ಮಾತಿನ ಎದುರು ಗೌಣವಾಯಿತು ಅಭಿವೃದ್ಧಿ: ಈಶ್ವರ ಖಂಡ್ರೆ

ಸೋಮವಾರ, ಜೂನ್ 24, 2019
26 °C
ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಂದರ್ಶನ

ಮಾತಿನ ಎದುರು ಗೌಣವಾಯಿತು ಅಭಿವೃದ್ಧಿ: ಈಶ್ವರ ಖಂಡ್ರೆ

Published:
Updated:
Prajavani

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಹೈದರಾಬಾದ್‌ ಕರ್ನಾಟಕ ಕೇಸರಿಮಯವಾಗಿದೆ. ಮತದಾರರು ಪ್ರಭಾವಿಗಳನ್ನೇ ಸೋಲಿಸಿದ್ದಾರೆ. ಫಲಿತಾಂಶದ ನಂತರ ಪಕ್ಷದ ಮುಖಂಡರೊಂದಿಗೆ ಆತ್ಮಾವಲೋಕನದಲ್ಲಿ ತೊಡಗಿದ್ದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಒಂದಿಷ್ಟು ಬಿಡುವು ಮಾಡಿಕೊಂಡು ‘ಪ್ರಜಾವಾಣಿ’ಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

1. ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಪ್ರಮುಖ ಕಾರಣ ಏನು?
ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಪುಲ್ವಾಮಾ ದಾಳಿ ಹಾಗೂ ಬಹುಶ: ಮೋದಿ ಅಲೆಯ ಪ್ರಭಾವ ಇರಬಹುದು ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಎಲ್ಲವನ್ನೂ ಅರಿತುಕೊಳ್ಳಲು ಸ್ವಲ್ಪ ಸಮಯ ಬೇಕಾಗಲಿದೆ. ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಸೋಲಿನ ಹಿಂದಿನ ಕಾರಣ ಅರಿತುಕೊಳ್ಳುತ್ತಿದ್ದೇನೆ.
ಈ ಚುನಾವಣೆಯಲ್ಲಿ ಹಿಂದೂತ್ವ ಹಾಗೂ ರಾಷ್ಟ್ರೀಯತೆ ಪ್ರಾಮುಖ್ಯ ಪಡೆದವು. ಅಷ್ಟೇ ಎಲ್ಲ ಒಣ ಮಾತಿನ ಎದುರು ಅಭಿವೃದ್ಧಿಯ ವಿಷಯ ಮುನ್ನಲೆಗೆ ಬರಲಿಲ್ಲ. ಮತದಾರರು ಅಭಿವೃದ್ಧಿಯನ್ನು ಬದಿಗಿರಿಸಿ ಮತ ಚಲಾಯಿಸಿರುವುದು ಅಚ್ಚರಿ ಉಂಟು ಮಾಡಿದೆ.

2. ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲೇ ಮತಗಳು ಕಡಿಮೆ ಬರಲು ಕಾರಣವೇನು?
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಬಡವರಿಗೆ ಸರ್ಕಾರದ ಸಾವಿರಾರು ಮನೆಗಳನ್ನು ಹಂಚಿಕೆ ಮಾಡಿದ್ದೇನೆ. ಮೈತ್ರಿ ಸರ್ಕಾರದ ಬಹುತೇಕ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದೇನೆ. ಪ್ರತಿಯೊಂದು ಊರಿಗೂ ರಸ್ತೆ ನಿರ್ಮಾಣ ಮಾಡಿದ ಹೆಮ್ಮೆ ನನಗೆ ಇದೆ. ಅತಿಯಾಗಿ ನಂಬಿದವರೇ ನನ್ನ ಕೈಬಿಟ್ಟಿರುವುದು ಫಲಿತಾಂಶದ ವೇಳೆ ಬಹಿರಂಗವಾಗಿದೆ.

3. ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಗೆಲುವು ಏಕೆ ಸಾಧ್ಯವಾಗಲಿಲ್ಲ ?
ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಿಂದ 2014ರ ವರೆಗಿನ ಚುನಾವಣೆಗಳಲ್ಲಿ  ಗೆದ್ದ ಅಭ್ಯರ್ಥಿ ಕೂಡ ಪಡೆಯದಷ್ಟು ಮತಗಳು ನನಗೆ ಬಂದಿವೆ. ನನಗೆ 4.68 ಲಕ್ಷ ಮತಗಳು ಬಂದಿರುವುದು ಒಂದು ದಾಖಲೆ. ಇದರ ಹಿಂದೆ ಎಲ್ಲರ ಪರಿಶ್ರಮವೂ ಇದೆ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ಕಾರಣ ಜಿಲ್ಲೆಯ ಮೂವರು ಸಚಿವರು ತಮ್ಮ ತಮ್ಮ ಹಂತದಲ್ಲಿ ಪ್ರಚಾರ ಕಾರ್ಯ ಕೈಗೊಂಡು ನನ್ನ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರಯತ್ನ ಫಲಿಸಲಿಲ್ಲ.

4. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಅಂತ್ಯ ಕಂಡಿತೇ?
ಖಂಡ್ರೆ ಪರಿವಾರ ಮೊದಲಿನಿಂದ ಸಮಾಜದ ಹಿತ ಕಾಪಾಡಿಕೊಂಡು ಬಂದಿದೆ. ಈ ಬಗೆಗಿನ ಚರ್ಚೆ ಈಗ ಅಪ್ರಸ್ತುತ. ವೀರಶೈವ ಹಾಗೂ ಲಿಂಗಾಯತ ಒಂದೇ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗಾಗಿ ನಾನು ಆರಂಭದಿಂದಲೂ ಈ ವಿಷಯದಲ್ಲಿ ಅಂತರ ಕಾಯ್ದುಕೊಂಡು ಬಂದಿರುವೆ.

5. ಮುಂದಿನ ರಾಜಕೀಯ ತಂತ್ರ ಏನು?
ಲೋಕಸಭಾ ಚುನಾವಣೆಯಲ್ಲಿ ಆಗಿರುವ ಲೋಪಗಳನ್ನು ಅರಿತುಕೊಳ್ಳಲಾಗುವುದು. ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಇನ್ನಷ್ಟು ಬಲಪಡಿಸಲಾಗುವುದು. ಜಿಲ್ಲೆಯ ಜನ ನಾನು ರಾಷ್ಟ್ರರಾಜಕಾರಣಕ್ಕಿಂತ ರಾಜ್ಯರಾಜಕಾರಣದಲ್ಲೇ ಇರಬೇಕು ಎಂದು ಬಯಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ದಿಸೆಯಲ್ಲಿ ಹೆಚ್ಚಿನ ಸಮಯ ಮೀಸಲಿಡುವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !