ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕೊಳವೆಬಾವಿ ಗುರುತಿಸಿ, ಜನತೆಗೆ ನೀರು ಒದಗಿಸಿ: ಜಿಲ್ಲಾಧಿಕಾರಿ ನಿರ್ದೇಶನ

200 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣ ಸಾಧ್ಯತೆ
Last Updated 28 ಏಪ್ರಿಲ್ 2019, 14:07 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯ 200 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಆಯಾ ತಾಲ್ಲೂಕಿನ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇಒಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್‌.ಮಹಾದೇವ ನಿರ್ದೇಶನ ನೀಡಿದರು.

ಭಾನುವಾರ ನಡೆದ ಬರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ನೀರು ಬರುತ್ತಿಲ್ಲ ಎಂದು ಗೊತ್ತಿದ್ದೂ ಮತ್ತೆ ಹೊಸ ಕೊಳವೆಬಾವಿ ಕೊರೆಯಿಸುವುದರಲ್ಲಿ ಅರ್ಥವಿಲ್ಲ. ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಮಾತನಾಡಿ, ‘ಅಂತರ್ಜಲಮಟ್ಟ ಕುಸಿದಿರುವ ಕಾರಣ ಕೊಳವೆಬಾವಿ ಕೊರೆಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಕಡ್ಡಾಯ ಖಾಸಗಿ ಕೊಳವೆಬಾವಿಗಳಿಂದ ಜನತೆಗೆ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು. ಜನರಿಗೆ ನಿಯಮಿತವಾಗಿ ನೀರು ಕೊಡಬೇಕು. ಇದನ್ನು ಮಾನವೀಯ ಕೆಲಸ ಎಂದು ಭಾವಿಸಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಜಿಲ್ಲೆಯ 69 ಗ್ರಾಮಗಳಲ್ಲಿ 96 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಬಸವಕಲ್ಯಾಣ, ಹುಮನಾಬಾದ್ ಮತ್ತು ಭಾಲ್ಕಿ ಪಟ್ಟಣಗಳಲ್ಲಿ ನೀರಿನ ತೊಂದರೆ ಇಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಭಾಲ್ಕಿಯ 40 ಗ್ರಾಮಗಳಿಗೆ 64 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಔರಾದ್ ಪಟ್ಟಣದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮತ್ತೆ ₹ 32 ಲಕ್ಷ ವೆಚ್ಚದ ಕ್ರಿಯಾಯೋಜನೆ ಸಲ್ಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿನ ಬರಪರಿಸ್ಥಿತಿ, ತಾಲ್ಲೂಕು ಆಡಳಿತ ವಹಿಸುತ್ತಿರುವ ಕ್ರಮಗಳು, ಮೇವಿನ ಲಭ್ಯತೆ, ಅನುದಾನ ಬಿಡುಗಡೆ ಮತ್ತು ಅದರ ಸಮರ್ಪಕ ಬಳಕೆ, ಮುನ್ನೆಚ್ಚರಿಕೆ ಕ್ರಮಗಳ ಕಾರ್ಯಯೋಜನೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಟ್ಯಾಂಕರ್ ನೀರು

ಔರಾದ್ ತಾಲ್ಲೂಕಿನ 22 ಗ್ರಾಮಗಳಲ್ಲಿ 22 ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಬೀದರ್‌ನ 10 ಹಳ್ಳಿಗಳಲ್ಲಿ, ಭಾಲ್ಕಿಯ 40 ಹಳ್ಳಿಗಳಲ್ಲಿ, ಬಸವಕಲ್ಯಾಣದ 15 ಹಳ್ಳಿಗಳಲ್ಲಿ, ಹುಮನಾಬಾದ್‌ ತಾಲ್ಲೂಕಿನ 3 ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಔರಾದ್‌ ತಾಲ್ಲೂಕಿನ 68, ಹುಮನಾಬಾದ್ ತಾಲ್ಲೂಕಿನ 20, ಭಾಲ್ಕಿ ತಾಲ್ಲೂಕಿನ 24, ಬಸವಕಲ್ಯಾಣ ತಾಲ್ಲೂಕಿನ 41 ಹಾಗೂ ಬೀದರ್‌ ತಾಲ್ಲೂಕಿನ 47 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲೆಯ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT