ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಗಳ ಬೆಳಕಲ್ಲಿ ಪ್ರಜ್ವಲಿಸಿದ ಅಖಂಡ ಭಾರತ

ಜನಸೇವಾ ಶಾಲೆಯಲ್ಲಿ ಮಾತೆಯರಿಂದ ದೀಪ ಪೂಜನ
Last Updated 6 ಡಿಸೆಂಬರ್ 2021, 12:57 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಾತೆಯರಿಂದ ನಡೆದ ದೀಪ ಪೂಜನ ಕಾರ್ಯಕ್ರಮದಲ್ಲಿ ದೀಪಗಳ ಬೆಳಕಿನಲ್ಲಿ ಅಖಂಡ ಭಾರತದ ನಕಾಶೆ ಪ್ರಜ್ವಲಿಸಿತು.

ಅಖಂಡ ಭಾರತದ ನಕಾಶೆ ಬಿಡಿಸಿ ಅಲಂಕರಿಸಿ, ಅದರ ಅಂಚಿನಲ್ಲಿ ಹಣತೆಗಳನ್ನು ಇಟ್ಟು ಜ್ಯೋತಿ ಬೆಳಗಿಸಿದ್ದು ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾಭಾರತಿಯ ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ಮಹಿಪಾಲ್ ರೆಡ್ಡಿ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಒಯ್ಯುವ ಸಂಕೇತವೇ ದೀಪ ಪೂಜನ ಎಂದು ಬಣ್ಣಿಸಿದರು.

ಶ್ರೇಷ್ಠ ಕೆಲಸ ಮಾಡುವಾಗ ಜ್ಯೋತಿ ಬೆಳಗಿಸಲಾಗುತ್ತದೆ. ಹಾಗೆಯೇ ಮಾತೆಯರು ಮಕ್ಕಳ ಸರ್ವಾಂಗೀಣ ವಿಕಾಸದ ಸಂಕಲ್ಪ ತೊಟ್ಟು ದೀಪ ಹಚ್ಚಬೇಕು. ದೀಪ ಪೂಜನ ದೇಶದ ಎಲ್ಲ ವಿದ್ಯಾಭಾರತಿ ಶಾಲೆಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಹಾರಕೂಡದ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಗೀತಾ ರಾಣಿ ಮಾತನಾಡಿ, ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ಕೊಡಬೇಕು. ಮನೆಯಲ್ಲಿ ಅವರಿಗೆ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.

ಶಿವಾಜಿ ಮಹಾರಾಜ್, ಸ್ವಾಮಿ ವಿವೇಕಾನಂದ ಮೊದಲಾದ ಮಹಾ ಪುರುಷರು ಉತ್ತುಂಗಕ್ಕೆ ಬೆಳೆದದ್ದು ಅವರ ತಾಯಿಯ ಉತ್ತಮ ಸಂಸ್ಕಾರದಿಂದಾಗಿಯೇ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಜನಸೇವಾ ಶಾಲೆ ಮಕ್ಕಳಿಗೆ ಕೇವಲ ಅಂಕಪಟ್ಟಿ ಕೊಡುವ ಕೇಂದ್ರವಾಗಿರದೆ, ಸಾಮಾಜಿಕ ಕೇಂದ್ರವಾಗಿದೆ. ಪುಸ್ತಕ ಜ್ಞಾನದ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುತ್ತಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆಯೂ ಪ್ರೇರೇಪಿಸುತ್ತಿದೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಶಾಲೆಯಿಂದ ಬಡವರಿಗೆ 500 ಆಹಾರಧಾನ್ಯ ಕಿಟ್ ವಿತರಿಸಲಾಗಿದೆ. ಕೋವಿಡ್ ಇನ್ನೂ ನಿರ್ನಾಮವಾಗದ ಕಾರಣ ಶಾಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಹಿತಿ ಶ್ರೀದೇವಿ ಹೂಗಾರ ಮಾತನಾಡಿದರು. ಜನಸೇವಾ ಪ್ರತಿಷ್ಠಾನದ ಖಜಾಂಚಿ ಶಿವರಾಜ ಹುಡೇದ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಹನುಮಾನ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಾಬುರೆಡ್ಡಿ, ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್. ಕುದರೆ, ಷಣ್ಮುಕಯ್ಯ ಸ್ವಾಮಿ, ಶಿವಲಿಂಗಪ್ಪ ಜಲಾದೆ, ಶಾಲೆ ಆಡಳಿತಾಧಿಕಾರಿ ಸೌಭಾಗ್ಯವತಿ ಉಪಸ್ಥಿತರಿದ್ದರು.

ನೀಲಮ್ಮ ಚಾಮರೆಡ್ಡಿ ನಿರೂಪಿಸಿದರು. ಮುಖ್ಯಶಿಕ್ಷಕ ಶಿವಾನಂದ ಮಲ್ಲ ಸ್ವಾಗತಿಸಿದರು. ವನಜಾಕ್ಷಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT