ಬಸವಕಲ್ಯಾಣ: ನಗರದ ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಶರಣು ಸಲಗರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಬೀಜದ ಸಮರ್ಪಕ ಪೊರೈಕೆಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.
`ರೈತರು ಗುಂಪುಗುಂಪಾಗಿ ನಿಲ್ಲದೆ ಸಾಲಿನಲ್ಲಿ ನಿಂತು ಬೀಜ ಪಡೆದುಕೊಳ್ಳಬೇಕು. ರೈತರಿಗೆ ಬಿಸಿಲಿನಿಂದ ತೊಂದರೆ ಆಗಬಾರದು. ಕುಡಿಯುವ ನೀರಿನ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿರುವ ಬೀಜ ತಕ್ಷಣ ಒದಗಿಸಬೇಕು' ಎಂದು ಶಾಸಕರು ಸೂಚಿಸಿದರು. ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಮಚಕೂರಿ ಇದ್ದರು.
ಮಳೆ ಇಲ್ಲ: ಮುಂಗಾರು ಆರಂಭವಾಗಿ ಎರಡು ವಾರವಾದರೂ ಮಳೆಯಾಗಿಲ್ಲ. ಹವಾಮಾನ ಇಲಾಖೆಯವರು ಮಾಹಿತಿ ನೀಡಿದಂತೆ ಈ ವಾರ ಮಳೆ ಸುರಿಯಬೇಕಾಗಿತ್ತು. ಆದರೂ, ಆಗಾಗ ಅಲ್ಪಸ್ವಲ್ಪ ಮೋಡ ಕವಿದು ಜಿಟಿಜಿಟಿ ಮಳೆ ಬಂದಿರುವುದು ಬಿಟ್ಟರೆ ಜಮೀನು ಹಸಿ ಆಗುವಂತೆ ವರ್ಷಾಧಾರೆ ಆಗಿಲ್ಲ. ಹೀಗಾಗಿ ಒಂದೆಡೆ ರೈತರಲ್ಲಿ ಚಿಂತೆ ಆವರಿಸಿದರೆ ಇನ್ನೊಂದೆಡೆ ಬೀಜ ಖರೀದಿಗೆ ನೂಕುನುಗ್ಗಲು ಮಾಡುತ್ತಿರುವುದು ಸಹ ಕಂಡು ಬಂದಿದೆ.
`ಮಳೆ ಬರಬಹುದು ಎಂದು ಮುಗಿಲು ನೋಡುತ್ತಿದ್ದೇವೆ. ಮಿರ್ಗಾ ಮಿಂಚಿದರೆ ಮಳೆ ಬರುತ್ತದೆ ಎನ್ನಲಾಗಿತ್ತು. ಆದರೂ, ಮೃಗಶಿರಾ ಮಳೆ ಹೋಗಿ ಅರಿದ್ರಾ ನಕ್ಷತ್ರದ ಮಳೆ ಆರಂಭವಾಗಿದೆ. ಆದರೂ, ಮಳೆ ಬಂದಿಲ್ಲ. ಹೀಗಾಗಿ ಚಿಂತೆ ಹೆಚ್ಚಿದೆ. ಆದರೂ, ಬಿತ್ತನೆ ಬೀಜದ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಸಮಸ್ಯೆ ಆದೀತು ಎಂದು ಬೀಜ ಖರೀದಿಸುತ್ತಿದ್ದೇವೆ' ಎಂದು ನಾರಾಯಣಪುರದ ರೈತ ರಾಜಪ್ಪ ಹೇಳಿದರು.
`ಈ ಸಲ ಮಳೆಗಾಲದ ಪೂರ್ವದಲ್ಲಿ ಅಧಿಕ ಮಳೆ ಬಂತು. ಆಗ ಕೆಲವರು ಮುಂಗಾರು ಮಳೆ ಕ್ಷೀಣಿಸಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಅದು ನಿಜವಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಎರಡು ವಾರ ಮಳೆ ಬಾರದ ಕಾರಣ ಎಳ್ಳು ಬಿತ್ತನೆ ಕೈ ಬಿಡಬೇಕಾಗುತ್ತದೆ. ಈಗ ಏನಿದ್ದರೂ ಸೋಯಾಬಿನ್ ಹಾಗೂ ತೊಗರಿ ಬಿತ್ತನೆಗೆ ಅವಕಾಶವಿದೆ' ಎಂದು ಮುಡಬಿಯ ಶಾಮರಾವ್ ಹೇಳಿದರು.
`ಸೋಯಾಬಿನ್ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ರೈತರ ಆಗ್ರಹದಂತೆ ಬೀಜದ ಪೊರೈಕೆಯೂ ಆಗಿದೆ. ಈಗಾಗಲೇ ಶೇ 80 ರಷ್ಟು ಬೀಜ ವಿತರಿಸಲಾಗಿದೆ. ಆದರೂ, ಮಳೆ ಬರಬಹುದು ಎಂಬ ಕಾರಣಕ್ಕಾಗಿ ಕೆಲ ರೈತರು ಬೀಜ ಖರೀದಿಗೆ ನೂಕುನುಗ್ಗಲು ಮಾಡುತ್ತಿದ್ದಾರೆ. ಬೇರೆ ಯಾವುದೇ ಸಮಸ್ಯೆ ಇಲ್ಲ' ಎಂದು ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಮಚಕೂರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.