ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಕೈಗಾರಿಕೆ ಕ್ಲಸ್ಟರ್‌ ಸ್ಥಾಪಿಸುವ ಗುರಿ ಇದೆ: ಶರಣಬಸಪ್ಪ

ಕೈಗಾರಿಕೆಗಳಿಗೆ ಒತ್ತು, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ–ಸಚಿವ ಶರಣಬಸಪ್ಪ
Published 30 ಸೆಪ್ಟೆಂಬರ್ 2023, 15:38 IST
Last Updated 30 ಸೆಪ್ಟೆಂಬರ್ 2023, 15:38 IST
ಅಕ್ಷರ ಗಾತ್ರ

ಬೀದರ್‌: ‘ಬರುವ ದಿನಗಳಲ್ಲಿ ಬೀದರ್‌ ಜಿಲ್ಲೆಯಲ್ಲಿ ಕೈಗಾರಿಕೆ ಕ್ಲಸ್ಟರ್‌ ಸ್ಥಾಪಿಸುವ ಗುರಿ ಇದೆ’ ಎಂದು ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ‘ಕಾಸಿಯಾ’ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು, ಹಣಕಾಸಿನ ನೆರವು’ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸ್ಥಾಪಿಸಿರುವಂತೆ ಬೀದರ್‌ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕೆ ಕ್ಲಸ್ಟರ್‌ ಸ್ಥಾಪಿಸಲಾಗುವುದು. ಈ ಜಿಲ್ಲೆಯಲ್ಲಿ ಇತಿಹಾಸ, ಸಂಸ್ಕೃತಿ ಬಿಂಬಿಸುವ ಅನೇಕ ಐತಿಹಾಸಿಕ ಕುರುಹುಗಳಿವೆ. ಬೀದರ್‌ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪ್ರಗತಿಗಾಗಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ಕೊಡಲಾಗುವುದು. ಇದರೊಂದಿಗೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಅನೇಕ ಜನ ಉದ್ಯೋಗ ಸಿಗಲಾರದೆ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾಋಎ. ಈ ಭಾಗದಲ್ಲಿ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸಿದರೆ ಅದನ್ನು ತಪ್ಪಿಸಬಹುದು. ಇದರಿಂದ ಜನರು ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಆರ್ಥಿಕವಾಗಿ ಈ ಪ್ರದೇಶ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.

ದೇಶದಲ್ಲಿ ದೊಡ್ಡ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದೇ ರೀತಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗಬೇಕಿದೆ. ಸಣ್ಣ ಕೈಗಾರಿಕೆಗಳು ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈಗಿನ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಿವೆ. ಸಣ್ಣ ಕೈಗಾರಿಕೆಗಳು ಬೆಳೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವುಗಳಿಗೆ ಪ್ರೋತ್ಸಾಹ ನೀಡಬೇಕು. ಹೊಸ ಉದ್ದಿಮೆ ಸ್ಥಾಪಿಸಲು ಮುಂದೆ ಬರುವ ಯುವ ಪೀಳಿಗೆಗೆ ಸಹಾಯ, ಸಹಕಾರ ನೀಡಬೇಕೆಂದು ಹೇಳಿದರು.

ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಎದುರಾಗುವ ತೊಡಕುಗಳನ್ನು ನಿವಾರಿಸಬೇಕು. ನಿಯಮಗಳನ್ನು ಇನ್ನಷ್ಟು ಸರಳಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಕೈಜೋಡಿಸಿ ಕೆಲಸ ನಿರ್ವಹಿಸಲು ಬದ್ಧ ಎಂದರು.

ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ, ರಾಜ್ಯ, ಕೇಂದ್ರ ಸರ್ಕಾರದಿಂದ ಉದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದರಿಂದ ದೇಶವು ಉತ್ಪಾದನೆಯ ಕ್ಷೇತ್ರದಿಂದ 10ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿದೆ. ಬೀದರ್‌ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹೆದ್ದಾರಿ ನಿರ್ಮಾಣವಾಗಿವೆ. ಉತ್ತಮ ರೈಲು ಸಂಪರ್ಕ ವ್ಯವಸ್ಥೆ ಇದೆ. ವಿಮಾನಯಾನ ಇದೆ. ಕಾರಂಜಾ ಜಲಾಶಯ ಇದೆ. ಹೊಸ ಉದ್ಯಮ ಸ್ಥಾಪಿಸಲು ಜನ ಮುಂದೆ ಬರಬೇಕು ಎಂದರು.

ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಬ್ಯಾಂಕ್‌ಗಳು ಹಾಗೂ ಸಂಬಂಧಿಸಿದ ಇಲಾಖೆಯವರು ಸಹಕಾರ ನೀಡಬೇಕು. ಬೀದರ್‌ ಜಿಲ್ಲೆ ಹಿಂದಿನಂತಲ್ಲ. ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಮುಂದೆ ಇದೆ. ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವವರು ಸ್ಥಳೀಯರಿಗೆ ಆದ್ಯತೆ ಕೊಡಬೇಕು. ಈಗಿರುವ ಕೈಗಾರಿಕೆಗಳಲ್ಲಿ ಹೊರಗಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ಯುವಕರಲ್ಲಿ ಪ್ರತಿಭೆ ಇದ್ದರೂ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಲು ನಿಯಮ ರೂಪಿಸಬೇಕೆಂದು ಹೇಳಿದರು.

ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸೊದ್ದೀನ್‌, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ೆಚ್.ಎಂ ಶ್ರೀನಿವಾಸ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಿನ ವ್ಯವಸ್ಥಾಪಕ ನಿರ್ದೇಶಕ ಮಹೇಶ ಜಿ., ಕಾಸಿಯಾ ಅಧ್ಯಕ್ಷ ಸಿ.ಎ ಶಶಿಧರ ಶೆಟ್ಟಿ, ‘ಸಿಡ್ಬಿ’ ಮೈಸೂರು ಶಾಖೆಯ ವ್ಯವಸ್ಥಾಪಕ ವಿಶ್ವನಾಥ ನಾಗರಾಳ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಜಿಲ್ಲಾಧ್ಯಕ್ಷ ಬಿ.ಜಿ. ಶೆಟಕಾರ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಾಲಶೆಟ್ಟಿ, ಎಸ್ಸಿ/ಎಸ್ಟಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಜಯಕುಮಾರ್‌ ಹಾಜರಿದ್ದರು.

‘ಎಸ್ಸಿ/ಎಸ್ಟಿಗಳಿಗೆ ಶೇ 24ರ ಬದಲು ಶೇ 2’ ‘ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಶೇ 24ರಷ್ಟು ಪ್ರೋತ್ಸಾಹ ಧನ ನೀಡಬೇಕು. ಆದರೆ ಶೇ 2ರಷ್ಟು ನೀಡಲಾಗುತ್ತಿದೆ. ಸರ್ಕಾರದ ಸವಲತ್ತುಗಳು ಈ ವರ್ಗದವರಿಗೆ ಸಿಗುತ್ತಿಲ್ಲ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೇ ಇದಕ್ಕೆ ಕಾರಣ. ಇದನ್ನು ಸರಿಪಡಿಸುವ ಕೆಲಸವಾಗಬೇಕು’ ಎಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಜಯಕುಮಾರ್‌ ಅವರು ಸಚಿವರ ಗಮನಕ್ಕೆ ತಂದರು. ‘ಬೀದರ್‌ ನಗರಸಭೆಯಲ್ಲಾದ ಹಗರಣ ಬೆಳಕಿಗೆ ತಂದವನೇ ನಾನು. ಇದರಿಂದ 8 ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಏನಾದರೂ ದೂರುಗಳು ಬಂದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಎಸ್ಸಿ/ಎಸ್ಟಿ ಜನರಿಗೆ ಆರ್ಥಿಕ ಸವಲತ್ತುಗಳನ್ನು ಒದಗಿಸಲು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT