ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನಿಸಿದ ಸಮಾಜವೇ ಗೌರವಿಸಿತು

ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಭಾವುಕ ಹೇಳಿಕೆ
Last Updated 7 ಮಾರ್ಚ್ 2021, 14:58 IST
ಅಕ್ಷರ ಗಾತ್ರ

ಬೀದರ್: ‘ಜನಪದ ಕಲೆಯೇ ನಾನು ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡಿದೆ. ಹೆಜ್ಜೆ ಹೆಜ್ಜೆಗೂ ಅವಮಾನ ಮಾಡಿದ ಸಮಾಜವೇ ಇಂದು ನನ್ನನ್ನು ಗೌರವಿಸಿದೆ’ ಎಂದು ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಭಾವುಕರಾಗಿ ಹೇಳಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಜನಪದ ಕಲಾವಿದರ ಬಳಗ, ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.

‘ನಾನು ಹತ್ತನೆಯ ತರಗತಿಯಲ್ಲಿದ್ದಾಗ ನನ್ನ ದೇಹದಲ್ಲಾದ ಬದಲಾವಣೆಯಿಂದಾಗಿ ಮನೆ, ಶಾಲೆ, ಸಮಾಜ ಎಲ್ಲೆಡೆ ಅಪಮಾನ ಅನುಭವಿಸಬೇಕಾಯಿತು. ಅವಮಾನ ಸಹಿಸಿಕೊಂಡು ಬದುಕಿದೆ. ಬೆಟ್ಟದಷ್ಟು ಸಂಕಷ್ಟಗಳು ತಲೆಯ ಮೇಲೆ ಹೊತ್ತುಕೊಂಡು ಓಡಾಡಿದೆ. ಜನಪದ ಕಲೆ ನನಗೆ ಸಮಾಜದಲ್ಲಿ ಗೌರವ ತಂದುಕೊಟ್ಟಿತು’ ಎಂದು ಭಾವುಕರಾದರು.

‘ಪ್ರತಿಯೊಬ್ಬರಲ್ಲಿಯೂ ಒಂದೊಂದು ಕಲೆ ಇರುತ್ತದೆ. ಆ ಕಲೆಯನ್ನು ಬೆಳೆಸುವ ಹಾಗೂ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಕಲಾವಿದರು ಹಣದ ಹಿಂದೆ ಬಿಳದೆ ಕಲೆಯನ್ನು ಕರಗತ ಮಾಡಿಕೊಂಡರೆ, ಹಣ ತನ್ನಿಂದ ತಾನೇ ಬರುತ್ತದೆ’ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.

‘ರಾಜ್ಯ ಸರ್ಕಾರ ಮೂರು ವರ್ಷಗಳಿಂದ ರಂಗ ಶಿಕ್ಷಕರ ನೇಮಕಾತಿ ತಡೆಹಿಡಿದೆ. ರಂಗ ಶಿಕ್ಷಕರಿರುವ ಶಾಲೆಗಳು ಪ್ರಗತಿ ಸಾಧಿಸಿವೆ. ಹೀಗಾಗಿ ರಾಜ್ಯ ಸರ್ಕಾರ ರಂಗ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿಟಕಪೂರ್ವ ನಿರ್ದೇಶಕ ಮಹೇಶ ಪಾಟೀಲ ಮಾತನಾಡಿ, ‘1980ರಲ್ಲಿ ಜಿಲ್ಲೆಯ 50 ಕಲಾವಿದರ ತಂಡ ಸೈಕಲ್ ಯಾತ್ರೆ ಕೈಗೊಂಡು ರಾಜ್ಯದಾದ್ಯಂತ ಬೀದಿ ನಾಟಕ ಪ್ರದರ್ಶನ ಮಾಡಿದೆ. ಮತ್ತೆ ಈ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಜಾಗೃತಿ ಸಮಿತಿಯ ಯಾದಗಿರಿ ಜಿಲ್ಲೆಯ ಸದಸ್ಯ ಪ್ರಕಾಶ ಅಂಗಡಿ ಮಾತನಾಡಿ, ‘ಜಿಲ್ಲಾ ಜನಪದ ಕಲಾವಿದರ ಬಳಗವು ಅಳಿವಿನ ಅಂಚಿನಲ್ಲಿರುವ ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದರು.

ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಡಾ. ರಜನೀಶ ವಾಲಿ ಹಾಗೂ ಜನಪದ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಜನಪದ ಲೋಕ ಪ್ರಶಸ್ತಿಗೆ ಆಯ್ಕೆಯಾದ ಜನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರನ್ನು ಸನ್ಮಾನಿಸಲಾಯಿತು.

ಊಟದ ಮನೆಯ ಮಾಲೀಕರಾದ ನಾಗವೇಣಿ ಶಂಕರ ಕೊಳಾರ ಅವರು ಬಿ. ಮಂಜಮ್ಮ ಜೋಗತಿ ಅವರಿಗೆ ₹5 ಸಾವಿರ ನಗದು ಬಹುಮಾನ ನೀಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ಹಾಗೂ ಲಾಡಗೇರಿಯ ಹಿರೇಮಠ ಸಂಸ್ಥಾನದ ಗಂಗಾಧರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ, ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸುಭಾಷ ಗಜರೆ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಜೆ. ಪಾರ್ವತಿ ಸೋನಾರೆ, ಬಿದರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ, ಸಾಹಿತಿ ವಿದ್ಯಾವತಿ ಬಲ್ಲೂರ, ಸುನೀಲ ಭಾವಿಕಟ್ಟಿ, ಆದೀಶ್ ವಾಲಿ ಇದ್ದರು.

ಜಿಲ್ಲಾ ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಎಂ. ಭಕ್ತಕುಂಬಾರ ನಿರೂಪಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಣೇಹಳ್ಳಿಯ ಶಿವ ಸಂಚಾರ ತಂಡದ ಕಲಾವಿದರು ‘ಶರಣ ಡೋಹರ ಕಕ್ಕಯ್ಯ’ ಹಾಗೂ ಮುತ್ತ್ಯಾನ ಬಬಲಾದ ಶೀ ಚನ್ನವೀರೇಶ್ವರ ನಾಟ್ಯ ಸಂಘದವರು ‘ರತ್ನಮಾಂಗಲ್ಯ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT