ಬೀದರ್: ಜಿಲ್ಲೆಯಾದ್ಯಂತ ಶನಿವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಭಾನುವಾರ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ಹಗಲು-ರಾತ್ರಿಯೆನ್ನದೆ ಸುರಿಯುತ್ತಿರುವ ಸತತ ವರ್ಷಧಾರೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಶನಿವಾರ ಬೆಳಿಗ್ಗೆ ಆರಂಭಗೊಂಡ ಮಳೆ ಸಂಜೆ ವೇಳೆಗೆ ಬಿರುಸುಗೊಂಡಿತು. ಭಾನುವಾರವೂ ಒಂದೇ ಸಮ ಸುರಿಯುತ್ತಿದೆ.
ಭಾನುವಾರ ರಜಾ ದಿನ ಹಾಗೂ ಜೋರಾಗಿ ಮಳೆ ಸುರಿಯುತ್ತಿರುವ ಕಾರಣ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿದೆ. ಇನ್ನೊಂದೆಡೆ ಸಾರ್ವಜನಿಕ ಗಣೇಶ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದವರಿಗೆ ಮಳೆ ಅಡ್ಡಿಯಾಗಿದೆ.
ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಹುಲಸೂರ, ಕಮಲನಗರ, ಔರಾದ್, ಚಿಟಗುಪ್ಪ, ಹುಮನಾಬಾದ್ ಸೇರಿದಂತೆ ಬಹುತೇಕ ಭಾಗಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ