ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೊದಲು: ಡಾ.ಪ್ರಕಾಶ ಕುಮಾರ

ಜಾನುವಾರು ಸಂಶೋಧನೆ ಕೇಂದ್ರದ ಮುಖ್ಯಸ್ಥ ಡಾ.ಪ್ರಕಾಶಕುಮಾರ ಹೇಳಿಕೆ
Last Updated 1 ಜೂನ್ 2022, 15:10 IST
ಅಕ್ಷರ ಗಾತ್ರ

ಬೀದರ್‌: ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಜಾಗತಿಕ ಹಾಲು ಉತ್ಪಾದನೆಯಲ್ಲಿ ದೇಶದ ಕೊಡುಗೆ ಶೇ.23 ರಷ್ಟು ಇದೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಪ್ರಕಾಶಕುಮಾರ ರಾಠೋಡ್ ತಿಳಿಸಿದರು.

ಕಟ್ಟಿ ತೂಗಾಂವದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರದಲ್ಲಿ ಬುಧವಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ರೈತ ಮಹಿಳೆಯರಿಗಾಗಿ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಹಾಗೂ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾಲಿನಿಂದ ಮನುಷ್ಯನ ದೇಹದ ಬೆಳವಣಿಗೆ ಮತ್ತು ದೈನಂದಿನ ಕಾರ್ಯಚಟುವಟಿಕೆಗಳಿಗೆ ಬೇಕಾಗುವ ಎಲ್ಲ ಪೋಷಕಾಂಶಗಳು ಸಿಗುತ್ತವೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ 2021-22ನೇ ಸಾಲಿನಲ್ಲಿ ಭಾರತ 209.96 ಮಿಲಿಯನ್ ಟನ್‍ನಷ್ಟು ಹಾಲಿನ ಉತ್ಪಾದನೆ ಮಾಡಿದೆ ಎಂದು ತಿಳಿಸಿದರು.

ಜಾಗತಿಕ ಆಹಾರವಾಗಿ ಹಾಲಿನ ಮಹತ್ವ ತಿಳಿಸಲು ಹಾಗೂ ಹೈನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸಲು ವಿಶ್ವ ಸಂಸ್ಥೆಯ ಅಂಗವಾದ ಆಹಾರ ಮತ್ತು ಕೃಷಿ ಸಂಸ್ಥೆ 2002ರಲ್ಲಿ ಜೂನ್‌ 21 ರಂದು ಪ್ರತಿ ವರ್ಷ ವಿಶ್ವಹಾಲು ದಿನ ಆಚರಿಸಲು ನಿರ್ದೇಶಿಸಿದೆ ಎಂದು ತಿಳಿಸಿದರು.

‌ಪ್ರಸಕ್ತ ಸಾಲಿನ ಧ್ಯೇಯವು ಹೈನುಗಾರಿಕೆ ವಲಯದಲ್ಲಿ ಸುಸ್ಥಿರತೆ, ಪೌಷ್ಟಿಕಾಂಶ ಮತ್ತು ಸಾಮಾಜಿಕ ಆರ್ಥಿಕ ಸಬಲೀಕರಣ ಸಾಧಿಸುವುದಾಗಿದೆ. ಹಾಲು ಎಲ್ಲರೂ ಸೇವಿಸುವ, ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ವ್ಯಕ್ತಿ ಆರೋಗ್ಯದಿಂದ ಇರಲು ಬೇಕಾಗುವ ಎಲ್ಲ ಪೌಷ್ಟಿಕಾಂಶ ಹಾಗೂ ಖನಿಜಾಂಶಗಳು ಇದರಲ್ಲಿವೆ ಎಂದರು.

ಕೃಷಿಕರು ಜಾನುವಾರು ಹಾಲು ಉತ್ಪಾದನೆ ಹೆಚ್ಚಿಸಲು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಹಾಲಿನ ಉತ್ಪನ್ನಗಳ ತಯಾರಿಕೆ, ಮೇವಿನ ಸದ್ಬಳಕೆ, ಆರೋಗ್ಯ ರಕ್ಷಣೆ ಹಾಗೂ ಶುದ್ಧ ಹಾಲು ಉತ್ಪಾದನೆಯ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ವಿಜಯಕುಮಾರ. ಹಾಲಿನ ಮೌಲ್ಯವರ್ಧನೆಯಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಹೈನುರಾಸುಗಳ ಆಯ್ಕೆ, ಕಡಿಮೆ ಖರ್ಚಿನಲ್ಲಿ ಹಸಿ ಮೇವು ಹಾಗೂ ಪಶು ಆಹಾರ ತಯಾರಿಕೆ, ಹೈನು ಜಾನುವಾರುಗಳ ಆರೋಗ್ಯ ರಕ್ಷಣೆ, ಪ್ರಸೂತಿ ಹಾಗೂ ಸಂತಾನೋತ್ಪತ್ತಿಯ ಸಮಸ್ಯೆಗಳು, ಬೇಸಿಗೆಯಲ್ಲಿ ಹೈನುರಾಸುಗಳ ನಿರ್ವಹಣೆ, ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರುಕಟ್ಟೆ ಕುರಿತು ತರಬೇತಿಯಲ್ಲಿ ಮಹಿಳೆಯರಿಗೆ ತಿಳಿವಳಿಕೆ ನೀಡಲಾಯಿತು.

ಪೋಷಕಾಂಶಗಳ ಆಗರ ಹಾಲು

ಜನವಾಡ: ಪ್ರಸ್ತುತ ಸಾತ್ವಿಕ ಆಹಾರಕ್ಕೆ ಅಪಾರ ಬೇಡಿಕೆ ಇದೆ. ಹಾಲಿನಲ್ಲಿ ಭರಪೂರ ಪೋಷಕಾಂಶಗಳು ಇವೆ. ಶುದ್ಧ ಹಾಗೂ ಗುಣಮಟ್ಟದ ಹಾಲು ಉತ್ದಾದನೆ ಮಾಡಿ ರೈತರು ಲಾಭ ಪಡೆದುಕೊಳ್ಳಬೇಕು ಎಂದು ಡಾ. ಕ್ಷಯಕುಮಾರ ಸಲಹೆ ನೀಡಿದರು.

ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಹಾಲು ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.

ಹಾಲು ಪ್ರತಿಯೊಬ್ಬರ ಆಹಾರದ ಅವಿಭಾಜ್ಯ ಅಂಗವಾಗಿದೆ. ಶುದ್ದ ಹಾಲಿನ ಪರಿಚಯ, ಶುದ್ದ ಹಾಲಿನ ಉತ್ಪಾದನೆಯ ಅಗತ್ಯತೆ, ಹಾಲಿನ ಉತ್ಪಾದನೆಯಲ್ಲಿ ಅನುಸರಿಸಬೇಕಾದ ವಿಧಾನಗಳು, ಅಶುದ್ದ ಹಾಲಿನಿಂದ ಹರಡುವ ಕಾಯಿಲೆಗಳು ಮತ್ತು ಹೈನುರಾಸುಗಳಿಗೆ ಅಗತ್ಯವಿರುವ ಪೊಷಕಾಂಶಗಳ ಬಗ್ಗೆ ರೈತರು ತಿಳಿದುಕೊಳ್ಳಬೇಕು ಎಂದರು.

ಡಾ.ರಾಜೇಶ್ವರಿ ಮಾತನಾಡಿ, ಹಾಲಿನ ಮೌಲ್ಯವರ್ಧನೆ, ಮೌಲ್ಯವರ್ಧಿತ ಹಾಲಿನ ಉತ್ಪನ್ನಗಳಿಂದ ಲಾಭ ಗಳಿಸಬಹುದು. ಶುಧ ಹಾಲು- ಹೈನು ಉದ್ಯಮಕ್ಕೆ ಬುನಾದಿಯಾಗಬಲ್ಲದು ಎಂದರು.

ಡಾ.ಮಲ್ಲಿಕಾರ್ಜುನ ನಿಂಗದಳ್ಳಿ ಮಾತನಾಡಿದರು. ಕೆವಿಕೆ ಕ್ಷೇತ್ರ ವ್ಯವಸ್ಥಾಪಕಿ ವಾಘ, ಹಿರಿಯ ಸಹಾಯಕಿ ಅರ್ಚನಾ ಗಾದಗಿ, ತಾಂತ್ರಿಕ ಅಧಿಕಾರಿ ಸಿದ್ರಾಮಪ್ಪ ಮಣಿಗೆ, ಮಣ್ಣು ತಾಂತ್ರಿಕ ಅಧಿಕಾರಿ ಧನರಾಜ ವಿ. ಎಸ್. ದೇಸಿ ಸಂಯೋಜಕ ರಾಕೇಶ್ ವರ್ಮಾ, ಡಿಪ್ಲೊಮಾ ವಿದ್ಯಾಲಯದ ರಾಮ್ ದಾಸ ಮತ್ತು ಅನಿಲಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT