ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರ ಖಂಡ್ರೆ ಶಕ್ತಿ ಪ್ರದರ್ಶನ; ರಣಬಿಸಿಲಲ್ಲೇ ಕಾಂಗ್ರೆಸ್‌ ಕಾರ್ಯಕರ್ತರಮೆರವಣಿಗೆ

Last Updated 2 ಏಪ್ರಿಲ್ 2019, 14:41 IST
ಅಕ್ಷರ ಗಾತ್ರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಗರದಲ್ಲಿ ಮಂಗಳವಾರ ಶಕ್ತಿ ಪ್ರದರ್ಶನ ಮಾಡಿದರು.

ರಣ ಬಿಸಿಲಲ್ಲೇ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು. ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕೆಇಬಿ ರಸ್ತೆ ಮಾರ್ಗವಾಗಿ ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ ಕಾಂಗ್ರೆಸ್ ಚಿಹ್ನೆ ಇರುವ ಧ್ವಜಗಳು ರಾರಾಜಿಸಿದವು. ಮಾಜಿ ಸಚಿವ ಭೀಮಣ್ಣ ಖಂಡ್ರೆ ಹಾಗೂ ಈಶ್ವರ ಖಂಡ್ರೆ ಅವರ ಭಾವಚಿತ್ರ ಇರುವ ಟಿ ಶರ್ಟ್, ‘ಜೈ ಈಶ್ವರ ಖಂಡ್ರೆ’ ಎಂದು ಬರೆದಿದ್ದ ಟೊಪ್ಪಿಗೆ, ಈಶ್ವರ ಖಂಡ್ರೆ ಭಾವಚಿತ್ರದ ಮುಖವಾಡ ಧರಿಸಿದ್ದ, ಕೊರಳಲ್ಲಿ ಹಸ್ತದ ಚಿನ್ಹೆಯ ಶಲ್ಯ, ಸಚಿವ ರಹೀಂಖಾನ್ ಹಾಗೂ ಈಶ್ವರ ಖಂಡ್ರೆ ಅವರ ಭಾವಚಿತ್ರ ಹೊಂದಿದ್ದ ಫಲಕ ಹಿಡಿದುಕೊಂಡಿದ್ದ ಕಾರ್ಯಕರ್ತರು ಗಮನ ಸೆಳೆದರು.

‘ಈಶ್ವರ ಖಂಡ್ರೆ ಜಿಂದಾಬಾದ್’, ‘ಜೀತೆಗಾ ಭಾಯಿ ಜೀತೆಗಾ ಈಶ್ವರ ಖಂಡ್ರೆ ಜೀತೆಗಾ’ ಎನ್ನುವ ಘೋಷಣೆಗಳನ್ನು ಹಾಕಿದರು. ಬಾಜಾ, ಭಜಂತ್ರಿ, ಡೊಳ್ಳು ಕುಣಿತ, ಧ್ವನಿವರ್ಧಕಗಳಲ್ಲಿ ಮೊಳಗಿದ ಗೀತೆಗಳು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದವು.

ಪ್ರಖರ ಬಿಸಿಲು ಇದ್ದ ಕಾರಣ ಮೆರವಣಿಗೆಯಲ್ಲಿ ಪಾಲ್ಗೊಂಡ ಬಹಳಷ್ಟು ಜನ ಟೊಪ್ಪಿಗೆ ಧರಿಸಿದ್ದರು. ಇನ್ನು ಅನೇಕರು ರುಮಾಲು, ಕಾಂಗ್ರೆಸ್ ಚಿನ್ಹೆ ಇದ್ದ ಶಲ್ಯವನ್ನು ತಲೆ ಮೇಲೆ ಹಾಕಿಕೊಂಡಿದ್ದರು. ಕೆಲವರು ಕೊಡೆಗಳ ಆಸರೆಯಲ್ಲೂ ಹೆಜ್ಜೆ ಹಾಕಿದರು.

ಮೆರವಣಿಗೆ ಮಾರ್ಗ ಮಧ್ಯೆ ಕಾರ್ಯಕರ್ತರು ಮರ, ಛಾವಣಿ ನೆರಳಲ್ಲಿ ಕೆಲ ಹೊತ್ತು ನಿಂತು ಮತ್ತೆ ಮುಂದಕ್ಕೆ ಸಾಗುತ್ತಿದ್ದದ್ದು ಕಂಡು ಬಂದಿತು. ಅನೇಕರು ರಸ್ತೆ ಬದಿಯ ತಳ್ಳು ಗಾಡಿಗಳಲ್ಲಿ ಲಿಂಬು ಶರಬತ್, ಕಲ್ಲಂಗಡಿ, ಐಸ್ ಕ್ರೀಂ ಸವಿದು ದಣಿವಾರಿಸಿಕೊಂಡರು.

ಕಾರ್ಯಕರ್ತರ ಅನುಕೂಲಕ್ಕಾಗಿ ಒಂದೆರಡು ಕಡೆ ಮಾತ್ರ ಟೆಂಟ್‌ಗಳನ್ನು ಹಾಕಲಾಗಿತ್ತು. ಎರಡೂ ಬದಿಗೆ ಪರಿವರ್ತನಾ ಸಮಾವೇಶದ ಕಟೌಟ್‌ಗಳನ್ನು ಅಳವಡಿಸಿದ್ದ, ಹೂವಿನಿಂದ ಅಲಂಕರಿಸಿದ್ದ ಹಾಗೂ ಮೇಲುಗಡೆ ನೆರಳಿನ ವ್ಯವಸ್ಥೆ ಮಾಡಿದ್ದ ತೆರೆದ ವಾಹನದಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಭ್ಯರ್ಥಿ ಈಶ್ವರ ಖಂಡ್ರೆ, ಸಚಿವರಾದ ರಾಜಶೇಖರ ಪಾಟೀಲ, ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಚಂದ್ರಶೇಖರ ಪಾಟೀಲ, ಜೇವರ್ಗಿ ಶಾಸಕ ಅಜಯಸಿಂಗ್, ಮಾಜಿ ಶಾಸಕ ಅಶೋಕ ಖೇಣಿ, ನಗರಸಭೆ ಮಾಜಿ ಅಧ್ಯಕ್ಷೆ ಫಾತಿಮಾ ಅನ್ವರ್ ಅಲಿ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಕೆಪಿಸಿಸಿ ಕಾರ್ಯದರ್ಶಿಗಳಾದ ಅಮೃತರಾವ್ ಚಿಮಕೋಡೆ, ಇರ್ಷಾದ್ ಪೈಲ್ವಾನ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಮುಖಂಡರಾದ ಚಂದ್ರಾಸಿಂಗ್, ಚಂದ್ರಕಾಂತ ಹಿಪ್ಪಳಗಾಂವ್, ಸಂಜಯ ಜಾಗೀರದಾರ, ಅಜಮತ್ ಪಟೇಲ್, ಚಂದ್ರಶೇಖರ ಚನಶೆಟ್ಟಿ, ರುಕ್ಮಾರೆಡ್ಡಿ ಪಾಟೀಲ ಮೊದಲಾದವರು ಇದ್ದರು.

ಕಾಂಗ್ರೆಸ್ ಮುಖಂಡರು ಮತದಾರರತ್ತ ಕೈಬೀಸಿದರೆ, ಅಭ್ಯರ್ಥಿ ಕೈಮುಗಿದು ಬೆಂಬಲ ಕೋರಿದರು. ಮೆರವಣಿಗೆ ಮಾರ್ಗದಲ್ಲಿ ಮಹಾ ಪುರುಷರ ವೃತ್ತಗಳಲ್ಲಿನ ಮೂರ್ತಿಗಳಿಗೆ ಈಶ್ವರ ಖಂಡ್ರೆ ಮಾಲಾರ್ಪಣೆ ಮಾಡಿ ಗೌರವಿಸಿದರು.

ಪರಿವರ್ತನಾ ಸಮಾವೇಶದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ನಂತರ ಈಶ್ವರ ಖಂಡ್ರೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾ ಅಧಿಕಾರಿ ಎಚ್.ಆರ್. ಮಹಾದೇವ ಅವರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಈ ವೇಳೆ ಇದ್ದರು.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶ ಕೂಡ ಶಕ್ತಿ ಪ್ರದರ್ಶನದ ವೇದಿಕೆ ಆಗಿತ್ತು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆಯ ಅಪಾರ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT