ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಅಭಿವೃದ್ಧಿ ಮೂಲಕ ಜನರ ಋಣ ತೀರಿಸುವೆ: ಭಗವಂತ ಖೂಬಾ

Last Updated 24 ಮೇ 2019, 19:56 IST
ಅಕ್ಷರ ಗಾತ್ರ

ಬೀದರ್‌: ಬೀದರ್ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಅತಿಹೆಚ್ಚು 5.85 ಲಕ್ಷ ಮತ ಪಡೆದು ದಾಖಲೆ ನಿರ್ಮಿಸಿ ದ್ವಿತೀಯ ಬಾರಿಗೆ ಸಂಸತ್ತಿಗೆ ಪ್ರವೇಶ ಮಾಡಿರುವ ಸಂಸದ ಭಗವಂತ ಖೂಬಾ ಫಲಿತಾಂಶದ ಎರಡನೆಯ ದಿನವೂ ಸಂಭ್ರಮದಲ್ಲೇ ಇದ್ದರು. ಬೆಳಿಗ್ಗೆಯಿಂದ ಅವರ ನಿವಾಸದ ಎದುರು ಜನರು ಅಭಿನಂದಿಸಲು ಹೂಗುಚ್ಛಗಳನ್ನು ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದರು. ಮನೆಯೊಳಗೆ ಜಾಗ ಸಾಲದ್ದಕ್ಕೆ ಅವರು ಮನೆಯಂಗಳಕ್ಕೆ ಬಂದು ಜನರಿಗೆ ಕೃತಜ್ಞತೆ ಹೇಳುತ್ತಿದ್ದರು.

ಗೃಹ ಕಚೇರಿಯಲ್ಲೂ ಜನ, ಮನೆಯಂಗಳದಲ್ಲೂ ಜನ. ಈ ನಡುವೆ ನವದೆಹಲಿಗೆ ಹೋಗುವ ಧಾವಂತದಲ್ಲೇ ಒಂದಿಷ್ಟು ಬಿಡುವು ಮಾಡಿಕೊಂಡು ‘ಪ್ರಜಾವಾಣಿ’ಯೊಂದಿಗೆ ಮನಬಿಚ್ಚಿ ಮಾತನಾಡಿದರು.

* ಪ್ರಭಾವಿ ಪ್ರತಿಸ್ಪರ್ಧಿಯ ಎದುರು ದಾಖಲೆಯ ಮತ ಪಡೆಯಲು ಹೇಗೆ ಸಾಧ್ಯವಾಯಿತು?

ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಮಟ್ಟದಲ್ಲಿ ಮಾಡಿದ ಸಾಧನೆ ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಮರ್ಪಕ ಅನುಷ್ಠಾನ ಮಾಡಿದ್ದು ನನ್ನ ನೆರವಿಗೆ ಬಂದಿತು. ಇದರಿಂದಾಗಿ ದಾಖಲೆ ಮಾಡುವಷ್ಟು ಮತಗಳು ಬಂದವು. ನನ್ನ ಹಾಗೂ ಪ್ರತಿಸ್ಪರ್ಧಿಯ ನಡುವಿನ ಗೆಲುವಿನ ಅಂತರವೂ ಹೆಚ್ಚಾಯಿತು.

* ಇಬ್ಬರು ಪ್ರಭಾವಿಗಳಿಗೆ ಸೋಲಿನ ರುಚಿ ತೋರಿಸಿರುವ ನೀವು ಸಚಿವ ಸ್ಥಾನದ ಆಕಾಂಕ್ಷಿಯೇ?

ಬೀದರ್‌ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಎರಡನೆಯ ಬಾರಿಗೆ ಆಯ್ಕೆಯಾಗಿದ್ದರೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮೋದಿ ಅವರು ಯಾವುದೇ ಒಂದು ಪ್ರಾಂತ, ಪ್ರದೇಶ ಅಥವಾ ಜಾತಿಯನ್ನು ಮಾನದಂಡವಾಗಿ ಇಟ್ಟುಕೊಂಡು ಸಚಿವ ಸ್ಥಾನ ಕೊಡುವ ಪರಿಪಾಠ ಇಟ್ಟುಕೊಂಡಿಲ್ಲ. ಹಿಂದಿನ ಅವಧಿಯಲ್ಲಿ ನನ್ನ ಕಾರ್ಯವೈಖರಿ ಬಗೆಗೆ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಯೋಗ್ಯ ಅನಿಸಿದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಮೋದಿ ಅವರು ವಹಿಸಿಕೊಡುವ ಯಾವುದೇ ಜಬಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಮುಂದಿನ ಯೋಜನೆಗಳು ಏನು?

ಎರಡನೆಯ ಅವಧಿಗೆ ಮತದಾರರು ಜನ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಫಲಾನುಭವಿಗಳ ಮನೆ ಬಾಗಲಿಗೆ ತಲುಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಬಡವರು, ಮಹಿಳೆಯರು, ರೈತರು ಹಾಗೂ ಕೂಲಿಕಾರ್ಮಿಕರಿಗೆ ಯೋಜನೆಗಳ ಲಾಭ ದೊರಕಿಸಿಕೊಡಲು ಒತ್ತು ಕೊಡುವೆ.

* ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಹೇಗೆ ಒತ್ತಡ ಹಾಕುತ್ತೀರಿ?

ಕೈಗಾರಿಕೆಗಳನ್ನು ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗುವುದಿಲ್ಲ. ಕೈಗಾರಿಕೆ ಸ್ಥಾಪನೆಯು ಉದ್ಯೋಗ ಸೃಷ್ಟಿಯ ಒಂದು ಸಣ್ಣ ಭಾಗ ಮಾತ್ರ. ಹೀಗಾಗಿ ಸರ್ಕಾರದ ಯೋಜನೆಗಳ ಮೂಲಕವೇ ಸ್ವಯಂ ಉದ್ಯೋಗ ಆರಂಭಿಸಲು ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು. ನಿರುದ್ಯೋಗಿಗಳು ಸ್ವಯಂ ಉದ್ಯೋಗ ಆರಂಭಿಸಲು ಮುಂದೆ ಬಂದರೆ ಎಲ್ಲ ರೀತಿಯ ನೆರವು ನೀಡಲು ಪ್ರಯತ್ನಿಸಲಾಗುವುದು.

* ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಾ?

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೇ ವರ್ಷ ವಿಮಾನಯಾನ ಹಾಗೂ ಎಫ್‌.ಎಂ. ರೇಡಿಯೊ ಆರಂಭವಾಗಲಿದೆ. ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ.

* ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ನಿಮ್ಮ ಕೊಡುಗೆ ಏನು ಇರಲಿದೆ?

ಐತಿಹಾಸಿಕ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಒತ್ತು ಕೊಡಲು ಸಂಕಲ್ಪ ಮಾಡಿದ್ದೇನೆ. ರಾಜ್ಯ ಸರ್ಕಾರ ಪ್ರವಾಸೋದ್ಯಮ ಉತ್ತೇಜನಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದರೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯಲು ಸಾಧ್ಯವಾಗುತ್ತದೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಿಯಾಂಕ ಖರ್ಗೆ ಪ್ರವಾಸೋದ್ಯಮ ಸಚಿವರಾಗಿದ್ದರೂ ಸಹ ದಕ್ಷಿಣ ಕರ್ನಾಟಕಕ್ಕೆ ಯೋಜನೆ ಒಯ್ದರು. ಈಗಲೂ ಅವಕಾಶ ಇದೆ. ಜಿಲ್ಲೆಯ ಶಾಸಕರು ಬಯಸಿದರೆ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯ ಇದೆ. ಅದಕ್ಕೆ ಪೂರಕವಾಗಿ ಕೇಂದ್ರದ ಯೋಜನೆಗಳನ್ನು ತರಲು ಪ್ರಯತ್ನ ಮಾಡುವೆ.

* ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮುನಿಸಿಕೊಂಡಿದ್ದು ಏಕೆ?

ಎಲ್ಲ ಪಕ್ಷಗಳಲ್ಲೂ ಸಣ್ಣಪುಟ್ಟ ಮುನಿಸು ಇರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಶಿಸ್ತುಬದ್ಧ ಹಾಗೂ ಸಂಘಟನಾತ್ಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವೆ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿಯ ಮೂಲಕ ಕ್ಷೇತ್ರದ ಜನರ ಋಣ ತೀರಿಸುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT