ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಯಲ್ಲಿ ಸುಧಾರಣೆ ಕಾಣದ ಹಾಸ್ಟೆಲ್ ವ್ಯವಸ್ಥೆ

ಮೂಲಸೌಕರ್ಯದ ಕೊರತೆ, ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ಹೆಸರು ನೋಂದಣಿಗೆ ತಾಂತ್ರಿಕ ಸಮಸ್ಯೆ
Last Updated 8 ಫೆಬ್ರುವರಿ 2021, 3:15 IST
ಅಕ್ಷರ ಗಾತ್ರ

ಬೀದರ್: ಪ್ರೌಢಶಾಲೆ ಹಾಗೂ ಕಾಲೇಜುಗಳು ಆರಂಭವಾದ ನಂತರ ಜಿಲ್ಲೆಯಲ್ಲಿನ ವಿದ್ಯಾರ್ಥಿ ವಸತಿನಿಲಯಗಳು ಮತ್ತೆ ತೆರೆದಿವೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಮೂಲಸೌಕರ್ಯಕ್ಕೆ ಒತ್ತು ಕೊಡದೆ ವಸತಿನಿಲಯಗಳನ್ನು ಆರಂಭಿಸಿದ್ದಾರೆ.

ಸರ್ಕಾರ, ಕೋವಿಡ್ ನಿಯಮ ಪಾಲಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು. ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂಬ ಸೂಚನೆಯನ್ನೂ ನೀಡಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಪೋರ್ಟಲ್‌ ಕೂಡ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿಯೇ ಇವೆ. ಅವುಗಳಲ್ಲಿ ಸರಿಯಾದ ಸ್ನಾನಗೃಹ, ಶೌಚಾಲಯ ಹಾಗೂ ಅಡುಗೆ ಕೋಣೆಗಳು ಇಲ್ಲ. ಅಧ್ಯಯನಕ್ಕೆ ಪೂರಕವಾದ ವಾತಾವರಣ ಇಲ್ಲ. ಬಹುತೇಕ ವಸತಿ ನಿಲಯಗಳಿಗೆ ಸ್ವಂತ ನಿವೇಶನ ಇವೆ. ಕೆಲವು ವಸತಿ ನಿಲಯಗಳ ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕೆಲ ವಸತಿ ನಿಲಯಗಳಿಗೆ ಇಂದಿಗೂ ನಿವೇಶನ ಲಭಿಸಿಲ್ಲ.

ಬೀದರ್‌ ನಗರದಲ್ಲಿ 28 ವಿದ್ಯಾರ್ಥಿ ನಿಲಯಗಳಲ್ಲಿ ಅರ್ಧದಷ್ಟು ಖಾಸಗಿ ಕಟ್ಟಡದಲ್ಲಿಯೇ ನಡೆಯುತ್ತಿವೆ. ಅನೇಕ ಕಟ್ಟಡಗಳಲ್ಲಿ ಸರಿಯಾಗಿ ಸ್ನಾನಗೃಹ ಹಾಗೂ ಶೌಚಾಲಯಗಳು ಇಲ್ಲ. ನೈರ್ಮಲ್ಯ ಸಮಸ್ಯೆ ಎದ್ದು ಕಾಣುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿಯೇ ಹೆಚ್ಚು ಸಮಸ್ಯೆ ಇದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮೊಬೈಲ್‌ಗಳ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ಉಪ ನಿರ್ದೇಶಕರ ವಿರುದ್ಧವೇ ಅನೇಕ ಸಂಘಟನೆಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿವೆ.

‘ವಿದ್ಯಾರ್ಥಿ ನಿಲಯಗಳಲ್ಲಿ ಸಮಯಕ್ಕೆ ಸರಿಯಾಗಿ ಊಟ ದೊರೆಯದಿದ್ದಾಗ, ನೀರಿನ ಸಮಸ್ಯೆಯಾದಾಗ ಯಾರಿಗೆ ಹೇಳಬೇಕು? ಕಾರಣ ಕೆಲ ವಾರ್ಡನ್‌ಗಳು ವಿದ್ಯಾರ್ಥಿಗಳ ಮನವಿಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಹ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ವಿದ್ಯಾರ್ಥಿ ಪ್ರತಿನಿಧಿ ಪ್ರದೀಪ ನಾಟೇಕರ್ ಬೇಸರ ವ್ಯಕ್ತಪಡಿಸುತ್ತಾರೆ.

ಫೆ.10ರೊಳಗೆ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದುಕೊಳ್ಳುವಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ. ಆದರೆ, ವಸತಿ ನಿಲಯಗಳಲ್ಲಿ ಸ್ವಚ್ಛತೆ ಕೂಡ ಮಾಡಿಲ್ಲ. ಮುರಿದ ಮಂಚಗಳು, ಕೊಳೆತು ಹಾಳಾದ ಸ್ನಾನಗೃಹ ಹಾಗೂ ಶೌಚಾಲಯದ ಬಾಗಿಲುಗಳನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ.

ವಿದ್ಯಾರ್ಥಿಗಳು ವಸತಿ ನಿಲಯಗಳಿಗೆ ಪ್ರವೇಶ ಪಡೆಯಬೇಕೆಂದರೆ ನೆಟ್‌ವರ್ಕ್‌ ಸಮಸ್ಯೆ ಇದೆ. ಇಂಟರ್‌ನೆಟ್‌ನಲ್ಲಿ ಸರಿಯಾಗಿ ಅರ್ಜಿಗಳು ಅಪ್‌ಲೋಡ್‌ ಆಗುತ್ತಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಇಲಾಖೆಯ ಅಧಿಕಾರಿಗಳು ವಸತಿ ನಿಲಯಕ್ಕೆ ವಿದ್ಯಾರ್ಥಿಗಳೇ ಬರುತ್ತಿಲ್ಲ ಎಂದು ಹೇಳತೊಡಗಿದ್ದಾರೆ.

ಬೀದರ್‌ ನಗರದಲ್ಲಿ ಒಟ್ಟು 9 ವಿದ್ಯಾರ್ಥಿ ವಸತಿ ನಿಲಯಗಳಿವೆ. ನಾಲ್ಕು ಮೆಟ್ರಿಕ್‌ ನಂತರದ ವಸತಿ ನಿಲಯಗಳಲ್ಲಿ ಜನವರಿ ಎರಡನೇ ವಾರದಲ್ಲಿ 227 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಸದ್ಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳು ಈಗ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ.

100 ಸ್ಥಾನಗಳು ಇದ್ದಲ್ಲಿ ಪ್ರಸಕ್ತ ವರ್ಷ 75 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ, ಜನಪ್ರತಿನಿಧಿಗಳು ಅವಕಾಶ ಇದ್ದಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಸರ್ಕಾರ ಅಗತ್ಯವಿರುವಷ್ಟು ಅನುದಾನ ಕೊಡದ ಕಾರಣ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

‘ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆ ಮಾಡಲು ಅನುದಾನದ ಕೊರತೆ ಇಲ್ಲ. ಸರ್ಕಾರದ ನಿಯಮ ದಂತೆ ವಾರದಲ್ಲಿ ಕನಿಷ್ಠ ಒಮ್ಮೆಯಾದರೂಶೌಚಾಲಯಗಳನ್ನು ಸ್ಚಚ್ಛಗೊಳಿಸುವಂತೆ ಸೂಚಿಸಲಾಗಿದೆ. ವಸತಿ ನಿಲಯದ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿ ಇದೆ. ಶೀಘ್ರದಲ್ಲೇ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿವೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಖೋಬಾಳಕರ್‌ ಹೇಳುತ್ತಾರೆ.

ನಾಲ್ವರಿಗೆ 17 ವಸತಿ ನಿಲಯಗಳ ಹೊಣೆ

ಬಸವಕಲ್ಯಾಣ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಟ್ಟು 17 ವಿದ್ಯಾರ್ಥಿ ವಸತಿ ನಿಲಯಗಳಿದ್ದು ಅವುಗಳಲ್ಲಿ 5 ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ.

ಪಟ್ಟಣದಲ್ಲಿನ ಒಂದಕ್ಕೆ ಮಾತ್ರ ಸ್ವಂತ ಕಟ್ಟಡವಿದ್ದರೆ, 4 ವಸತಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಇವೆ. ಹರಳಯ್ಯ ವೃತ್ತದ ಹತ್ತಿರವಿರುವ ಬಾಲಕಿಯರ ವಸತಿನಿಲಯದ ಬಾಡಿಗೆ ಕಟ್ಟಡ ಉತ್ತಮವಾಗಿದ್ದರೂ ಇಕ್ಕಟ್ಟಾದ ಸ್ಥಳದಲ್ಲಿದೆ. ಜಾಗದ ಕೊರತೆಯೂ ಇದೆ ಎಂಬುದು ವಿದ್ಯಾರ್ಥಿನಿಯರ ಗೋಳು.

ವಸತಿ ನಿಲಯದ ಮೇಲ್ವಿಚಾರಕರ ಸ್ಥಾನಗಳು ಖಾಲಿಯಿದ್ದು ನಾಲ್ವರು 17 ವಸತಿ ನಿಲಯಗಳ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಹುಲಸೂರಲ್ಲಿರುವ ಬಾಲಕರ ವಸತಿ ನಿಲಯ ಪಟ್ಟಣದಿಂದ ಒಂದು ಕಿ .ಮೀ ದೂರದಲ್ಲಿದೆ. ಇಲ್ಲಿನ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪಗಳು ಇವೆ. ಬಾಲಕಿಯರ ವಸತಿ ನಿಲಯದಲ್ಲಿ 15 ವಿದ್ಯಾರ್ಥಿಗಳು ಇದ್ದಾರೆ. ಕೋವಿಡ್‌ ಕಾರಣದಿಂದ ಮನೆಗೆ ತೆರಳಿರುವ ವಿದ್ಯಾರ್ಥಿಗಳು ನಿಧಾನವಾಗಿ ವಸತಿನಿಲಯಕ್ಕೆ ಮರಳುತ್ತಿದ್ದಾರೆ.

ಸ್ವಂತ ಕಟ್ಟಡ ಇದ್ದರೂ ಸೌಲಭ್ಯ ಕೊರತೆ

ಔರಾದ್ ಪಟ್ಟಣದಲ್ಲಿ ಮೂರು ಪರಿಶಿಷ್ಟ ಜಾತಿ ಹಾಗೂ ಎರಡು ಅಲ್ಪಸಂಖ್ಯಾತ ವಸತಿ ನಿಲಯಗಳಿವೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಸತಿ ನಿಲಯಗಳ ಪೈಕಿ ಎರಡಕ್ಕೆ ಸ್ವಂತ ಕಟ್ಟಡ ಇದ್ದರೆ ಒಂದು ಎಪಿಎಂಸಿ ಪ್ರಾಂಗಣದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.

ಸ್ವಂತ ಕಟ್ಟಡಗಳೂ ನಿರ್ವಹಣೆ ಇಲ್ಲದೆ ಹಾಳಾಗಿವೆ. ಬಾಗಿಲುಗಳು ಕಿತ್ತು ಹೋಗಿವೆ. ಕಿಟಕಿ, ಶೌಚಾಲಯಗಳು ಸರಿ ಇಲ್ಲ. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕೆಲ ಕೊರತೆ ಇವೆ. ಶುದ್ಧ ನೀರಿನ ಘಟಕ ಇದ್ದರೂ ನೀರಿನ ಟ್ಯಾಂಕ್ ಸ್ವಚ್ಛ ಆಗಬೇಕಿದೆ. ರಾತ್ರಿ ವಿದ್ಯುತ್‌ ಕೈಕೊಟ್ಟರೆ ಕತ್ತಲಲ್ಲಿ ಕೂಡಬೇಕು. ಸೊಳ್ಳೆಗಳ ಕಾಟವೂ ವಿಪರೀತವಾಗಿದೆ.

ಎಲ್ಲ ವಸತಿ ನಿಲಯಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವುದರ ಜತೆಗೆ ಸ್ವಚ್ಛತೆ ಕಾಪಾಡಲು ಗಮನ ಹರಿಸಬೇಕು ಎಂದು ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ಆಗ್ರಹಿಸುತ್ತಾರೆ.

‘ವಸತಿ ನಿಲಯಗಳಲ್ಲಿ ಬೆಡ್ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಕಿಟಕಿ, ಬಾಗಿಲು ಮೊದಲಾದ ಅವಶ್ಯವಿರುವ ರಿಪೇರಿ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸುಭಾಷ ನಾಗೂರೆ ಹೇಳುತ್ತಾರೆ.

ಸಮಸ್ಯೆ ನಿವಾರಣೆಗೆ ಮುಂದಾಗದ ಅಧಿಕಾರಿಗಳು

ಹುಮನಾಬಾದ್ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಐದು ವಸತಿ ನಿಲಯಗಳು ಇವೆ. ಅದರಲ್ಲಿ ಮೂರು ಬಾಲಕಿಯರ ವಸತಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿನಿಯರು ಶೌಚಾಲಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಮೂರು ವಸತಿ ನಿಲಯಗಳು ಇವೆ. ಎಲ್ಲ ವಸತಿ ನಿಲಯಗಳಲ್ಲೂ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ.

ಚಿಟಗುಪ್ಪದಲ್ಲಿ ಬಿಸಿಎಂ ಅಡಿಯಲ್ಲಿ ಎರಡು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳು ಇವೆ, ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಇದ್ದಾರೆ. ಕಡಿಮೆ ವಿದ್ಯಾರ್ಥಿಗಳು ಇರುವ ಕಾರಣ ಯಾವುದೇ ಸಮಸ್ಯೆ ಎದುರಾಗಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಕಮಲನಗರದ ಡಾ.ಬಿ.ಆರ್.ಅಂಬೇಡ್ಕರ್‌ ವಸತಿ ನಿಲಯದ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆ ಇರುವ ಕಾರಣ ಸಮೀಪದ ಹೊಳಸಮುದ್ರ ಗ್ರಾಮದ ಮನೆಯೊಂದರಲ್ಲಿ ವಸತಿ ನಿಲಯಗಳನ್ನು ನಡೆಸಲಾಗುತ್ತಿದೆ. ಇಲಾಖೆ ನಿರ್ಮಿಸಿದ ಕಟ್ಟಡದಲ್ಲಿ ಹಲವು ಸಮಸ್ಯೆಗಳಿದ್ದರೂ ಅಧಿಕಾರಿಗಳು ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ.

ಒಂದೇ ಕಟ್ಟಡದಲ್ಲಿ ಎರಡು ವಸತಿ ನಿಲಯಗಳು

ಭಾಲ್ಕಿ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ನಾಲ್ಕು ವಸತಿ ನಿಲಯಗಳಲ್ಲಿ ಒಂದು ವಸತಿ ನಿಲಯದ ಕಟ್ಟಡ ನಿರ್ಮಾಣದ ಹಂತದಲ್ಲಿದೆ. ಮೆಟ್ರಿಕ್‌ ನಂತರದ ಮತ್ತು ಮೆಟ್ರಿಕ್‌ ಪೂರ್ವದ ಬಾಲಕಿಯರು ಸರ್ಕಾರಿ ಆಸ್ಪತ್ರೆ ಪಕ್ಕದ ವಸತಿ ನಿಲಯದಲ್ಲಿಯೇ ವಾಸಿಸುತ್ತಿದ್ದಾರೆ.

ಸದ್ಯ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಯಾವುದಕ್ಕೂ ಮೆಟ್ರಿಕ್‌ ಪೂರ್ವ, ನಂತರದ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ನಿಲಯದ ವ್ಯವಸ್ಥೆ ಮಾಡಬೇಕು ಎಂದು ಹೆಸರು ಹೇಳಲಿಚ್ಛಿಸಿದ ವಿದ್ಯಾರ್ಥಿನಿಯರು ಹೇಳಿದರು.

ಸದ್ಯ ಮೆಟ್ರಿಕ್‌ ನಂತರ, ಪೂರ್ವದ ವಸತಿ ನಿಲಯಗಳಲ್ಲಿ ಪದವಿ ಕೊನೆಯ ವರ್ಷ, ಪಿಯುಸಿ ದ್ವಿತೀಯ ಹಾಗೂ 10ನೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತ್ರ ವಾಸವಿದ್ದಾರೆ. ಹೀಗಾಗಿ, ಸ್ಥಳಾವಕಾಶ, ಸೌಲಭ್ಯದ ಕೊರತೆಯಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT