ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ: ಭಾವೈಕ್ಯದ ಹೋಳಾ ಹಬ್ಬದ ಚಕ್ಕಡಿ ಓಟ

ರಾಜೇಶ್ವರ ಗ್ರಾಮದಲ್ಲಿ ರೈತರ ಹಬ್ಬದ ವಿಶಿಷ್ಟ ಸಂಪ್ರದಾಯ
Published : 2 ಸೆಪ್ಟೆಂಬರ್ 2024, 5:05 IST
Last Updated : 2 ಸೆಪ್ಟೆಂಬರ್ 2024, 5:05 IST
ಫಾಲೋ ಮಾಡಿ
Comments

ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರದಲ್ಲಿ ಮುಸ್ಲಿಂ ಸಮುದಾಯದವರೂ ಪಾಲ್ಗೊಳ್ಳುವಂಥ ಭಾವೈಕ್ಯ ಸಾರುವ ಚಕ್ಕಡಿ ಓಟದ ಸ್ಪರ್ಧೆ ಸೆಪ್ಟೆಂಬರ್ 2ರಂದು ಹೋಳಾ ಹಬ್ಬದಂದು ನಡೆಯಲಿದೆ. ಸಂಜೆ ಹೊತ್ತು ಚಿಕ್ಕ ಗಾಲಿಗಳಿಗೆ ಕಟ್ಟಿದ ನೊಗವನ್ನು ಎಳೆದುಕೊಂಡು ಜೋಡಿ ಎತ್ತುಗಳು ಓಡುತ್ತಿದ್ದರೆ ಮೈ ಜುಮ್ಮೆನ್ನುತ್ತದೆ.

ರಾಜೇಶ್ವರ ಈಗ ಹೋಬಳಿ ಕೇಂದ್ರ ಆಗಿದ್ದರೂ ಹಿಂದೊಮ್ಮೆ ಹೈದರಾಬಾದ್ ನಿಜಾಮ್ ಕಾಲದಲ್ಲಿ ಜಿಲ್ಲಾ ಕೇಂದ್ರವಿತ್ತು. ಅಂದಿನ ವಿವಿಧ ಕಚೇರಿಗಳಿದ್ದ ಕೋಟೆಯ ಗೋಡೆಯಂತಿರುವ ಆವರಣಗೋಡೆಯಿಂದ ಸುತ್ತುವರಿದಿರುವ ಸ್ಥಳ ಇಲ್ಲಿದೆ. ಇದರ ನಾಲ್ಕು ಕಡೆಗಳಲ್ಲಿಯೂ ದೊಡ್ಡ ಹುಡೆಗಳಿದ್ದವು. ಅವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದು ಗತವೈಭವವನ್ನು ನೆನಪಿಸುತ್ತವೆ. ಆ ಕಾಲದಿಂದ ಹೋಳಾ ಹಬ್ಬಕ್ಕೆ ಎತ್ತುಗಳ ಚಕ್ಕಡಿ ಓಡಿಸುವ ಸಂಪ್ರದಾಯ ಇಲ್ಲಿ ಬೆಳೆದು ಬಂದಿದೆ.

ಹೋಳಾ ಹಬ್ಬ ರೈತರ ಹಬ್ಬವಾಗಿದ್ದು ಕಾರಹುಣ್ಣಿಮೆಯಂತೆಯೇ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ ಎತ್ತುಗಳ ಪೂಜೆ ನೆರವೇರಿಸಲಾಗುತ್ತದೆ. ಬೀದರ್ ಜಿಲ್ಲೆಯ ಅನೇಕ ಕಡೆ ಇದನ್ನು ಆಚರಿಸಲಾಗುತ್ತದೆ. ಬಸವಕಲ್ಯಾಣ ತಾಲ್ಲೂಕಿನಲ್ಲಿಯೂ ಬಹುತೇಕ ಗ್ರಾಮಗಳಲ್ಲಿ ಈ ಹಬ್ಬವಿರುತ್ತದೆ. ಎಲ್ಲೆಡೆ ಎತ್ತುಗಳ ಮೆರವಣಿಗೆ ಹಾಗೂ ಎತ್ತುಗಳ ಓಟ ಹಮ್ಮಿಕೊಳ್ಳಲಾಗುತ್ತದೆ. ಆದರೆ ರಾಜೇಶ್ವರದಲ್ಲಿ ಮಾತ್ರ ಚಕ್ಕಡಿಗಳನ್ನು ಓಡಿಸುವುದರಿಂದ ಇದನ್ನು ನೋಡಲು ದೂರದೂರದ ಜನರು ಬರುತ್ತಾರೆ.

ಎತ್ತುಗಳ ಮೈ ತೊಳೆದು ಕೋಡುಗಳಿಗೆ ಮತಾಟಿ, ಬಾಸಿಂಗ್, ಮಗಡಾ, ಕೊರಳಪಟ್ಟಿ, ಗಂಟೆಸರ ಕಟ್ಟಿ ಮೈಮೇಲೆ ಝೂಲಾ ಬಟ್ಟೆ ಹಾಕಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಲಾಗುತ್ತದೆ. ನಂತರದಲ್ಲಿ ಮೆರವಣಿಗೆಯ ಮೂಲಕ ಓಟದ ಸ್ಥಳಕ್ಕೆ ಬರಲಾಗುತ್ತದೆ. ಗ್ರಾಮದ ಪೂರ್ವಕ್ಕೆ ಉತ್ತರಾಭಿಮುಖವಿರುವ ರಸ್ತೆಯಲ್ಲಿ ಒಂದೊಂದರಂತೆ ಬಲೂನ್ ಹಾಗೂ ತಳೀರು, ತೋರಣಗಳಿಂದ ಸಿಂಗರಿಸಿದ ಚಕ್ಕಡಿಗಳನ್ನು ಓಡಿಸಲಾಗುತ್ತದೆ. ಎಲ್ಲ ಜಾತಿ, ಸಮುದಾಯದ ರೈತರು ಚಕ್ಕಡಿಗಳನ್ನು ಓಡಿಸುತ್ತಾರೆ. ಇದನ್ನು ನೋಡುವುದಕ್ಕಾಗಿ ರಸ್ತೆಯ ಎರಡೂ ಬದಿಯಲ್ಲಿ ಜನರು ಕಿಕ್ಕಿರಿದು ಸೇರಿರುತ್ತಾರೆ. ನಂತರ ಹನುಮಾನ ದೇವಸ್ಥಾನದ ಆವರಣದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.

‘ಓಟದ ಸ್ಪರ್ಧೆ ಸಂಬಂಧ ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ಪೂರ್ವಸಿದ್ಧತಾ ಸಭೆ ನಡೆದಿದೆ. ಓಟ ನಡೆಯುವ ರಸ್ತೆಯಲ್ಲಿನ ತಗ್ಗುಗಳನ್ನು ಮುಚ್ಚಲಾಗಿದೆ. ಹೋಳಾ ಸಮಿತಿ ಅಧ್ಯಕ್ಷರನ್ನಾಗಿ ಸತೀಶ ಬಸವರಾಜ ಪಾಟೀಲ ಅವರನ್ನು ನೇಮಿಸಲಾಗಿದೆ. ಸಂಚಾಲಕರನ್ನಾಗಿ ಶಿವರಾಜ ಕರಬಸಪ್ಪ ಸೀಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಾಬಾಯಿ ಪ್ರಭು ಹೊನ್ನಳ್ಳಿ, ಉಪಾಧ್ಯಕ್ಷೆ ಅನಿತಾ ಮಲ್ಲಿಕಾರ್ಜುನ ಮಾಲೆ ಅವರನ್ನು ನೇಮಿಸಲಾಗಿದೆ. ಪಂಚಾಯಿತಿ ಸರ್ವ ಸದಸ್ಯರು ಹಾಗೂ ಮುಖಂಡರು ಕೂಡ ಸಮಿತಿಯಲ್ಲಿರುತ್ತಾರೆ’ ಎಂದು ಪಿಡಿಒ ಅರ್ಜುನ ಶಿಂಧೆ ತಿಳಿಸಿದರು.

ಬಹುಮಾನ: ಚಕ್ಕಡಿ ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರಿಂದ ₹41 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಅವರಿಂದ ₹31 ಸಾವಿರ ಬಹುಮಾನ ನೀಡಲಾಗುತ್ತದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಅವರಿಂದ ₹21 ಸಾವಿರ ನಗದು ಒಳಗೊಂಡಿರುವ ತೃತೀಯ ಬಹುಮಾನ ನೀಡಲಾಗುತ್ತದೆ. ನಂತರದಲ್ಲಿನ ಸಮಾಧಾನಕರ ಬಹುಮಾನ, ಉತ್ತಮ ಜೋಡೆತ್ತುಗಳ ಬಹುಮಾನವನ್ನು ಪಿಕೆಪಿಎಸ್ ವತಿಯಿಂದ ವಿತರಿಸಲಾಗುತ್ತದೆ.

ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಹೋಳಾ ಹಬ್ಬದ ಚಕ್ಕಡಿ ಓಟ ನಡೆಯುವ ರಸ್ತೆಯಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ತಗ್ಗುಗುಂಡಿಗಳನ್ನು ಮುಚ್ಚಿದರು
ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಹೋಳಾ ಹಬ್ಬದ ಚಕ್ಕಡಿ ಓಟ ನಡೆಯುವ ರಸ್ತೆಯಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ತಗ್ಗುಗುಂಡಿಗಳನ್ನು ಮುಚ್ಚಿದರು
ಚಕ್ಕಡಿ ಓಟ ನಡೆಯುವ ಗ್ರಾಮದ ಪ್ರಮುಖ ರಸ್ತೆಯಲ್ಲಿನ ತಗ್ಗುಗುಂಡಿಗಳನ್ನು ಮುಚ್ಚಲಾಗಿದೆ. ಜನರಿಗೆ ವೀಕ್ಷಣೆ ಹಾಗೂ ಇತರೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.
ಅರ್ಜುನ ಶಿಂಧೆ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT