಕ್ಷೌರ ಅಂಗಡಿಗಿಂತಲೂ ತೀರಾ ಭಿನ್ನವಾಗಿರುವ ಕಾರಣ ಫ್ಯಾಶನ್‌ ಪ್ರಿಯರ ಗಮನ ಸೆಳೆಯುತ್ತಿದೆ.

ಗುರುನಾನಕ ಗೇಟ್‌ ಸಮೀಪದ ಶಿವಕಲಾ ಕಾಂಪ್ಲೆಕ್ಸ್‌ನಲ್ಲಿ ಶುರುವಾದ ‘ಗ್ಲೇಜ್ ಯುನಿಸೆಕ್ಸ್ ಸಲೂನ್‌ ಆ್ಯಂಡ್ ಸ್ಪಾ ಲೊರೆಲ್‌ ಪ್ರೊಫೆಷನಲ್‌’ ಹೆಸರಿನ ಹೈಟೆಟೆಕ್‌ ಸಲೂನ್‌, ಗುಣಮಟ್ಟದ ಸೇವೆ ಹಾಗೂ ಹೆಚ್ಚಿನ ದರದಿಂದಾಗಿ ಚರ್ಚೆಯಲ್ಲಿದೆ.

ದೆಹಲಿ, ದಾರ್ಜಿಲಿಂಗ್‌ ಹಾಗೂ ನೇಪಾಳದ ಇಬ್ಬರು ಮಹಿಳೆಯರು ಸೇರಿ ಒಟ್ಟು ಎಂಟು ಜನ ವೃತ್ತಿಪರ ತರಬೇತಿ ಪಡೆದವರು ಹೈಟೆಕ್‌ ಸಲೂನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಿಂಗ ತಾರತಮ್ಯ ಇಲ್ಲದಂತೆ ಒಂದೇ ಚಿಕ್ಕ ಹಾಲ್‌ನಲ್ಲಿ ಕೇಶ ವಿನ್ಯಾಸ, ಕಟ್ಟಿಂಗ್‌ ಮಾಡಲಾಗುತ್ತಿದೆ. ಮಹಿಳೆಯರು ಬಯಸಿದರೆ ಪ್ರತ್ಯೇಕ ಕೊಠಡಿಯಲ್ಲೂ ಕೇಶ ವಿನ್ಯಾಸ ಮಾಡುವ ವ್ಯವಸ್ಥೆ ಇದೆ.

ಗ್ರಾಹಕರು ಬಯಸುವ ಸೇವೆಗೆ ಅನುಗುಣವಾಗಿ ಕನಿಷ್ಠ ₹ 250 ರಿಂದ ₹ 5 ಸಾವಿರ ವರೆಗೂ ದರ ಇದೆ. ಶುಚಿತ್ವ, ಸುರಕ್ಷತೆ ಹಾಗೂ ವಿಶಿಷ್ಟ ವಿನ್ಯಾಸದ ಕಾರಣಗಳಿಂದಾಗಿಯೇ ಮೇಲ್ವರ್ಗದ ಜನ ಇಲ್ಲಿಗೆ ಬರುತ್ತಿದ್ದಾರೆ.

‘ಪ್ಯಾರಿಸ್‌ ಮೂಲದ ಲೊರೆಲ್‌ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಅಮೊನಿಯಾ ರಹಿತ ತೈಲ ಇರುವ ಕಾರಣ ಲೊರೆಲ್‌ ಉತ್ಪನ್ನಗಳಿಗೆ ಬೆಲೆ ಹೆಚ್ಚು. ನಮ್ಮ ಸಲೂನ್‌ಗೆ ಬರುವ ಗ್ರಾಹಕರಿಗೆ ಅವರ ಚರ್ಮ ಹಾಗೂ ಕೂದಲಿನ ಬಗೆಗೆ ಸಿಬ್ಬಂದಿ ತಿಳಿವಳಿಕೆ ನೀಡುತ್ತಾರೆ. ನಂತರ ಶಾಂಪೂದಿಂದ ಗ್ರಾಹಕನ ತಲೆ ತೊಳೆದು ಕಟ್ಟಿಂಗ್‌ ಮಾಡಲಾಗುತ್ತದೆ. ಕೂದಲು ಕತ್ತರಿಸಿದ ಮೇಲೆಯೂ ತಲೆ ತೊಳೆದು ರಿಫ್ರೆಶ್‌ ಮಾಡಿ ಕಳಿಸಲಾಗುತ್ತದೆ’ ಎಂದು ಹೈಟೆಕ್‌ ಸಲೂನ್‌ ಮಾಲೀಕ ಶೈಲೇಶ್‌ ಸೀರಿ ಹೇಳುತ್ತಾರೆ.

‘ಹೈದರಾಬಾದ್‌ ಕರ್ನಾಟಕದಲ್ಲಿ ಮೊದಲ ಹೈಟೆಕ್‌ ಸಲೂನ್ 2015ರ ನವೆಂಬರ್‌ನಲ್ಲಿ ಕಲಬುರ್ಗಿಯಲ್ಲಿ ಆರಂಭವಾಯಿತು. ಈಗ ಬೀದರ್‌ಗೂ ಪದಾರ್ಪಣೆ ಮಾಡಿದೆ. ಒಂದೇ ಹಾಲ್‌ನಲ್ಲಿ ಮಹಿಳೆಯರು ಹಾಗೂ ಪುರುಷರ ಕೂದಲು ಕತ್ತರಿಸಲಾಗುತ್ತಿದೆ. ಫೇಸಿಯಲ್‌ಗೆ ಮಾತ್ರ ಪ್ರತ್ಯೇಕ ಕೊಠಡಿಗಳಿವೆ’ ಎಂದು ಅವರು ವಿವರಿಸುತ್ತಾರೆ.

‘ಸರಳವಾದ ಕೂದಲನ್ನು ಗುಂಗುರ, ಗುಂಗುರ ಕೂದಲನ್ನು ಉದ್ದ ಕೂದಲಾಗಿ ಪರಿವರ್ತಿಸಬಹುದು. ಜಡ್ಡುಕಟ್ಟಿದಂತಿರುವ ಕೂದಲಿಗೆ ಹೊಳಪು ತರುತ್ತಿರುವ ಕಾರಣ ಬೀದರ್‌ನ ವಾಯುಪಡೆ ತರಬೇತಿ ಕೇಂದ್ರದ ಸಿಬ್ಬಂದಿ, ಎಂಜಿನಿಯರ್‌, ವೈದ್ಯರು, ಉದ್ಯಮಿಗಳ ಹಾಗೂ ರಾಜಕೀಯ ವ್ಯಕ್ತಿಗಳ ಕುಟುಂಬದವರು ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಚಲನಚಿತ್ರ, ಕಿರುತೆರೆಯ ಕಲಾವಿದರೂ ಬಂದು ಹೋಗಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಹೇರ್‌ ಸ್ಪಾ ಮೂಲಕ ಕೂದಲು ಉದುರುವಿಕೆ ಹಾಗೂ ಹೊಟ್ಟು ಆಗುವುದನ್ನು ತಡೆಯಬಹುದು. ಕೇಶ ರಾಶಿಗೆ ಹೊಸ ಹೊಳಪು ನೀಡಬಹುದು’ ಎನ್ನುತ್ತಾರೆ ಅವರು.

‘ಇದೀಗ ಲೋಟಸ್‌, ಓ3ಪ್ಲಸ್‌, ಶರಲ್ಸ್‌ ಫೇಸಿಯಲ್‌ ಸೇವೆ ಆರಂಭಿಸಿದ್ದೇವೆ. ಹೇರ್‌ ಟ್ಯಾಟೊ ಸೇವೆಯೂ ನಮ್ಮಲ್ಲಿ ಲಭ್ಯವಿದೆ. ಮೆಟ್ರೊ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಬಹಳ ಕಡಿಮೆ ಇದೆ. ₹ 1 ಸಾವಿರ ಪಾವತಿಸಿ ಪ್ರಿವಿಲೇಜ್‌ ಕಾರ್ಡ್‌ ಪಡೆದ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಶೇಕಡ 10 ರಷ್ಟು ರಿಯಾಯಿತಿ ಇದೆ’ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT