ಶುಕ್ರವಾರ, ಜನವರಿ 17, 2020
22 °C
ಬಸವ ಸೇವಾ ಪ್ರತಿಷ್ಠಾನದಿಂದ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷಾಚರಣೆ

ಶರಣ ಉದ್ಯಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಸವ ಸೇವಾ ಪ್ರತಿಷ್ಠಾನ ಹಾಗೂ ಪ್ರಯಾವಿ ಆಸ್ಪತ್ರೆ ಸಹಯೋಗದಲ್ಲಿ ಇಲ್ಲಿಯ ಶರಣ ಉದ್ಯಾನದಲ್ಲಿ 2020 ಹೊಸ ವರ್ಷವನ್ನು ಸಾಮೂಹಿಕ ಇಷ್ಟಲಿಂಗ ಪೂಜೆಯ ಮೂಲಕ ವಿಶಿಷ್ಟವಾಗಿ ಸ್ವಾಗತಿಸಲಾಯಿತು.

ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟ ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಅವರು ಮಾತನಾಡಿ,‘ಜೀವಸಂಕುಲಕ್ಕೆ ಮಳೆ,ಬೆಳೆ,ಗಾಳಿ ಮೊದಲಾದ ಪಂಚಭೂತಗಳನ್ನು ಕರುಣಿಸಿರುವ ದೇವರನ್ನು ನೆನೆದು, ಕೃತಜ್ಞತೆ ಸಮರ್ಪಿಸುವ ಮೂಲಕ ಹೊಸ ವರ್ಷಕ್ಕೆ ಕಾಲಿರಿಸುವುದು ಸರಿಯಾದ ಸಂಸ್ಕೃತಿ. ಅದು ಭಾರತೀಯ ಶರಣ ಸಂಸ್ಕೃತಿಯ ತಿರುಳು’ ಎಂದು ಹೇಳಿದರು.

‘ಮೌಲ್ಯಾಧಾರಿತ ಆಚರಣೆಗೆ ಪ್ರೇರಣೆ ನೀಡಲು ಪ್ರತಿ ವರ್ಷ ಪ್ರಯಾವಿ ಆಸ್ಪತ್ರೆ ಸಹಯೋಗದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಆಚರಣೆಗಳಿಂದ ನಮ್ಮ ಪೀಳಿಗೆ ದಾರಿ ತಪ್ಪದಂತೆ ತಡೆಯಬಹುದಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ. ಇದೊಂದು ಮಾದರಿ ಕಾರ್ಯಕ್ರಮ’ ಎಂದು ಬಣ್ಣಿಸಿದರು.

ಡಾ. ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು. ರಮೇಶ ಮಠಪತಿ ಪ್ರಾಣಲಿಂಗ ಪೂಜೆ ಮಾಡಿಸಿದರು. ನೂರಾರು ಶರಣ-ಶರಣೆಯರು ಸಕಲ ಜೀವರಾಶಿಗಳಿಗೆ ಹೊಸವರ್ಷ ಕುಶಲತೆಯನ್ನು ತರಲಿ, ಮಳೆ-ಬೆಳೆಗಳು ಕಾಲಕ್ಕೆ ಸರಿಯಾಗಿ ಬರಲೆಂದು ಸಂಕಲ್ಪಿಸಿ, ಭಕ್ತಿ-ಭಾವದಿಂದ ಇಷ್ಟಲಿಂಗ ಪೂಜೆಯ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು.

ಅಶ್ವಿನಿ ರಾಜಕುಮಾರ ಹಿರೇಮಠ ನೇತೃತ್ವದಲ್ಲಿ ನಡೆದ ಭಕ್ತಿಗೀತೆಗಳು ಮತ್ತು ವಚನಗಳ ಭಜನೆಯಲ್ಲಿ ಸಭಿಕರು ಮಿಂದೆದ್ದರು. ಭಕ್ತಿಗೀತೆಗಳ ಮೇಲೆ ನೆರೆದವರೆಲ್ಲ ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.

ಉದ್ಯಮಿ ಗುರುನಾಥ ಕೊಳ್ಳೂರ, ಚಂದ್ರಶೇಖರ ಹೆಬ್ಬಾಳೆ, ಶಾಂತಕುಮಾರ ಗಾಯತೊಂಡ, ಜ್ಞಾನದೇವಿ ಬಬಚಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ. ಮಲ್ಲಿಕಾರ್ಜುನ ಚಟ್ನಳ್ಳಿ ಇದ್ದರು. ಅನುಪಮಾ ಎರೋಳಕರ್ ಗುರುಪೂಜೆ ನೆರವೇರಿಸಿದರು. ಡಾ. ಅಮರ ಎರೋಳಕರ್ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)