ಮಂಗಳವಾರ, ಮೇ 18, 2021
30 °C
ಉಪ ಚುನಾವಣೆ ಪ್ರಚಾರದಲ್ಲಿ ಸಚಿವ ಆರ್.ಅಶೋಕ ಹೇಳಿಕೆ

ಕಾಂಗ್ರೆಸ್ ಗೆದ್ದರೆ ಯಾವ ಕೆಲಸನೂ ಆಗಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಕಾಂಗ್ರೆಸ್ ಗೆದ್ದರೆ ರಸ್ತೆಗೆ ಟಾರ್ ಹಾಕೋಕೆ ಆಗಲ್ಲ. ವಿದ್ಯುತ್, ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವ ಕಾರಣ ಈ ಪಕ್ಷದ ಅಭ್ಯರ್ಥಿ ಗೆದ್ದರೆ ಮಾತ್ರ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಸಚಿವ ಆರ್.ಅಶೋಕ ಹೇಳಿದರು.

ನಗರದ ವರ್ಷಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸದ್ಯ ಐಸಿಯುನಲ್ಲಿದೆ. ಅದರಿಂದ ಏನೂ ಉಪಯೋಗ ಇಲ್ಲ. ಈ ಕ್ಷೇತ್ರದ ಅಭ್ಯರ್ಥಿ ಶರಣು ಹೊರಗಿನವರು ಎನ್ನುತ್ತಾರೆ. ಸಿದ್ದರಾಮಯ್ಯ ಏನು ಬದಾಮಿಯಲ್ಲಿ ಹುಟ್ಟಿದವರೇ. ಕಾಂಗ್ರೆಸ್ ಸರ್ಕಾರ 60 ವರ್ಷದಿಂದ ಅಧಿಕಾರದಲ್ಲಿ ಇದ್ದರೂ ಶರಣರ ನಾಡಲ್ಲಿ ಯಾವುದೇ ಕೆಲಸ ಆಗಿಲ್ಲ. ಯಡಿಯೂರಪ್ಪ ಅವರು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹600 ಕೋಟಿ ಒದಗಿಸಿದರು. ಮರಾಠಾ ಅಭಿವೃದ್ಧಿ ನಿಗಮ ಒಳಗೊಂಡು ಅನೇಕ ನಿಗಮಗಳನ್ನು ಸ್ಥಾಪಿಸಿದರು’ ಎಂದು ತಿಳಿಸಿದರು.

ರಾಜ್ಯದ ಉಸ್ತುವಾರಿ ಅರುಣಸಿಂಗ್ ಮಾತನಾಡಿ, ‘ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲಲಿದೆ. ಶಿರಾ, ರಾಜರಾಜೇಶ್ವರಿ ನಗರದಲ್ಲಿಯೂ ನಾವೇ ಗೆದ್ದೇವು. ಈ ಭಾಗದ ನಾಯಕರಾದ ಪ್ರಕಾಶ ಖಂಡ್ರೆ ಹಾಗೂ ಎಂ.ಜಿ.ಮುಳೆ ಪಕ್ಷಕ್ಕೆ ಸೇರ್ಪಡೆ ಆಗಿದ್ದರಿಂದ ಆನೆಬಲ ಬಂದಿದೆ’ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆಯಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮಧ್ಯೆ ಹೊಂದಾಣಿಕೆ ಇಲ್ಲ’ ಎಂದು ಟೀಕಿಸಿದರು.

‘ಈ ಕ್ಷೇತ್ರದ ಮತದಾರರು ಬಿಜೆಪಿಗೆ ಒಲವು ತೋರುತ್ತಿದ್ದು ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ ಹಾಗೂ ಉಮಾಕಾಂತ ಸಹೋದರರು 60 ಗ್ರಾಮಗಳ ಸಹಕಾರ ಸಂಘಗಳ ಪ್ರತಿನಿಧಿಗಳ ಬೆಂಬಲ ಕೊಡಿಸಿದ್ದಾರೆ’ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಅಭ್ಯರ್ಥಿ ಶರಣು ಸಲಗರ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದರು.

ಸಂಸದ ಭಗವಂತ ಖೂಬಾ, ಮುರುಗೇಶ ನಿರಾಣಿ, ಆನಂದಸಿಂಗ್, ಶಾಸಕ ಬಸವರಾಜ ಮತ್ತಿಮೂಡ, ಎಂ.ಜಿ. ಮುಳೆ, ಪ್ರಕಾಶ ಖಂಡ್ರೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಇದ್ದರು.

ಭಾಲ್ಕಿಯ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅನೇಕ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.