ಬುಧವಾರ, ಆಗಸ್ಟ್ 21, 2019
28 °C
ಜಿಲ್ಲಾಧಿಕಾರಿ ಎಚ್.ಆರ್‌.ಮಹಾದೇವ ಹೇಳಿಕೆ

ಸಮಾನತೆಯ ಸಮಾಜ ಕಟ್ಟಲು ಕಂಕಣಬದ್ಧರಾಗಿ

Published:
Updated:
Prajavani

ಬೀದರ್‌: ‘ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯ ಸಮಾಜಕ ಕಟ್ಟಬೇಕಿದೆ. ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಶೋಷಣೆ ಕೊನೆಗೊಂಡು ಹೊಸ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕಂಕಣಬದ್ಧರಾಗಿ ದುಡಿಯಬೇಕಾಗಿದೆ ’ ಎಂದು ಜಿಲ್ಲಾಧಿಕಾರಿ ಎಚ್.ಆರ್‌. ಮಹಾದೇವ ಹೇಳಿದರು.

ನಗರದ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಗುರುವಾರ ಆಯೋಜಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಅನೇಕ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಜನರನ್ನು ಒಗ್ಗೂಡಿಸಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ ನಮ್ಮದು’ ಎಂದು ಬಣ್ಣಿಸಿದರು

‘ನಮ್ಮದು ಸಾಧು ಸಂತರ, ಶರಣರ ನಾಡಾಗಿದೆ. ಇಡೀ ವಿಶ್ವವೇ ಒಂದು ಕುಟುಂಬ, ಮಾನವ ಕುಲ ತಾನೊಂದೇ ವಲಂ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಮಹತ್ವಪೂರ್ಣ ಸಂದೇಶ ನೀಡಿದ ಬುದ್ಧ, ಬಸವ, ದಾಸರು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ಡಾ.ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಬೇಕಿದೆ. ಸ್ನೇಹ, ಸಹಬಾಳ್ವೆಗಳಿಂದ ನಾವೆಲ್ಲರೂ ಒಂದುಗೂಡಿ ಬದುಕಬೇಕಿದೆ’ ಎಂದು ತಿಳಿಸಿದರು.

‘ಸ್ವಾತಂತ್ರ್ಯದ ತರುವಾಯ ರೂಪಿಸಿದ ಹತ್ತು ಹಲವಾರು ಯೋಜನೆಗಳಿಂದ ದೇಶವು ಅಭಿವೃದ್ಧಿ ಪಥದತ್ತ ಸಾಗಿದೆ. ಇಡೀ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ರೂಪಗೊಂಡಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ವಿಜ್ಞಾನ, ವಾಣಿಜ್ಯ, ಸಾಕ್ಷರತೆ, ತಂತ್ರಜ್ಞಾನ, ಮೂಲಸೌಲಭ್ಯ, ತಂತ್ರಜ್ಞಾನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಭಾರತ ಅಗಾದ ಸಾಧನೆ ಮಾಡಿದೆ’ ಎಂದು ಹೇಳಿದರು.

‘ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಗಣನೀಯ ಸಾಧನೆಯಾಗಿದೆ. ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗಾವಕಾಶಗಳು, ಕುಡಿಯುವ ನೀರಿನ ಪೂರೈಕೆಯಲ್ಲಿ ಸುಧಾರಣೆಯಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಅಧಿಕಾರ ವಿಕೇಂದ್ರಿಕರಣಗೊಳಿಸಿ ಜನತೆಯ ಕೈಗೆ ಅಧಿಕಾರ ನೀಡಲಾಗಿದೆ’ ಎಂದರು.

‘ಮಹಿಳೆಯರು ಸರ್ವಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತ್ತಿರುವುದು ಒಂದು ಹಿರಿಮೆಯಾಗಿದೆ. ಅನೂಹ್ಯ ವೇಗದಲ್ಲಿ ಬೆಳೆಯುತ್ತಿರುವ ವಿಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಯಾಗಿದೆ. ಸಾರಿಗೆ ಸಂಚಾರ, ನಗರೀಕರಣ, ಸಮೂಹ ಮಾಧ್ಯಮಗಳು ವ್ಯಾಪಕವಾಗಿ ಬೆಳೆದು ಶ್ರೀಸಾಮಾನ್ಯನ ಅಭಿವೃದ್ಧಿಗೆ ದನಿಯಾಗುವ ಮೂಲಕ ದೇಶದ ಪ್ರಗತಿಗೆ ಬಲ ನೀಡಿವೆ’ ಎಂದು ಹೇಳಿದರು.

ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಮಣರಾವ್‌ ಬುಳ್ಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ, ಉಪ ವಿಭಾಗಾಧಿಕಾರಿ ಶಂಕರ ವನಕ್ಯಾಳ ಇದ್ದರು.

ಜಿಲ್ಲಾ ಸಶಸ್ತ್ರಪಡೆ, ಜಿಲ್ಲಾ ನಾಗರಿಕ ಪೊಲೀಸ್‌, ಮಹಿಳಾ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಎನ್‌ಸಿಸಿ ಕೆಡೆಟ್‌, ಸ್ಕೌಟ್ಸ್‌ ಮತ್ತು ಗೈಡ್ಸ್ ಪಥ ಸಂಚಲನ ನಡೆಸಿದರು. ಚೆನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.

Post Comments (+)