ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಯಲ್ಲಿ ಹೆಚ್ಚಿದ ಭಿಕ್ಷಾಟನೆ: ಸಾರ್ವಜನಿಕರಿಗೆ ಕಿರಿಕಿರಿ

Last Updated 24 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಕರ್ನಾಟಕದ ಮುಕುಟ ಮಣಿಯಂತಿರುವ ಬೀದರ್‌ ಜಿಲ್ಲೆಯಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಹೊರ ರಾಜ್ಯಗಳಿಂದಲೂ ಕೆಲವರು ಭಿಕ್ಷಾಟನೆಗೆ ಬರಲು ಆರಂಭಿಸಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿರುವುದರಿಂದ ಬಹುತೇಕ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ.

ಸೋಲಾಪುರ ಹಾಗೂ ಗಾಣಗಾಪುರದ ದೇವಿಯ ಹೆಸರಲ್ಲಿ ಎತ್ತಿನ ಗಾಡಿ, ಬೈಕ್‌ ಗಾಡಿಯಲ್ಲಿ ಭಾವಚಿತ್ರ ಇಟ್ಟುಕೊಂಡು, ವೇಷಭೂಷಣ ಮಾಡಿಕೊಂಡು ಹೈಟೆಕ್‌ ಆಗಿ ಭಿಕ್ಷೆ ಬೇಡುವವರ ಸಂಖ್ಯೆಯೂ ಹೆಚ್ಚಾಗಿದೆ. ವಾಹನಕ್ಕೆ ಸ್ಪೀಕರ್‌ ಅಳವಡಿಸಿ ಭಕ್ತಿ ಗೀತೆಗಳನ್ನು ಹಚ್ಚಿಕೊಂಡು ದೇಣಿಗೆ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೂ ಇವರಿಗೂ ಯಾವುದೇ ಸಂಬಂಧ ಇಲ್ಲ. ಆದರೆ, ಭಕ್ತಿ ಸೇವೆ ಹೆಸರಲ್ಲಿ ಭಿಕ್ಷಾಟನೆ ನಡೆದಿದೆ.

ಲೈಂಗಿಕ ಅಲ್ಪಸಂಖ್ಯಾತರ ಕಾಟವೂ ಹೆಚ್ಚಾಗಿದೆ. ಲೈಂಗಿಕ ಅಲ್ಪಸಂಖ್ಯಾತರರು ಪ್ರತಿ ಅಂಗಡಿಗೆ ಕನಿಷ್ಠ ₹ 10 ದರ ನಿಗದಿ ಮಾಡಿದ್ದಾರೆ. ಅವರು ಬಂದಾಗ ಭಿಕ್ಷೆ ಕೊಡಲು ನಿರಾಕರಿಸಿದರೆ ರಾದ್ಧಾಂತ ಮಾಡಿ ವ್ಯಾಪಾರ ವಹಿವಾಟಿಗೆ ಅಡಚಣೆ ಮಾಡುತ್ತಿದ್ದಾರೆ.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರು ಲೈಂಗಿಕ ಅಲ್ಪಸಂಖ್ಯಾತರ ಭಿಕ್ಷಾಟನೆ ತಡೆಯಲು ಅವರಿಗೆ ಕೇಶ ವಿನ್ಯಾಸದ ತರಬೇತಿ ಕೊಡಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಕುಂಬಾರಿಕೆ, ಗೃಹ ಉತ್ಪನ್ನಗಳ ತಯಾರಿಕೆ ತರಬೇತಿ ಕೊಡಲಾಗಿತ್ತು. ತರಬೇತಿ ಪಡೆದ ನಂತರ ಒಂದಿಷ್ಟು ದಿನ ಕೆಲಸ ಮಾಡಿದ ಕೆಲವರು ಸುಲಭ ಹಣ ಸಂಪಾದನೆಗೆ ಮತ್ತೆ ಭಿಕ್ಷಾಟನೆಗೆ ಇಳಿದಿದ್ದಾರೆ.

ಟ್ರಾಫಿಕ್‌ನಲ್ಲಿ ಭಿಕ್ಷುಕರ ಕಾಟ:

ಬೀದರ್‌ ನಗರದ ಭಗತ್‌ಸಿಂಗ್‌ ವೃತ್ತ ಹಾಗೂ ಬಸವೇಶ್ವರ ವೃತ್ತದಲ್ಲಿ ಭಿಕ್ಷಾಟನೆ ಎಗ್ಗಿಲ್ಲದೇ ನಡೆದಿದೆ. ಟ್ರಾಫಿಕ್‌ ಸಿಗ್ನಲ್‌ ಬೀಳುತ್ತಲೇ ಮಹಿಳೆಯರು ಹಾಗೂ ವೃದ್ಧರು ತಟ್ಟೆ ಹಿಡಿದು ಕಾರು ಹಾಗೂ ದ್ವಿಚಕ್ರ ವಾಹನ ಸವಾರರ ಮುಂದೆ ಬಂದು ನಿಂತು ಭಿಕ್ಷಾಟನೆ ಮಾಡುತ್ತಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಟ್ರಾಫಿಕ್‌ ಸಿಗ್ನಲ್‌ನಲ್ಲಿ ಹಸಿರು ದೀಪ ಹೊತ್ತಿಕೊಂಡರೂ ದಾರಿ ಬಿಡುತ್ತಿಲ್ಲ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ.

ಗುಂಪು ಗುಂಪಾಗಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಭಿಕ್ಷೆ ಕೇಳುವುದು ಶುರುವಾಗಿದೆ. ವಿದ್ಯಾರ್ಥಿಗಳು ದುಡ್ಡು ಕೊಟ್ಟ ಮೇಲೆಯೇ ಅವರಿಗೆ ಮುಂದೆ ಹೋಗಲು ಬಿಡುತ್ತಿದ್ದಾರೆ.

ನಗರದ ಕೇಂದ್ರ ಬಸ್‌ ನಿಲ್ದಾಣ, ಪಾಪನಾಶ ಮಂದಿರ, ಹನುಮಾನ ಮಂದಿರ, ಗಣೇಶ ಮಂದಿರ, ಪಾಂಡುರಂಗ ದೇವಸ್ಥಾನ ಹಾಗೂ ದೇವಿ ಮಂದಿರಗಳ ಆವರಣದಲ್ಲೂ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಭಿಕ್ಷುಕರಲ್ಲಿ ವೃದ್ಧರು ಹಾಗೂ ಅಂಗವಿಕಲರು ಬೆರಳೆಣಿಕೆ ಯಲ್ಲಿ ಇದ್ದಾರೆ. ಗಟ್ಟಿಮುಟ್ಟಾದ ಮಹಿಳೆಯರೇ ಮೊಬೈಲ್‌ ಇಟ್ಟುಕೊಂಡು ಭಿಕ್ಷಾಟನೆ ಮಾಡುತ್ತಿದ್ದಾರೆ. ಕೆಲವರಂತೂ ಏರಿಯಾಗಳನ್ನೇ ಫಿಕ್ಸ್‌ ಮಾಡಿಕೊಂಡಿದ್ದಾರೆ.

ಸಾರ್ವಜನಿಕರ ಹಿತದ ದೃಷ್ಟಿಯಿಂದ ಕಳೆದ ವರ್ಷ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ದೈಹಿಕವಾಗಿ ಸುಸ್ಥಿತಿಯಲ್ಲಿದ್ದರೂ ಕೆಲವರು ಭಿಕ್ಷಾಟನೆ ಮಾಡುವುದು ಕಂಡು ಬಂದಾಗ ಅವರಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳಿಸಿದ್ದರು. ನಂತರದಲ್ಲಿ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿಲ್ಲ.

ಬಸವಕಲ್ಯಾಣದಲ್ಲಿ ಭಿಕ್ಷುಕರಲ್ಲಿ ನಿರ್ಗತಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಅವರ ಉಡುಗೆ ತೊಡುಗೆ ಹಾಗೂ ಮಾನಸಿಕ ಸ್ಥಿತಿಯಿಂದ ಕಂಡು ಬರುತ್ತದೆ. ಭಿಕ್ಷುಕರು ನಗರದ ರಾಜಾ ಬಾಗಸವಾರ ದರ್ಗಾ ಎದುರಲ್ಲಿ ಕುಳಿತಿರುತ್ತಾರೆ. ದರ್ಗಾಕ್ಕೆ ಬಂದವರು ಇವರ ತಟ್ಟೆಗೆ ಹಣ ಹಾಕಿ ಹೋಗುತ್ತಾರೆ.

ಲೋಕೇಶ ಮೋಳಕೆರೆ ಹಾಗೂ ಜ್ಞಾನೇಶ್ವರ ರಾಚಪ್ಪನೋರ್ ನೇತೃತ್ವದ ಯುವಕರ ತಂಡ ಮಾನವೀಯ ನೆಲೆಯಲ್ಲಿ ಅವರಿಗೆ ಒಂದು ಹೊತ್ತಿನ ಆಹಾರ ಪೊರೈಸುತ್ತಿದೆ. ಇನ್ನೊಂದು ಹೊತ್ತಿನ ಊಟಕ್ಕೆ ಅಲೆಯಬೇಕಾದ ಸ್ಥಿತಿ ಇದೆ.

ಚಿಟಗುಪ್ಪ: ತಾಲ್ಲೂಕಿನಲ್ಲಿ ಹೆಚ್ಚಿದ ಬಿಕ್ಷಾಟನೆ

ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲ, ಕರಕನಳ್ಳಿಯ ಬಕ್ಕಪ್ರಭು ದೇಗುಲ ಹಾಗೂ ಮನ್ನಾಎಖ್ಖೆಳ್ಳಿ ಹೊರವಲಯದಲ್ಲಿರುವ ಖಾಸಗಿ ಒಡೆತನದ ಬಾಲಮ್ಮ ಮಂದಿರಗಳ ಆವರಣದಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗಿದೆ.

‘ತಾಲ್ಲೂಕು ಆಡಳಿತಕ್ಕೆ ಮಾಹಿತಿ ಇದ್ದರೂ ಮೌನ ವಹಿಸಿದೆ. ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿ ಗೌರವಯುತ ಜೀವನಕ್ಕೆ ನೆರವಾಗುವಲ್ಲಿ ಸ್ಥಳೀಯ ಆಡಳಿತ ವಿಫಲಗೊಂಡಿದೆ’ ಎಂದು ಸಾಮಾಜಿಕ ಕಾರ್ಯಕರ್ತ ವಿಠ್ಠಲರಾವ್‌ ಪಟ್ಟಣಕರ್ ಹೇಳುತ್ತಾರೆ.
ಭಾಲ್ಕಿಯ ರೈಲು ನಿಲ್ದಾಣ, ಬಸ್ ನಿಲ್ದಾಣ, ಚಿತ್ರ ಮಂದಿರ ಸೇರಿದಂತೆ ಪ್ರಮುಖ ವೃತ್ತ, ಜನನಿಬಿಡ ಸ್ಥಳಗಳಲ್ಲಿ ಮಕ್ಕಳು, ಮಹಿಳೆಯರು, ವಯೋವೃದ್ಧರು ಭಿಕ್ಷಾಟನೆ ನಡೆಸುತ್ತಿದ್ದಾರೆ.

ಭಿಕ್ಷಾಟನೆ ತಡೆಗೆ ರೈಲ್ವೆ ನಿಲ್ದಾಣ ಎದುರುಗಡೆಯ ಡೊಂಬರಾಟ ಓಣಿಯ ಜನರಲ್ಲಿ ಜಾಗೃತಿ ಮೂಡಿಸಿ, ಶಾಲೆಗೆ ಹೋಗದ ಮಕ್ಕಳಿಗೆ ಶಾಲೆಗೆ ದಾಖಲಿಸಿದ್ದೇವೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಭಿಕ್ಷಾಟನೆ ತಡೆಗೆ ಶ್ರಮಿಸುತ್ತಿದ್ದೇವೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪ್ರಶಾಂತ ಬಿರಾದಾರ ತಿಳಿಸಿದರು.

ಹುಮನಾಬಾದ್‌ ಬಸ್‌ ನಿಲ್ದಾಣ, ಎಪಿಎಂಸಿ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಭಿಕ್ಷುಕಿಯರ ಕಾಟ ಹೆಚ್ಚಾಗಿದೆ. ಹರೆಯದ ಮಹಿಳೆಯರು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಕೆಲವರು ಭಿಕ್ಷೆ ಬೇಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಭಿಕ್ಷಾಟನೆ ನಿಯಂತ್ರಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ. ಕಮಲನಗರ ಹಾಗೂ ಹುಲಸೂರಿನಲ್ಲೂ ಇದೇ ಸ್ಥಿತಿ ಇದೆ.

ಜಿಲ್ಲಾ ಕೇಂದ್ರದಲ್ಲಿ ನಿರ್ಗತಿಕರ ಕೇಂದ್ರವೇ ಇಲ್ಲ

ಬೀದರ್‌: ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಿಕ್ಷುಕರು ಪರದಾಡುತ್ತಿದ್ದರೂ ಜಿಲ್ಲಾ ಕೇಂದ್ರದಲ್ಲಿ ನಿರ್ಗತಿಕರ ಕೇಂದ್ರವೇ ಇಲ್ಲ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯೊಳಗೆ ನಿರ್ಗತಿಕರ ಕೇಂದ್ರ ಬರುತ್ತದೆ ಎನ್ನುವುದು ಕೆಲ ಅಧಿಕಾರಿಗಳಿಗೆ ಗೊತ್ತೂ ಇಲ್ಲ.

ಸಾಮಾಜಿಕ ಭದ್ರತೆಗೆ ಸಂಬಂಧಪಟ್ಟಂತೆ ಎರಡು ತಿಂಗಳ ಹಿಂದೆ ಹಿರಿಯ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದರು. ನಿರ್ಗತಿಕರ ಬಗೆಗೆ ಮಾಹಿತಿ ಕೇಳಿದರೆ ಒಬ್ಬ ಅಧಿಕಾರಿಯೂ ಉತ್ತರ ನೀಡಿರಲಿಲ್ಲ.

ನಿರಾಶ್ರಿತರು ತಮ್ಮ ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಹೋಟೆಲ್‌ಗಳು ನೀಡುವ ಅಳಿದುಳಿದ ಆಹಾರ ತಿಂದು ಬದುಕುತ್ತಿದ್ದಾರೆ. ರಿಶೈನ್‌ ಅಂತಹ ಕೆಲ ಸಂಘಟನೆಗಳು ನೀಡುವ ಆಹಾರ ಪೊಟ್ಟಣಗಳು ನಿರ್ಗತಿಕರ ಹೊಟ್ಟೆ ತುಂಬಿಸುತ್ತಿವೆ.

ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಒಂದೆರಡು ಬಾರಿ ನಿರ್ಗತಿಕ ಮಹಿಳೆಯರು ಕಂಡು ಬಂದಾಗ ಕಲಬುರ್ಗಿಯ ನಿರ್ಗತಿಕ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ನಿರ್ಗತಿಕರ ಕೇಂದ್ರ ಸ್ಥಾಪಿಸುವ ಬಗೆಗೆ ಜಿಲ್ಲೆಯ ಅಧಿಕಾರಿಗಳು ಇಂದಿಗೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ.

ಭಿಕ್ಷಾಟನೆ ಕೊನೆಗೊಳಿಸಲು ಸರ್ಕಾರ ರಾಜ್ಯದ 14 ಜಿಲ್ಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ನಡೆಸುತ್ತಿದೆ.
ನಗರ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಭಿಕ್ಷುಕರ ಸೆಸ್‌ ಆದಾಯ ಮೂಲವಾಗಿದೆ. ತೆರಿಗೆಯಲ್ಲಿ ಸೇವಾ ವೆಚ್ಚ ಎಂದು ಇಟ್ಟುಕೊಳ್ಳುವ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪುನರ್ವಸತಿ ಪರಿಹಾರ ಸಮಿತಿಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಆಶ‌್ರಯ ತಾಣ ಇಲ್ಲದ ಕಾರಣ ಭಿಕ್ಷಕರು, ರೈಲು ನಿಲ್ದಾಣ, ಬಸ್‌ ನಿಲ್ದಾಣ, ಆಸ್ಪತ್ರೆ, ಸಾರ್ವಜನಿಕ ಉದ್ಯಾನಗಳಲ್ಲಿ ಮಲಗುತ್ತಿದ್ದಾರೆ ಎನ್ನುವುದು ನಾಗರಿಕರ ಅಳಲು.

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಒಂದು ಲಕ್ಷ ಜನರಿಗೆ ಕನಿಷ್ಠ ಒಂದು ನಿರ್ಗತಿಕರ ಕೇಂದ್ರವಾದರೂ ಇರಬೇಕು. ಆದರೆ, ಅಧಿಕಾರಿಗಳು ಯಾವುದಕ್ಕೂ ಬೆಲೆ ಕೊಡುತ್ತಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಇರುವಂತೆ ಬೀದರ್‌ ಜಿಲ್ಲೆಯಲ್ಲಿ ನಿರ್ಗತಿಕರ ಕೇಂದ್ರ ಆರಂಭಿಸಬೇಕು’ ಎಂದು ಬುದ್ಧ, ಬಸವ, ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್‌ ಒತ್ತಾಯಿಸುತ್ತಾರೆ.

ಪೂರಕ ಮಾಹಿತಿ: ಮಾಣಿಕ ಭುರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ವೀರೇಶ ಮಠಪತಿ, ಗುಂಡು ಅತಿವಾಳ, ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT