ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಕೊರೊನಾ ಭೀತಿ, ಮಾರುಕಟ್ಟೆಯತ್ತ ಸುಳಿಯದ ಗ್ರಾಹಕರು

ಆಟೊಗಳಲ್ಲಿ ಸಂಚರಿಸಲು ಪ್ರಯಾಣಿಕರ ಹಿಂಜರಿಕೆ
Last Updated 20 ಮೇ 2020, 19:45 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಕಂಟೈನ್ಮೆಂಟ್‌ ವಲಯವನ್ನು ಹೊರತುಪಡಿಸಿ ಲಾಕ್‌ಡೌನ್‌ ಸಡಿಲಗೊಳಿಸಲಾಗಿದೆ. ಐಸ್‌ಕ್ರೀಮ್‌, ಹೋಟೆಲ್, ಸಲೂನ್, ಮಾಂಸ ಮಾರಾಟ ಅಂಗಡಿ ಹೊರತು ಪಡಿಸಿ ಉಳಿದ ಬಹುತೇಕ ಅಂಗಡಿಗಳು ತೆರೆದುಕೊಂಡಿವೆ. ಆದರೆ ಕೋವಿಡ್‌–19 ವೈರಾಣುವಿಗೆ ಹೆದರಿ ಹೆಚ್ಚಿನ ಜನ ಮನೆಗಳಿಂದ ಹೊರಗೆ ಬರುತ್ತಿಲ್ಲ.

ನಗರದಲ್ಲಿ ತರಕಾರಿ ಖರೀದಿಸಲು ಸಹ ಹೆಚ್ಚು ಜನ ಮನೆಗಳಿಂದ ಹೊರಗೆ ಬರುತ್ತಿಲ್ಲ. ಮನೆ ಬಾಗಿಲಿಗೆ ತರಕಾರಿ ಮಾರಾಟ ಮಾಡಲು ಬಂದರೂ ಅವರ ವೇಷಭೂಷಣ ನೋಡಿ ಹಿಂದೇಟು ಹಾಕುತ್ತಿದ್ದಾರೆ. ಇದೀಗ ರೈತರು ಓಣಿ ಓಣಿಗೆ ತರಕಾರಿ ಮಾರಾಟ ಮಾಡಲು ಬರುವುದನ್ನು ನಿಲ್ಲಿಸಿದ್ದಾರೆ. ಕೆಟ್ಟು ಹೋಗಿರುವ ಮಿಕ್ಸರ್‌, ಗ್ರ್ಯಾಂಡರ್, ಫ್ಯಾನ್‌ ದುರಸ್ತಿ ಮಾಡಿಕೊಳ್ಳಲು ಅನೇಕರು ಮಾರುಕಟ್ಟೆಗೆ ಬರುತ್ತಿದ್ದಾರೆ. ಹೊಸ ಸಾಮಗ್ರಿಗಳನ್ನು ಖರೀದಿಸಲು ಆಸಕ್ತಿ ತೋರುತ್ತಿಲ್ಲ.

ಪಾದರಕ್ಷೆ ಅಂಗಡಿಗಳಲ್ಲಿ ಮಾತ್ರ ಜನ ಕಾಣಿಸಿಕೊಂಡರು. ತಮಗೆ ಬೇಕಿರುವ ಹೊಸ ಪಾದರಕ್ಷೆಗಳನ್ನು ಖರೀದಿಸಿದರು. ಬಟ್ಟೆ ಅಂಗಡಿಗಳು ತೆರೆದುಕೊಂಡರೂ ಒಳ ಉಡುಪುಗಳನ್ನು ಮಾತ್ರ ಜನ ಖರೀದಿಸುತ್ತಿದ್ದಾರೆ. ಬೇರೆ ಬಟ್ಟೆಗಳನ್ನು ವಿಚಾರಿಸುತ್ತಿಲ್ಲ.

‘ರಂಜಾನ್‌ ಇರುವ ಕಾರಣ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯಬಹುದು ಅಂದುಕೊಂಡಿದ್ದೇವು. ಆದರೆ, ನಮ್ಮ ಲೆಕ್ಕಾಚಾರ ಬುಡಮೇಲಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹಾಗೂ ರೈತರ ಬಳಿ ಸದ್ಯ ಹಣವಿಲ್ಲ. ಸಂಬಳ ಪಡೆಯುವವರ ವೇತನದಲ್ಲೂ ಕಡಿತ ಮಾಡಲಾಗಿದೆ. ಅಂಗಡಿ ತೆರೆದು ಮೂರು ದಿನಗಳಾದರೂ ಬಟ್ಟೆ ಖರೀದಿಸಲು ಒಬ್ಬರೂ ಬಂದಿಲ್ಲ’ ಎಂದು ಹೇಳುತ್ತಾರೆ ಬಟ್ಟೆ ವ್ಯಾಪಾರಿ ರಾಜಕುಮಾರ ಮೂಲಗೆ.

‘ಸೋಮವಾರದಿಂದ ನಗರದಲ್ಲಿ ಆಟೊ ಓಡಿಸುತ್ತಿದ್ದೇನೆ. ಪ್ರಯಾಣಿಕರೇ ಸಿಗುತ್ತಿಲ್ಲ. ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯ ವರೆಗೆ ಅಂಗಡಿಗಳು ತೆರೆದುಕೊಳ್ಳುತ್ತಿವೆ. ನೆತ್ತಿ ಸುಡುವ ಬಿಸಿಲು ಹಾಗೂ ಕೊರೊನಾ ಭೀತಿಯ ಕಾರಣ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ಪ್ರಯಾಣಿಕರೇ ಇಲ್ಲವಾಗಿದ್ದಾರೆ’ ಎಂದು ವಿದ್ಯಾನಗರದ ಆಟೊ ಚಾಲಕ ನಾಗೇಶ ತಿಳಿಸುತ್ತಾರೆ.

‘ಆಟೊರಿಕ್ಷಾಗಳಲ್ಲಿ ಇಬ್ಬರು ಮಾತ್ರ ಇರಬೇಕು ಎಂದು ನಿರ್ಬಂಧ ವಿಧಿಸಲಾಗಿದೆ. ಬೀದರ್‌ನಲ್ಲಿ ಸೀಟ್‌ ಆಧಾರದ ಮೇಲೆ ಪ್ರಯಾಣಿಕರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುತ್ತಾರೆ. ಪ್ರತ್ಯೇಕವಾಗಿ ಬರಲು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಹಾನಿ ಅನುಭವಿಸಬೇಕಾಗಿದೆ ’ ಎಂದು ಹೇಳುತ್ತಾರೆ.

‘ಗ್ರಾಮೀಣ ಪ್ರದೇಶದಿಂದ ನಿತ್ಯ ನೂರಾರು ಜನ ಬಸ್‌ಗಳಲ್ಲಿ ನಗರದ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದರು. ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹೋಗುತ್ತಿಲ್ಲ. ಅಷ್ಟೇ ಅಲ್ಲ, ಪ್ರಮುಖ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಒಟ್ಟಾರೆ ಕೊರೊನಾ ವೈರಾಣು ನಮ್ಮ ಹೊಟ್ಟೆಯ ಮೇಲೆ ಬರೆ ಎಳೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT