ಪ್ರವಾಸಿಗರ ವಸೂಲಿ ಕೇಂದ್ರವಾದ ಬರೀದ್‌ಶಾಹಿ ಉದ್ಯಾನ

7
ಎಎಸ್‌ಐ ಮನವಿ ಲೆಕ್ಕಿಸದ ಬೀದರ್ ಜಿಲ್ಲಾಡಳಿತ

ಪ್ರವಾಸಿಗರ ವಸೂಲಿ ಕೇಂದ್ರವಾದ ಬರೀದ್‌ಶಾಹಿ ಉದ್ಯಾನ

Published:
Updated:
Deccan Herald

ಬೀದರ್: ಭಾರತೀಯ ಸರ್ವೇಕ್ಷಣಾ ಇಲಾಖೆಗೆ ಸೇರಿದ ನಗರದ ಬರೀದ್‌ಶಾಹಿ ಸ್ಮಾರಕದ ಆವರಣದಲ್ಲಿ ನಿರ್ಮಿಸಿದ ಉದ್ಯಾನ ಮತ್ತೆ ವಿವಾದದ ಸ್ವರೂಪ ಪಡೆಯುತ್ತಿದೆ. ಪ್ರವಾಸಿಗರಿಗೆ ಉಚಿತ ಪ್ರವೇಶ ಒದಗಿಸುವಂತೆ ಎಎಸ್‌ಐ ನಿರ್ದೇಶನ ನೀಡುತ್ತಿದ್ದರೂ ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಜಿಲ್ಲಾ ಆಡಳಿತ ಹಠಕ್ಕೆ ಬಿದ್ದಂತೆ ಪ್ರವಾಸಿಗರಿಂದ ಟಿಕೆಟ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದೆ.

ಪ್ರವಾಸಿಗರಿಗೆ ಉದ್ಯಾನ ವೀಕ್ಷಣೆಗೆ ಸಾಯಂಕಾಲ 4 ರಿಂದ ರಾತ್ರಿ 8ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬೀದರ್‌ಗೆ ಬರುವ ಜನ ಬಿಡುವು ಮಾಡಿಕೊಂಡು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಉದ್ಯಾನ ವೀಕ್ಷಣೆಗೆ ಬಂದರೆ ಸಿಬ್ಬಂದಿ ಪ್ರವೇಶ ನೀಡುತ್ತಿಲ್ಲ.

ಪ್ರವಾಸಿಗರು ಎಷ್ಟೇ ಮನವಿ ಮಾಡಿದರೂ ಕಿವಿಗೊಡುತ್ತಿಲ್ಲ. ಸಿಬ್ಬಂದಿ ಸಂಯಮದಿಂದಲೂ ನಡೆದುಕೊಳ್ಳುತ್ತಿಲ್ಲ. ‘ಹೊರಗೆ ಅಳವಡಿಸಿರುವ ಫಲಕ ನೋಡಬೇಕು, ಸಂಜೆ ಬರಬೇಕು ಅಷ್ಟೇ’ ಎಂದು ಏರಿದ ಧ್ವನಿಯಲ್ಲೇ ಹೇಳುತ್ತಿದ್ದಾರೆ. ಹೀಗಾಗಿ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಬೇಸರದಿಂದಲೇ ಇಲ್ಲಿಂದ ಹೊರಡುತ್ತಿದ್ದಾರೆ ಎಂದು ಪ್ರವಾಸಿಗರು ದೂರುತ್ತಾರೆ.

25 ವರ್ಷಗಳ ಹಿಂದೆ ಜಿಲ್ಲಾ ಆಡಳಿತ ಉದ್ಯಾನ ಅಭಿವೃದ್ಧಿ ಪಡಿಸಿ ನಿರ್ವಹಣೆಗೆ ತೋಟಗಾರಿಕೆ ಇಲಾಖೆಗೆ ಒಪ್ಪಿಸಿದ ನಂತರ ಇಲ್ಲಿ ಉದ್ಯಾನ ಅರಳಿದೆ. ಸರ್ಕಾರದ ಹಣ ಖರ್ಚು ಮಾಡಿದರೂ ನಿರ್ವಹಣೆಯ ಹೆಸರಲ್ಲಿ ಖಾಸಗಿಯವರ ಕೈಸೇರಿದ ನಂತರ ಗೊಂದಲಗಳು ಹೆಚ್ಚಾಗಿವೆ.

ಯೋಗ, ವ್ಯಾಯಾಮ ಮಾಡುವವರು ಎರಡು ವರ್ಷಗಳ ಹಿಂದೆ ತೀವ್ರ ಪ್ರತಿಭಟನೆ ನಡೆಸಿದ ನಂತರ ಅವರಿಗಷ್ಟೇ ಬೆಳಗಿನ ಜಾವ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬೆಳಿಗ್ಗೆ 8 ಗಂಟೆಗೆ ಬಾಗಿಲು ಮುಚ್ಚಿದರೆ ಉದ್ಯಾನ ತೆರೆಯುವುದು ಸಂಜೆ 4 ಗಂಟೆಗೆ.

1989ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದೀಪ ದವೆ ಅವರ ಅವಧಿಯಲ್ಲಿ ಜಿಲ್ಲಾ ಆಡಳಿತ ವತಿಯಿಂದ ಬರೀದ್‌ಶಾಹಿ ಸ್ಮಾರಕಗಳ ಸುತ್ತ ಆವರಣ ಗೋಡೆ ಕಟ್ಟಿ ಅಲ್ಲಿ ಉದ್ಯಾನ ನಿರ್ಮಿಸಲಾಗಿದೆ. ನಿರ್ವಹಣೆಯ ಹೊಣೆಯನ್ನು ನೆಪಕ್ಕೆ ತೋಟಗಾರಿಕೆ ಇಲಾಖೆಗೆ ಕೊಡಲಾಗಿದೆ. ಎಎಸ್‌ಐ ಅಧಿಕಾರಿಗಳು 20 ವರ್ಷಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ.

ಬರೀದ್‌ಶಾಹಿ ಉದ್ಯಾನ ಎಎಸ್‌ಐ ಅಧೀನಕ್ಕೆ ನೀಡುವಂತೆ ಎಎಸ್‌ಐ ಧಾರವಾಡ ವಲಯದ ಅಧೀಕ್ಷಕ 2015, 2016ರಲ್ಲಿ ಜಿಲ್ಲಾ ಆಡಳಿತಕ್ಕೆ ಪತ್ರ ಬರೆದಿದ್ದಾರೆ. ದೆಹಲಿಯಿಂದ ಬಂದಿದ್ದ ಎಎಸ್‌ಐನ ಹಿರಿಯ ಅಧಿಕಾರಿ ಜುಲೈನಲ್ಲಿ ಬೀದರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಬರೀದ್‌ಶಾಹಿ ಉದ್ಯಾನದ ವಿಷಯ ಪ್ರಸ್ತಾಪಿಸಿದ್ದರು.

ಸ್ಮಾರಕಗಳಿಗೆ ಡ್ರಿಲ್‌ ಹಾಕಿ ಅಲ್ಲಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಿರುವ ಕಾರಣ ಅವುಗಳಿಗೆ ಧಕ್ಕೆ ಆಗುತ್ತಿದೆ. ಸ್ಮಾರಕಗಳಿಗೆ ರಕ್ಷಣೆ ಕೊಡಬೇಕು. ಉದ್ಯಾನ ಬಿಟ್ಟುಕೊಡದಿದ್ದರೆ ಜಿಲ್ಲಾ ಆಡಳಿತವು ಎಎಸ್‌ಐನೊಂದಿಗೆ ಅಧಿಕೃತವಾಗಿ ಒಪ್ಪಂದ ಮಾಡಿಕೊಳ್ಳಬೇಕು. ನಿಯಮ ಬಾಹಿರವಾಗಿ ನಡೆದುಕೊಂಡರೆ ಕಾನೂನು ಉಲ್ಲಂಘನೆಯಾಗಲಿದೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಜಿಲ್ಲಾ ಆಡಳಿತ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಖಾಸಗಿಯವರ ದರ್ಬಾರ್‌ಮುಂದುವರಿದಿದೆ.

ನಿಯಮ ಬಾಹಿರ
‘ಬರೀದ್‌ಶಾಹಿ ಸ್ಮಾರಕಗಳು ಭಾರತೀಯ ಸರ್ವೇಕ್ಷಣಾ ಇಲಾಖೆಗೆ ಸೇರಿವೆ. ಸ್ಮಾರಕಗಳು ಇರುವ ಸ್ಥಳದಲ್ಲಿ ಪ್ರವಾಸಿಗರಿಂದ ಶುಲ್ಕ ಪಡೆಯಲು ಅವಕಾಶ ಇಲ್ಲ. ಆದರೆ ಉದ್ಯಾನ ವೀಕ್ಷಣೆಗೆ ನಿಯಮ ಬಾಹಿರವಾಗಿ ಸಾರ್ವಜನಿಕರಿಂದ ಶುಲ್ಕ ಪಡೆಯಲಾಗುತ್ತಿದೆ’ ಎಂದು ಎಎಸ್‌ಐನ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ಬೇಸರ ವ್ಯಕ್ತಪಡಿಸುತ್ತಾರೆ.

ಏನು ಪ್ರಯೋಜನ?
‘ಸಂಜೆಯ ವರೆಗೂ ಉದ್ಯಾನದ ಬಾಗಿಲು ಮುಚ್ಚಿಟ್ಟು ಪ್ರವಾಸಿಗರನ್ನು ಮರಳಿ ಕಳಿಸಿದರೆ ಏನು ಪ್ರಯೋಜನ? ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಸಮಯ ಬದಲಿಸುವಷ್ಟು ಅಧಿಕಾರವೂ ಜಿಲ್ಲಾ ಆಡಳಿತಕ್ಕೆ ಇಲ್ಲವೆ?’ ಎಂದು ಸ್ಮಾರಕ ವೀಕ್ಷಣೆಗೆ ಬಂದಿದ್ದ ತೆಲಂಗಾಣದ ಜಹೀರಾಬಾದ್‌ನ ಕೃಷ್ಣಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸಿಗರಿಗೆ ಅವಕಾಶ ಕಲ್ಪಿಸಿ
ನಿರ್ವಹಣೆ ಹೆಸರಲ್ಲಿ ಸಂಜೆಯ ವರೆಗೂ ಉದ್ಯಾನದ ಬಾಗಿಲು ಹಾಕುವುದು ಸರಿಯಲ್ಲ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಾದರೆ ಉದ್ಯಾನ ದಿನವಿಡೀ ತೆರೆದಿಡಬೇಕು. ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಕಲ್ಪಿಸಬೇಕು. ಶುಲ್ಕ ಪಾವತಿಸುವವರಿಗೆ ಬೆಳಗಿನ ವೇಳೆಯಲ್ಲಿ ಸ್ಮಾರಕ ವೀಕ್ಷಣೆಗೆ ಅವಕಾಶ ಕೊಡಬೇಕು.
ಸಚಿನ್‌ ವಿಶ್ವಕರ್ಮ, ಉಪನ್ಯಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !