ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್: ಧಾರ್ಮಿಕ ಏಕತೆಯ ‘ಹುಡಗಿ’

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ರಿಂದ ಕರಿ ಬಸವೇಶ್ವರ, ಯಂಕಮ್ಮ ದೇವರಿಗೆ ಪೂಜೆ
Last Updated 13 ಫೆಬ್ರುವರಿ 2022, 6:36 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಹುಡಗಿ ಗ್ರಾಮವು ಶೈಕ್ಷಣಿಕ ಹಾಗೂ ಸಮಗ್ರ ಕೃಷಿ ಪದ್ಧತಿ ವೈಶಿಷ್ಟತೆಯ ಜತೆಗೆ ಧಾರ್ಮಿಕ ಏಕತೆಯನ್ನೂ ಹೊಂದಿದೆ.

ಗ್ರಾಮದ ದಿಗಂಬರ ಕರಿ ಬಸವೇಶ್ವರ ಹಾಗೂ ಯಂಕಮ್ಮ ದೇವಸ್ಥಾನವು ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದೂ ಧರ್ಮದ ಎಲ್ಲ ಸಮುದಾಯದವರ ಆರಾಧ್ಯ ಕೇಂದ್ರಗಳಾಗಿವೆ. ಪ್ರತಿ ವರ್ಷ ಎರಡೂ ದೇವಸ್ಥಾನಗಳಿಗೆ ನಡೆಯುವ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಧರ್ಮಗಳ ಭಕ್ತರು ಪಾಲ್ಗೊಂಡು ಏಕತೆ ಮೆರೆಯುತ್ತಾರೆ.

ಹೈದರಾಬಾದ್ ಮತ್ತು ಸೋಲಾ ಪುರ ನಡುವಣ ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ತರಕಾರಿ, ಹಾಲು ಮತ್ತು ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರಿಂದಾಗಿ ಗ್ರಾಮ ಹೆಚ್ಚು ಖ್ಯಾತಿ ಪಡೆದಿದೆ. ದೇವಸ್ಥಾನಗಳ ಆವರಣ ದಲ್ಲಿಯೇ ಗ್ರಾಮಸ್ಥರ ಮದುವೆಯಂತಹ ಕಾರ್ಯಕ್ರಮಗಳು ಜರಗುತ್ತವೆ.

ಹಸ್ತ ದಿಗಂಬರ ಕರಿ ಬಸವೇಶ್ವರರು ತಮ್ಮ ಜೀವನದುದ್ದಕ್ಕೂ ಅನೇಕ ಪವಾಡಗಳನ್ನು ಮಾಡಿದ್ದರು ಎಂಬುದು ಇಲ್ಲಿನವರ ಹೇಳಿಕೆ. ಅವರ ಶಿಷ್ಯರಾದ ಶರಣ ಮಡಿವಾಳಪ್ಪ ಹಾಗೂ ಶರಣೆ ಯಂಕಮ್ಮಾ ತಾಯಿಯವರು ಹೆಸರು ವಾಸಿಯಾಗಿದ್ದಾರೆ. ಕರಿ ಬಸವೇಶ್ವರರು ಸಿದ್ಧ ಹಸ್ತವುಳ್ಳವರು. ಹೀಗಾಗಿ ಅಪಾರ ಭಕ್ತರನ್ನು ಹೊಂದಿದ್ದು, ದೇವಸ್ಥಾನಕ್ಕೆ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ಭೇಟಿ ನೀಡಿ, ದರ್ಶನ ಪಡೆಯುತ್ತಾರೆ.

ಭಾಲ್ಕಿ ತಾಲ್ಲೂಕಿನ ಚಳಕಾಪೂರ್ ಗ್ರಾಮದ ಚನ್ನ ಬಸವಯ್ಯ ಮತ್ತು ಜ್ಯೋತೆಮ್ಮ ದಂಪತಿಗೆ ಜ್ಯೇಷ್ಠ ಏಕಾದಶಿಯಂದು ಕರಿ ಬಸವೇಶ್ವರ ಜನಿಸಿದ್ದರು. 7ನೇ ವಯಸ್ಸಿನಲ್ಲಿ ತಮ್ಮಲ್ಲಿನ ಧಾರ್ಮಿಕ ಜ್ಞಾನದ ಮೂಲಕ ಹುಡಗಿ ಹಿರೇಮಠದ ಪೀಠಾಧಿಪತಿ ಮಾನಿಂಗಪ್ಪ ಶಿವಾಚಾರ್ಯರ ಗಮನ ಸೆಳೆದರು. ಮುಂದೆ ಕರಿ ಬಸವೇಶ್ವರರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಕೊಂಡರು. ಅವರ ವಿದ್ಯಾಭ್ಯಾಸಕ್ಕಾಗಿ ಪಂಡಿತರನ್ನು ಕರೆಸಿ ಉಪನಿಷತ್ತುಗಳ ಅಧ್ಯಾಯನ ಮಾಡಿಸಿದರು. 9ನೇ ವಯಸ್ಸಿನಲ್ಲಿ ಹಿರೇಮಠದ ಪಟ್ಟಾಧಿಕಾರ ಸ್ವೀಕರಿಸಿದರು.

ತಮ್ಮ ಜೀವನ ಉದ್ದಕ್ಕೂ ಅನೇಕ ಪವಾಡಗಳನ್ನು ಮಾಡಿ ತೋರಿಸಿದ್ದಾರೆ. ಅವರೊಬ್ಬ ಪವಾಡ ಪುರುಷ ಎಂಬುವುದು ಇಲ್ಲಿನವರ ನಂಬಿಕೆ.

ಗ್ರಾಮದ ಎಲ್ಲ ಧರ್ಮದವರ ಆರಾಧ್ಯ ದೇವರಾಗಿದ್ದು, ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ

– ಶಶಿಕುಮಾರ ಮಾಶೆಟ್ಟಿ, ಗ್ರಾಮಸ್ಥ

ನಮ್ಮ ಪೂರ್ವಜರೂ ದೇವಸ್ಥಾನದ ಭಕ್ತರಾಗಿದ್ದು, ಮನೆಯ ಪ್ರತಿ ಶುಭ ಕಾರ್ಯಗಳಿಗು ಮುನ್ನ ಕರಿ ಬಸವೇಶ್ವರರಿಗೆ ಪುಜೆ ಸಲ್ಲಿಸಲಾಗುತ್ತದೆ

– ಶಿವಾನಂದ ಕುಡಂಬಲ್, ಭಕ್ತ

ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಆರಾಧ್ಯ ದೇವರಾಗಿದ್ದು, ನಿತ್ಯ ದೇವಸ್ಥಾನದಲ್ಲಿ ಅಭಿಷೇಕ, ರುದ್ರಾಭಿಷೇಕ ನಡೆಯುತ್ತವೆ

–ಮಾಹಾದೇವಯ್ಯ, ದೇವಸ್ಥಾನದ ಅರ್ಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT