ಯೋಜನೆಗಳ ಯಶಸ್ವಿಗೆ ಜನರ ಸಹಭಾಗಿತ್ವ ಅಗತ್ಯ: ಭಗವಂತ ಖೂಬಾ

7
ಭಾರತ ಅಂಚೆ ಪಾವತಿ ಬ್ಯಾಂಕ್‌ ಉದ್ಘಾಟನೆ

ಯೋಜನೆಗಳ ಯಶಸ್ವಿಗೆ ಜನರ ಸಹಭಾಗಿತ್ವ ಅಗತ್ಯ: ಭಗವಂತ ಖೂಬಾ

Published:
Updated:
Deccan Herald

ಬೀದರ್: ‘ಜನರ ಸಹಭಾಗಿತ್ವದಿಂದ ಮಾತ್ರ ಸರ್ಕಾರದ ಯೋಜನೆಗಳು ಸಫಲವಾಗಲು ಸಾಧ್ಯ’ ಎಂದು ಸಂಸದ ಭಗವಂತ ಖೂಬಾ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ನಡೆದ ಭಾರತ ಅಂಚೆ ಪಾವತಿ ಬ್ಯಾಂಕ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಕೆಲಸ. ಅವುಗಳ ಲಾಭ ಪಡೆದುಕೊಳ್ಳುವುದು ದೀನ ದಲಿತರ ಕೆಲಸ ಎನ್ನುವ ಸೀಮಿತ ಆಲೋಚನೆ ಈಗಿಲ್ಲ. ದೇಶದ ಸಮಗ್ರ ಅಭಿವೃದ್ಧಿಯೇ ಸರ್ಕಾರದ ಧ್ಯೇಯವಾಗಿದೆ’ ಎಂದು ಹೇಳಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದಾಗ ದೇಶದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುವ ಟೀಕೆಗಳು ವ್ಯಕ್ತವಾದವು. ಆದರೆ, ಇಂದು ಅರ್ಥ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶಿ ಆರ್ಥಿಕತೆಯು ಶೇ 8.2ರಷ್ಟು ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಭಾರತ ಅಂಚೆ ಪಾವತಿ ಬ್ಯಾಂಕ್‌ ‘ಮನೆ ಮನೆಗೂ ತಮ್ಮ ಬ್ಯಾಂಕ್’ ಎನ್ನುವ ಧ್ಯೇಯವಾಕ್ಯ ಹೊಂದಿದೆ. ಇನ್ನು ಕ್ಯಾಶ್‌ಲೆಸ್ ವಹಿವಾಟಿಗೆ ಅಂಚೆ ಇಲಾಖೆಯೂ ಸೇರ್ಪಡೆಯಾಗಿದೆ. ಕಾಗದ ರಹಿತ ಬ್ಯಾಂಕಿಂಗ್‌ ಸೇವೆ ನೀಡುವತ್ತ ಇಲಾಖೆ ಹೆಜ್ಜೆ ಇಟ್ಟಿದೆ’ ಎಂದು ಬಣ್ಣಿಸಿದರು.

ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್‌ ಮಾತನಾಡಿ, ‘ಅಂಚೆ ಕಚೇರಿಯ ಮೂಲಕ ಆರ್ಥಿಕ ವ್ಯವಹಾರ ಸುಲಭವಾಗಿದೆ. ನೆಫ್ಟ್, ಆರ್‌ಟಿಜಿಎಸ್, ಆನ್‌ಲೈನ್ ಶಾಪಿಂಗ್, ವಿದ್ಯುತ್‌ ಬಿಲ್ ಪಾವತಿ ಹಾಗೂ ಹಣ ವರ್ಗಾವಣೆ ಮಾಡಬಹುದಾಗಿದೆ’ ಎಂದು ತಿಳಿಸಿದರು.

‘ಭಾರತ ಅಂಚೆ ಪಾವತಿ ಬ್ಯಾಂಕ್‌ನಿಂದ ಹಳ್ಳಿಯಲ್ಲಿ ವಾಸವಾಗಿರುವ ಜನರು ಸಣ್ಣ ಉಳಿತಾಯದ ಮೂಲಕ ಹಣ ಪಡೆಯಲು ಹಾಗೂ ಪಾವತಿಸಲು ಸಾಧ್ಯವಾಗಲಿದೆ. ಖಾತೆ ತೆರೆಯಲು ಆಧಾರ್‌ ಕಾರ್ಡ್ ಮತ್ತು ಮೊಬೈಲ್‌ ಸಂಖ್ಯೆ ಸಾಕು. ಗ್ರಾಹಕರ ಪ್ರತಿ ವ್ಯವಹಾರಕ್ಕೂ ಎಸ್‌ಎಂಎಸ್ ಬರುವುದರಿಂದ ವ್ಯವಹಾರ ಸ್ಪಷ್ಟವಾಗಿರುತ್ತದೆ’ ಎಂದು ಹೇಳಿದರು.

ಹುಬ್ಬಳ್ಳಿಯ ರೈಲ್ವೆ ಮೇಲ್ ಸರ್ವಿಸ್‌ನ ಅಧೀಕ್ಷಕ ಎಸ್‌.ಕೆ.ಮುರನಾಳ, ಕರ್ನಾಟಕ ಕಾಲೇಜಿನ ಎಂ.ಎಸ್‌.ಪಾಟೀಲ, ಸರ್ಕಾರಿ ಐಟಿಐನ ಶಿವಶಂಕರ ಟೋಕರೆ, ಜಿಲ್ಲಾ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್‌, ಅಂಚೆ ಇಲಾಖೆಯ ಅಧಿಕಾರಿ ಮಿರ್ಜಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !