ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಣ್ಣರನ್ನು ಆಕರ್ಷಿಸುತ್ತಿದೆ ಸಾಯಗಾಂವ ಅಂಗನವಾಡಿ ‘ಡಿ’ ಕೇಂದ್ರ

ಗುರುಪ್ರಸಾದ ಮೆಂಟೇ
Published : 2 ಅಕ್ಟೋಬರ್ 2024, 4:48 IST
Last Updated : 2 ಅಕ್ಟೋಬರ್ 2024, 4:48 IST
ಫಾಲೋ ಮಾಡಿ
Comments

ಹಲಸೂರ: ‌‘ಮೊದ್ಲು ಅಂಗನವಾಡಿ ಕೇಂದ್ರಕ್ಕ ಹೋಗು ಅಂದ್ರ ಮಕ್ಕಳು ಹಟ ಮಾಡ್ತಿದ್ರು. ಈಗ ಅಂಗನವಾಡಿ ಕೇಂದ್ರಕ್ಕ ಹುರುಪಿನಿಂದ ಓಡ್ತಾರ...’

ಸಾಯಗಾಂವ ಗ್ರಾಮದ ಅಂಗನವಾಡಿ ಮಕ್ಕಳ ಪೋಷಕರಲ್ಲೊಬ್ಬರಾದ ರುಕುಮಿನಬಾಯಿ ದತ್ತಾತ್ರಿ ಹರ್ಷದ ನುಡಿಗಳಿವು.

‘ನಮ್ಮೂರಾಗ ಮಕ್ಕಳಿಗೆ ಇಂಗ್ಲಿಷ್ ಕಲಿಸೋರು ಇದ್ದಿಲ್ಲ. ಈಗ ಎ.ಬಿ.ಸಿ.ಡಿ... ಎಲ್ಲಾ ಹೇಳಿಕೊಡ್ತಾರ. ಮಕ್ಕಳು ತಪ್ಪಿಸಲಾರ‌್ದಂಗ ಅಂಗನವಾಡಿ ಕೇಂದ್ರಕ್ಕ ಹೋಗ್ತಾರ’ ಎನ್ನುತ್ತಾರೆ ಅವರು.

ಹೀಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಹಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮದ ಅಂಗನವಾಡಿ ‘ಡಿ’ ಕೇಂದ್ರ. ಅಂಗನವಾಡಿ ಕಾರ್ಯಕರ್ತೆ ಅನಿತಾ ವಿಜಯಕುಮಾರ ಖರಾಬೆ ಅವರ ಶ್ರಮದ ಫಲವಾಗಿ ಈ ಅಂಗನವಾಡಿ ಚಿಣ್ಣರ ನೆಚ್ಚಿನ ಕಲಿಕಾ ತಾಣವಾಗಿ ಗುರುತಿಸಿಕೊಂಡಿದೆ. ಅವರಿಗೆ ಸಹಾಯಕಿ ಪೂಜಾ ಸೋಮಶೇಖರ ಹೆಗಲು ನೀಡುತ್ತಿದ್ದಾರೆ. ಸದ್ಯ ಇಲ್ಲಿ 57 ಚಿಣ್ಣರಿದ್ದಾರೆ.

ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲೂ ಈ ಅಂಗನವಾಡಿ ಮುಂದಿದ್ದು, ಅದಕ್ಕಾಗಿ  ಪ್ರಶಂಸನಾ ಪತ್ರವನ್ನೂ ಪಡೆದಿದೆ.

ಗೋಡೆಗಳ ಮೇಲೆ ಚಿತ್ತಾರ: ಅಂಗನವಾಡಿ ಕೇಂದ್ರದ ಒಳ–ಹೊರ ಗೋಡೆಗಳನ್ನು ಕಲಿಕೆ ವಾತಾವರಣ ಸೃಷ್ಟಿಸಲು ಬಳಸಲಾಗಿದೆ. ಒಳಗೋಡೆಗಳ ಮೇಲೆ ಮಾನವನ ದೇಹದ ಭಾಗಗಳು, ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆ, ರೇಖಾಗಣಿತದ ಮಾದರಿಗಳ ಚಿತ್ರ, ಪ್ರಾಣಿಗಳ ಚಿತ್ರ, ಬಣ್ಣಗಳು, ವಾರಗಳು, ತಿಂಗಳುಗಳ ಹೆಸರನ್ನು ವಿವಿಧ ಬಣ್ಣಗಳಲ್ಲಿ ಬರೆಯಲಾಗಿದೆ. ಕಟ್ಟಡದ ಹೊರಗೋಡೆಗಳ ಮೇಲೆ ಜಿಂಕೆ, ಜಿರಾಫೆ, ಆನೆ ಸೇರಿದಂತೆ ಚಿಣ್ಣರನ್ನು ಆಕರ್ಷಿಸುವ ವಿವಿಧ ಕಾರ್ಟೂನ್‌ಗಳನ್ನು ಮೂಡಿಸಲಾಗಿದೆ.

‘ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಹಲವೆಡೆ ಈ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿದ್ದು ಕಡಿಮೆ. ಆದರೆ, ಗ್ರಾಮದ ಅಂಗನವಾಡಿ ‘ಡಿ’ ಕೇಂದ್ರದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಸುತ್ತಿರುವುದು ಶ್ಲಾಘನೀಯ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣಕುಮಾರ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಚಿಣ್ಣರಿಗೆ ಆಟದ ಜೊತೆಗೆ ಪಾಠ ಹೇಳುತ್ತೇವೆ. ಬೋಧನೆಯಲ್ಲಿ ಆಟಿಕೆ, ಗೊಂಬೆ ಬಳಸುತ್ತೇವೆ. ನಮ್ಮ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿದ್ದೇವೆ. ನಮ್ಮ ಕೆಲಸಕ್ಕೆ  ಅಧಿಕಾರಿಗಳು, ಗ್ರಾಮಸ್ಥರು ಸೇರಿದಂತೆ ಎಲ್ಲರ ಸಹಕಾರವೂ ಇದೆ’ ಎಂದು ಅಂಗನವಾಡಿ ಕಾರ್ಯಕರ್ತೆ ಅನಿತಾ ಖರಾಬೆ ಹೇಳುತ್ತಾರೆ.

‘ಅನಿತಾ ಖರಾಬೆ 29 ವರ್ಷಗಳಿಂದ ಅಂಗನವಾಡಿ ದಾಖಲಾತಿ, ವೇಳಾಪಟ್ಟಿಯಂತೆ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ’ ಎಂದು ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷ್ಮಿ ಹೇಳುತ್ತಾರೆ.

ಅನಿತಾ ಖರಾಬೆ ಸೇವೆ ಮೆಚ್ಚುವಂಥದ್ದು. ಅವರಿಂದ ಅಂಗನವಾಡಿ ಮಕ್ಕಳ ಕಲಿಕೆ ಗುಣಮಟ್ಟ ಹೆಚ್ಚಿದೆ. ಜನರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರಿಸಬೇಕು

-ಶ್ರೀನಿವಾಸ ಬಾಳುವಾಲೆ ಸಿಡಿಪಿಒ ಭಾಲ್ಕಿ

ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಅಂಗನವಾಡಿ ಕೇಂದ್ರದಲ್ಲಿ ನೀಡಲಾಗುತ್ತಿದ್ದು ಇಲಾಖೆಯಿಂದಲೂ ಅಂಗನವಾಡಿ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು

-ಶ್ರೀಧರ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಗ್ರಾಮ ಪಂಚಾಯಿತಿಯಿಂದ ಅಂಗನವಾಡಿಯಲ್ಲಿ ವಿದ್ಯುತ್ ಸಂಪರ್ಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆದಷ್ಟು ಬೇಗ ಕಲ್ಪಿಸಿ ಕೊಡಲಾಗುವುದು

-ಪ್ರವೀಣಕುಮಾರ ಸ್ವಾಮಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT