ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಹೋರಾಟ: ದತ್ತಾಜಿ ಮಾಣಿಕರಾವ ಪಾಟೀಲ, ಹೋರಾಟಗಾರ

Last Updated 16 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಕಮಲನಗರ: ಎಲ್ಲರಿಗೂ ಗೊತ್ತಿರುವಂತೆ 1947ರ ಆಗಸ್ಟ್ 15 ದೇಶ ಸ್ವಾತಂತ್ರ್ಯಗೊಂಡ ಸುದಿನ. ಆದರೆ, ಹೈದರಾಬಾದ್ ನಿಜಾಮನ ರಾಜ್ಯದಲ್ಲಿನ ಪ್ರಜೆಗಳಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದ್ದು 1948ರ ಸೆ.17ರಂದು. ಇದರ ಹಿಂದೆ ಹಲವು ಹೋರಾಟಗಾರರ ತ್ಯಾಗ, ಬಲಿದಾನ ಇದೆ.

ಅಂದಿನ ದಿನಗಳಲ್ಲಿ ಹೈದರಾಬಾದ್–ಕರ್ನಾಟಕ ವಿಮೋಚನಾ ಹೋರಾಟ ನಡೆಯಿತಾದರೂ ಅದು ಹಿಂದೂ ಮುಸ್ಲಿಂ ಸಮುದಾಯಗಳ ನಡುವಿನ ಗಲಭೆಯೆಂದೇ ಬಿಂಬಿತವಾಯಿತು ಎಂಬುದೇ ಬೇಸರದ ಸಂಗತಿ. ಚಳವಳಿಯು ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ನಡೆಯಿತೇ ಹೊರತು ಹಿಂದೂ–ಮುಸ್ಲಿಂ ದ್ವೇಷದಿಂದಲ್ಲ.

ಹೈದರಾಬಾದಿನ ಆಳರಸು ಮುಸ್ಲಿಮರಾಗಿದ್ದು, ಅಂದಿನ ದಿನಗಳಲ್ಲಿ ಬಹುಸಂಖ್ಯಾತ ಜನ ಹಿಂದೂಗಳಾಗಿದ್ದರು. ಹೈ-ಕ ವಿಮೋಚನಾ ಚಳವಳಿ ಇಂದಿಗೂ ಸಾರ್ವಜನಿಕರ ಮನದಲ್ಲಿ ಎರಡು ಕೋಮುಗಳ ನಡುವಿನ ಸಾಂಪ್ರಾದಾಯಿಕ ದಂಗೆ ಎಂದೆನಿಸುತ್ತದೆ. ಆದರೆ, ದುರದೃಷ್ಟಾವಶಾತ್‌ ಕೊನೆ ಗಳಿಗೆಯಲ್ಲಿ ಅದು ಕೋಮುಗಲಭೆಯಲ್ಲೇ ಕೊನೆಗೊಂಡಿತು.

ದೇಶಕ್ಕೆಸ್ವಾತಂತ್ರ್ಯ ದೊರೆತ ನಂತರ ಹೈದರಾಬಾದ್‌ ಸಂಸ್ಥಾನವೂ ಸ್ವತಂತ್ರ ಭಾರತದಲ್ಲಿ ಸೇರಬೇಕು ಎಂಬುದು ಈ ಸಂಸ್ಥಾನದ ಜನರ ಬೇಡಿಕೆಯಾಗಿತ್ತು.ಆದರೆ, ನಿಜಾಮ ಈ ಬೇಡಿಕೆಗೆ ಸ್ಪಂದಿಸಲಿಲ್ಲ. ಹೀಗಾಗಿ ಹೋರಾಟಗಾರರು, ಜನ ಮತ್ತು ನಿಜಾಮನ ನಡುವೆ ಸಂಘರ್ಷ ಭುಗಿಲೆದ್ದಿತ್ತು. ಸದ್ಯ ಉದಗೀರದಿಂದ 5 ಕಿ.ಮೀ. ದೂರದಲ್ಲಿರುವ ಕೌಳಕೇರ ಗ್ರಾಮ ನಿಜಾಮನ ಕಾಲದಲ್ಲಿ ಹೈದರಾಬಾದ್‌ ಪ್ರದೇಶದಲ್ಲಿತ್ತು.

ರಜಾಕಾರರ ಕಾಲದಲ್ಲಿ ಅನ್ನ ನೀರಿಗಾಗಿ ಪರಿತಪಿಸುವ ಸ್ಥಿತಿಯಿತ್ತು. ಮಾಡಲು ಕೆಲಸ ಇರಲಿಲ್ಲ. ಹೊಟ್ಟೆಗೆ ಅನ್ನ ಇಲ್ಲ ಎನ್ನುವ ಸಂಕಟದ ಸ್ಥಿತಿ. ಆಗ ಅಪ್ಪಾರಾವ ಟೋಳಿ ಅವರು ಜಾತಿ ಧರ್ಮ ಭೇದವಿಲ್ಲದೇ ಎಲ್ಲರಿಗೂ ಅನ್ನ, ಆಶ್ರಯ ನೀಡಿದರು. ನನ್ನ ಬಲಗಾಲಿಗೆ ಬಂದೂಕಿನ ಗೋಲಿ ತಗುಲಿದಾಗ ಜೀವ ರಕ್ಷಣೆಗೂ 8 ದಿನ ಚ್ಯಾಂಡೇಶ್ವರ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಎದುರಾಳಿಗಳನ್ನು ಹೊಡೆದೋಡಿಸಿದರು. ಉದಗೀರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 1 ತಿಂಗಳು ಉಪಚರಿಸಿದರು.

ನಿಜಾಮನ ಆಳು ಬಂದಿರುವ ಸುದ್ಧಿ ತಿಳಿಯುತ್ತಲೇ, ಜನ ಮಾಡುವ ಕೆಲಸ ಅರ್ಧದಲ್ಲೇ ಬಿಟ್ಟು ಮನೆ ಸೇರಿ ಬೀಗ ಹಾಕಿಕೊಳ್ಳುತ್ತಿದ್ದರು. ಡೋಣಗಾಂವ್, ಖತಗಾಂವ್, ಕೊಟಗ್ಯಾಳ, ಡಿಗ್ಗಿ, ಚ್ಯಾಂಡೇಶ್ವರ, ಬಾಲೂರು (ಕೆ), ಹೊರಂಡಿ ಮತ್ತಿತರ ಗ್ರಾಮಗಳಲ್ಲಿ ಅಪ್ಪಾರಾವ ಬಂದ ಸುದ್ದಿ ತಿಳಿಯುತ್ತಲೇ ಮನೆ ಬಾಗಿಲು ತೆರೆಯುತ್ತಿದ್ದರು.

ದೇಶ ವಿಭಜನೆ ಕಹಿ ಅನುಭವಗಳನ್ನು ಅನುಭವಿಸಿದ ಕೇಂದ್ರ ಸರ್ಕಾರ ಪರಿಸ್ಥಿತಿ ಎದುರಿಸಲಿಕ್ಕೆ ಸರ್ದಾರ ವಲ್ಲಭ ಭಾಯ್ ಪಟೇಲ್‌ರ ಮಾರ್ಗದರ್ಶನದಲ್ಲಿ ಮಿಲಿಟರಿ (ಪೊಲೀಸ್) ಕಾರ್ಯಚರಣೆ ಇತಿಹಾಸದಲ್ಲೇ ‘ಪೊಲೀಸ್ ಆ್ಯಕ್ಷನ್’ ಎಂದೇ ಇಂದಿಗೂ ಖ್ಯಾತಿ ಪಡೆದಿದೆ. ಸೆ.13ಕ್ಕೆ ಶುರುವಾದ ಈ ಕಾರ್ಯಚರಣೆ ಸೆ.17ರವರೆಗೆ ನಡೆಯಿತು.

‘ಇದೇ ದಿನ ನಿಜಾಮನು ಭಾರತ ಸರ್ಕಾರಕ್ಕೆ ಶರಣನಾದ. ಬಹುದಿನದ ಜನರ ಆಶೋತ್ತರಕ್ಕೆ ಹುಕುಂ ಶಾಹಿ ಆಡಳಿತ ಕೊನೆಗೊಂಡು ಬಿ.ರಾಮಕೃಷ್ಣರಾವ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಜವಾಬ್ದಾರಿಯುತ ಸರ್ಕಾರ ಸ್ಥಾಪನೆಗೊಂಡ ಸುದಿನ. ಹೈ-ಕ ವಿಮೋಚನಾ ಚಳವಳಿ ಕೋಮು ಗಲಭೆ ಅಲ್ಲ. ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಮಾಡಿದ ಹೋರಾಟ.

(ನಿರೂಪಣೆ: ಮನೋಜಕುಮಾರ ಹಿರೇಮಠ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT