ಗುಂಡು ಅತಿವಾಳ
ಹುಮನಾಬಾದ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್‌ಟಿಸಿ) ದೇಶದಲ್ಲೇ ಮೊದಲ ಬಾರಿಗೆ ವೈರ್‌ಲೆಸ್ ಸಿಸ್ಟಂ ಎಂಬ ಹೊಸ ತಂತ್ರಜ್ಞಾನದ ಮೂಲಕ ಬಸ್ ಚಾಲಕರ ನೇಮಕಾತಿಗೆ ಮುಂದಾಗಿದೆ.
ಹುಮನಾಬಾದ್ ಪಟ್ಟಣದ ಹೊರವಲಯದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕೇಂದ್ರದಲ್ಲಿ ಸೋಮವಾರದಿಂದ (ಜುಲೈ 3) ಚಾಲಕರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಈ ವಿನೂತನ ತಂತ್ರಜ್ಞಾನದಿಂದ ನೇಮಕಾತಿಯಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಇದು ಸಹಕಾರಿಯಾಗಿದೆ.
ಏನಿದು ವೈರ್‌ಲೆಸ್ ಸಿಸ್ಟಂ:
ಈ ವೈರ್ ಲೆಸ್ ಸಿಸ್ಟಂ ಅಳವಡಿಸಲಾದ ಟೆಸ್ಟ್ ಟ್ರ್ಯಾಕ್‌ನಲ್ಲಿ ‘ಎಸ್’ ಮತ್ತು ‘8’ ಅಂಕಿಯ ಆಕಾರದ ಕಂಬಗಳು ಸೇರಿದಂತೆ ವಿವಿಧ ರೀತಿಯಲ್ಲಿ ಕಂಬಗಳಿಗೆ ಸೆನ್ಸಾರ್ ಅಳವಡಿಸಲಾಗಿದೆ. ಚಾಲಕ ವಾಹನ ಚಾಲನೆ ಸಂದರ್ಭದಲ್ಲಿ ಟ್ರ್ಯಾಕ್‌ನ ಕಂಬಗಳಿಗೆ ವಾಹನ ತಾಕಿಸಿದರೆ ಯಾವ ನಂಬರಿನ ಕಂಬಕ್ಕೆ ಬಸ್ ತಾಕಿದೆ ಎಂಬುದು ಕಂಪ್ಯೂಟರ್‌ಗೆ ಸಂದೇಶ ರವಾನೆಯಾಗುತ್ತದೆ. ಅಲ್ಲದೇ ಅಭ್ಯರ್ಥಿಗಳ ಟೆಸ್ಟ್ ಅಂಕವು ತಂತಾನೆ ದಾಖಲಾಗುತದೆ.
ಈ ಚಾಲನೆಯಲ್ಲಿ 8 ವಿವಿಧ ರೀತಿಯ ಟೆಸ್ಟ್ ಅಳವಡಿಸಲಾಗಿದೆ. ಒಟ್ಟು 50 ಅಂಕಗಳ ಈ ಪರೀಕ್ಷೆಯಲ್ಲಿ 25 ಅಂಕ ಬಂದರೆ ತೇರ್ಗಡೆಯಾಗುತ್ತಾರೆ. ಹೆಚ್ಚು ಅಂಕ ಪಡೆದವರನ್ನು ನೇಮಕಾತಿಗೆ ಪರಿಗಣಿಸಲಾಗುತ್ತದೆ. ಒಟ್ಟು 1,619 ಹುದ್ದೆಗಳಿಗೆ ಸೋಮವಾರದಿಂದ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.