ಬದುಕು ಕೊಟ್ಟ ಸಾವಯವ ಪುಡಿ ಬೆಲ್ಲ

ಬುಧವಾರ, ಮಾರ್ಚ್ 20, 2019
31 °C
ಎಂಟು ಟನ್ ಬೆಲ್ಲ ತಯಾರಿಸಿ ₹ 4. 40 ಲಕ್ಷ ಲಾಭದ ನೀರಿಕ್ಷೆಯಲ್ಲಿ ಸುನಿಲ್‍

ಬದುಕು ಕೊಟ್ಟ ಸಾವಯವ ಪುಡಿ ಬೆಲ್ಲ

Published:
Updated:
Prajavani

ಹುಲಸೂರ: ಪಟ್ಟಣದ ಯುವ ರೈತ ಸುನಿಲ್‍ಕುಮಾರ ಭುಜಂಗೆ ಅವರು, ಕಡಿಮೆ ನೀರು ಮತ್ತು ಅಂತರ ಬೆಳೆಗಳ ಸಹಾಯದಿಂದ ಕಡಿಮೆ ಇಳುವರಿ ಕಬ್ಬು ಬೆಳೆದು ಅದರಿಂದ ಸಾವಯವ ಬೆಲ್ಲ ತಯಾರಿಸಿ ಹೆಚ್ಚು ಲಾಭ ಗಳಿಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸದೇ ತಮ್ಮ ಹೊಲದಲ್ಲಿಯೇ ಬಕೆಟ್ ಬೆಲ್ಲ ಹಾಗೂ ಪುಡಿ ಬೆಲ್ಲ ತಯಾರಿಸುವ ಕಾಯಕ ಆರಂಭಿಸಿದ್ದಾರೆ.

ಸುನಿಲ್‍ ಅವರಿಗೆ ಎಂಟು ಎಕರೆ ಜಮೀನು ಇದೆ. ಈ ಪೈಕಿ ನಾಲ್ಕು ಎಕರೆಯಲ್ಲಿ ಪಟ್ಟಾ ಪದ್ಧತಿ ಪ್ರಕಾರ ಕಬ್ಬು ಬೆಳೆದಿದ್ದಾರೆ. ಇದರ ನಡುವೆ ಸೋಯಾಬಿನ್ ಮತ್ತು ತೊಗರೆಯನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ. ಇದು ಅವರು ಬೆಲ್ಲ ತಯಾರಿಕೆಯ ಖರ್ಚನ್ನು ನಿಭಾಯಿಸುವ ಬೆಳೆಯಾಗಿವೆ. ಜೊತೆಗೆ ತುಸು ಲಾಭವನ್ನೂ ತಂದುಕೊಟ್ಟಿವೆ.

ಕಬ್ಬು ಕಾರ್ಖಾನೆಗೆ ಸಾಗಿಸಿದರೆ ಹೆಚ್ಚೆಂದರೆ ಟನ್ನಿಗೆ ₹ 1,700 ರಿಂದ ₹ 1,800 ಬೆಲೆ ದೊರೆಯಬಹುದು. ಆದರೆ, ಸಾವಯವ ಬೆಲ್ಲ ಮಾಡಿದರೆ ಟನ್ನಿಗೆ ಸರಾಸರಿ 120 ಕೆಜಿಯಂತೆ ₹ 7,200  ಮೊತ್ತದ ಬೆಲ್ಲ ತಯಾರಾಗುತ್ತದೆ. ಪ್ರತಿ ಟನ್ನಿಗೆ ಕಟಾವು, ಸಾರಿಗೆ, ಬೆಲ್ಲ ತಯಾರಿಸಲು ಒಟ್ಟು ₹ 1,200 ಖರ್ಚು ತಗಲುತ್ತದೆ. ಕಾರ್ಖಾನೆಗೆ ಕಬ್ಬು ಸಾಗಿಸುವುದಕ್ಕಿಂತ ಪ್ರತಿ ಟನ್ನಿಗೆ ₹ 6 ಸಾವಿರ ಲಾಭ ಪಡೆಯಬಹುದು ಎಂಬುವುದು ಸುನಿಲ್ ಅವರ ಲೆಕ್ಕಾಚಾರ.

₹ 4.40 ಲಕ್ಷ ಲಾಭದ ನಿರೀಕ್ಷೆ: ‘1 ಕೆಜಿ ತೂಗುವ ಬಕೆಟ್ ಬೆಲ್ಲದ ದರ ₹ 50 ಹಾಗೂ ಪುಡಿ ಬೆಲ್ಲ ಕೆಜಿಗೆ ₹ 60 ರಂತೆ ಮಾರಾಟ ಮಾಡಲಾಗುತ್ತಿದೆ. ಎರಡು ಸೇರಿದಂತೆ ಒಟ್ಟು ಎಂಟು ಟನ್ ಬೆಲ್ಲವನ್ನು ಯಾವುದೇ ರಾಸಾಯನಿಕ ಬಳಸದೆ ತಯಾರಿಸಲಾಗಿದೆ. ಇಂತಹ ಬೆಲ್ಲಕ್ಕೆ ಬೇಡಿಕೆ ಇದ್ದು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಭಾಗಗಳಿಗೆ ಬೆಲ್ಲ ರವಾನೆ ಆಗುತ್ತಿದೆ. ನೇರವಾಗಿ ಗ್ರಾಹಕರಿಗೆ ಬೆಲ್ಲ ಪೂರೈಸುತ್ತಿದ್ದು, ₹ 4.40 ಲಕ್ಷ ಲಾಭದ ನೀರಿಕ್ಷೆ ಇದೆ‘ ಎಂದು ಸುನಿಲ್ ಹರ್ಷ ವ್ಯಕ್ತಪಡಿಸಿದರು.

‘ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಹುಲಸೂರಿನ ಕೃಷಿ ಅನುಭವಿ ಚಂದ್ರಶೇಖರ ಕಾಡಾದಿ ಅವರ ಮಾರ್ಗದರ್ಶನದಲ್ಲಿ ಬೆಲ್ಲ ತಯಾರಿಸುತ್ತಿದ್ದೇನೆ‘ ಎನ್ನುತ್ತಾರೆ ಸುನೀಲ್‌.

‘ಆಕಳಿನ ಸಗಣಿ ಮತ್ತು ಗೋಮೂತ್ರದಿಂದ ಘನ ಜೀವಾಮೃತ ತಯಾರಿಸಿ ಕಬ್ಬಿನ ಬೆಳೆಗೆ ಸಿಂಪಸುತ್ತೇನೆ. ಸತತ ಐದು ವರ್ಷದಿಂದ ಜಮೀನಿಗೆ ರಾಸಾಯನಿಕ ಗೊಬ್ಬರ ಉಣಸದೆ ನೈಸರ್ಗಿಕ ಪದ್ಧತಿ ಮೂಲಕ ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತೇನೆ‘ ಎಂದು ಹೇಳುತ್ತಾರೆ ಅವರು.

‘ಯುವ ರೈತರು ತಮ್ಮ ಪರಿಶ್ರಮಕ್ಕೆ ಸೂಕ್ತ ಬೆಲೆ ಸಿಗಲು ತಾವು ಉತ್ಪಾದಿಸಿದ ಕಬ್ಬು ಅಥವಾ ಇತರೆ ಬೆಳೆಗಳನ್ನು ವಿವಿಧ ಪ್ರಕ್ರಿಯೆಗೊಳಪಡಿಸಿ ಅದರಿಂದ ಅಧಿಕ ಲಾಭ ಪಡೆಯುವ ಪ್ರಯತ್ನ ಮಾಡಬೇಕು‘ ಎನ್ನುತ್ತಾರೆ ಅವರು.

*

ರೈತರು ಒಕ್ಕುಲುತನದಲ್ಲಿ ಬಂಡವಾಳ-ಲಾಭದ ಲೆಕ್ಕಾಚಾರ ಮಾಡಬೇಕು. ಆಗ ನಷ್ಟದ ಮಾತು ಇರಲ್ಲ. ಇದು ನೈಸರ್ಗಿಕ ಕೃಷಿ ಪದ್ಧತಿಯಿಂದ ಸಾಧ್ಯ.
-ಸುನಿಲ್ ಭುಜಂಗೆ, ಯುವ ರೈತ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !