ಹುಲಸೂರ: ಪಟ್ಟಣ ಸಮೀಪದ ಭಂಗೇವಾಡಿ (ಅಂತರಭಾರತಿ ತಾಂಡಾ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಶಿಥಿಲಗೊಂಡಿದ್ದು ವಿದ್ಯಾರ್ಥಿಗಳು ಜೀವ ಭಯದ ನಡುವೆ ಶಿಕ್ಷಣ ಪಡೆಯುವಂತಾಗಿದೆ.
ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 52 ವಿದ್ಯಾರ್ಥಿಗಳಿದ್ದಾರೆ. ಹಳೆಯ ಕಟ್ಟಡ ಸೋರುವುದರಿಂದ 2021-22ರ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಅಂದಾಜು ₹22 ಲಕ್ಷ ವೆಚ್ಚದಲ್ಲಿ ಎರಡು ಕಟ್ಟಡ ನಿರ್ಮಿಸಲಾಗಿತ್ತು. ಗುತ್ತಿಗೆದಾರ ನಿರ್ಲಕ್ಷದಿಂದ 2 ವರ್ಷ ಕಳೆಯುವ ಮೊದಲೇ ಹಳೆಯ ಹಾಗೂ ಹೊಸ ಕಟ್ಟಡ ಸಂಪೂರ್ಣ ಸೋರುತ್ತಿವೆ.
ಸೋರುವ ಕೊಠಡಿಯಲ್ಲಿ ಬಿಸಿಯೂಟ: ‘ಶಾಲೆಯಲ್ಲಿ ಬಿಸಿ ಊಟದ ಕೋಣೆ ಇಲ್ಲದೆ ಹಳೆಯ ಸೋರುವ ಕಟ್ಟಡದಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿದೆ. ಹೆಚ್ಚು ಮಳೆಯಾದರೆ ಶಾಲಾ ಆವರಣದಲ್ಲಿ ಊಟ ತಯಾರಿಸಲಾಗುತ್ತದೆ. ಕೆಲವೊಮ್ಮೆ ಕೊಠಡಿಗಳು ಸೋರಿದ ಪರಿಣಾಮ ಬಿಸಿಯೂಟದ ಧಾನ್ಯ ನೀರಿನಲ್ಲಿ ತೊಯ್ದು ಹಾಳಾಗಿವೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಮುಖ್ಯ ಶಿಕ್ಷಕಿ ಶಕುಂತಲಾ ಅವರು ಪ್ರಜಾವಾಣಿಗೆ ತಿಳಿಸಿದರು.
ಶಾಲಾ ಆವರಣ ಕುಡುಕರ ಅಡ್ಡೆಯಾಗಿದ್ದು ಮಧ್ಯದ ಖಾಲಿ ಪ್ಯಾಕೆಟ್, ಬಾಟಲಿಗಳನ್ನು ಬಿಸಾಕಿದ್ದಾರೆ. ಗುಟ್ಕಾ ತಿಂದು ಶಾಲೆಯಲ್ಲೇ ಉಗುಳುತ್ತಾರೆ. ಶಾಲಾ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದುಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಶಾಲಾ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಆವಾಲು ಸಲ್ಲಿಸಿದರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಭರತ್ ರಾಠೋಡ ತಿಳಿಸಿದರು.
ಮಕ್ಕಳಿಗಿಲ್ಲ ಶೌಚಾಲಯ ಭಾಗ್ಯ: ತರಗತಿಗಳು ಆರಂಭವಾಗಿ ತಿಂಗಳುಗಳೇ ಕಳೆದರೂ ಮಕ್ಕಳು, ಶಿಕ್ಷಕರು ಶೌಚಕ್ಕಾಗಿ ಪರದಾಡುವಂತಾಗಿದೆ. ಶಾಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ₹3 ಲಕ್ಷ ಹಾಗೂ ಶಿಕ್ಷಣ ಇಲಾಖೆಯಿಂದ ₹2 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದರೂ ನೀರಿಲ್ಲದೆ ನಿರುಪಯುಕ್ತವಾಗಿದೆ. ಅದರ ಸುತ್ತ ಹುಲ್ಲು ಬೆಳೆದಿದೆ. ಸದ್ಯ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಗ್ರಾಮಸ್ಥರಿಂದ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ.
ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳು, ಅಡುಗೆ ಕೋಣೆ ಸೋರುತ್ತಿದ್ದು ಗೋಡೆಗಳು ಮಳೆಗೆ ನೆನೆದು ಬೀಳುವ ಹಂತದಲ್ಲಿವೆ. ಶಾಲೆಯ ಆವರಣದಲ್ಲಿ ಶೌಚಾಲಯದ ಕೊರತೆ ಇದೆ. ಮಕ್ಕಳು ಶೌಚಾಲಯಕ್ಕೆ ಹೋಗಲು ಪರದಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಭಂಗೇವಾಡಿ (ಅಂತರಭಾರತಿ ತಾಂಡಾ) ಶಾಲೆಯನ್ನು ಅಭಿವೃದ್ಧಿಪಡಿಸಿ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಗ್ರಾಮದ ಪ್ರಮುಖರಾದ ಪೂಜಾ ರಾಠೋಡ, ವಿಲಾಸ ಪವಾರ, ಮನ್ಮಥ ಪವಾರ, ಅಶೋಕ ಜಾಧವ, ಯೋಗೇಶ ರಾಠೋಡ, ಬಸವರಾಜ ರಾಠೋಡ, ಧನಾಜಿ ಪವಾರ ಒತ್ತಾಯಿಸಿದ್ದಾರೆ.
Highlights - ಕುಡುಕರ ತಾಣವಾಗಿ ಮಾರ್ಪಟ್ಟ ಶಾಲೆಅಡುಗೆ ಕೋಣೆ ಇಲ್ಲದ ಶಾಲೆಜಿಲ್ಲಾಧಿಕಾರಿ ಜನಸ್ಪಂದನದಲ್ಲಿ ಮನವಿ ಸಲ್ಲಿಸಿದರೂ ಕ್ರಮವಿಲ್ಲ; ಆರೋಪ
Quote - ಶಾಲೆಯ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿದೆ. ಹೊಸ ಕಟ್ಟಡ ಗುತ್ತಿಗೆದಾರರ ನಿರ್ಲಕ್ಷದಿಂದ ಸೋರುತ್ತಿದೆ. ಈ ಕುರಿತು ಜನಸ್ಪಂದನದಲ್ಲಿ ದೂರು ದಾಖಲಿಸಿದರು ಇಲ್ಲಿಯವರೆಗೆ ಸೂಕ್ತ ಕ್ರಮವಹಿಸಿಲ್ಲ ಭರತ ರಾಠೋಡ ಎಸ್ಡಿಎಂಸಿ ಅಧ್ಯಕ್ಷ
Quote - ಶಾಲೆಯಲ್ಲಿ ಅಡುಗೆ ಕೋಣೆ ಇಲ್ಲದೆ ಇರುವುದು ಹಾಗೂ ಕುಡುಕರ ತಾಣವಾಗಿರುವುದು ನನ್ನ ಗಮನಕ್ಕೆ ಬಂದಿದ್ದು ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತೇನೆ ಸಿದ್ದವಿರಯ್ಯ ರುದ್ದನೂರ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.